IPL 2023: ಅಜಿಂಕ್ಯಾ ರಹಾನೆ ಭರ್ಜರಿ ಅರ್ಧಶತಕ; ಸಿಎಸ್‌ಕೆ ಎದುರು ಮುಂಬೈ ಇಂಡಿಯನ್ಸ್‌ಗೆ ಮುಖಭಂಗ
ಶನಿವಾರ, ಏಪ್ರಿಲ್ 8ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ 158 ರನ್‌ಗಳ ಗುರಿ ಬೆನ್ನಟ್ಟಿದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 18.1 ಓವರ್‌ಗಳಲ್ಲಿ ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಸತತ ಎರಡನೇ ಗೆಲುವಿನ ನಗೆ ಬೀರಿತು. ಇನ್ನು ಮುಂಬೈ ಇಂಡಿಯನ್ಸ್ ತಂಡ ಸತತ ಎರಡನೇ ಸೋಲಿನ ಮುಖಭಂಗ ಅನುಭವಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ಡೆವೋನ್ ಕಾನ್ವೇ ಸೊನ್ನೆಗೆ ಔಟಾದ ನಂತರ, ಜೊತೆಯಾದ ರುತುರಾಜ್ ಗಾಯಕ್ವಾಡ್ ಮತ್ತು ಅಜಿಂಕ್ಯಾ ರಹಾನೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರುತುರಾಜ್ ಗಾಯಕ್ವಾಡ್ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 40 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ವಿರುದ್ಧ ಅಡಲು ಅವಕಾಶ ಪಡೆದ ಅಜಿಂಕ್ಯಾ ರಹಾನೆ ತವರಿನಂಗಳದಲ್ಲಿ ಬ್ಯಾಟಿಂಗ್ ಮಿಂಚು ಹರಿಸಿದರು. ಕೇವಲ 27 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 61 ರನ್ ಬಾರಿಸಿದರು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದರು. ಕೇವಲ 19 ಎಸೆತಗಳಲ್ಲಿ 50ರ ಗಡಿ ದಾಟಿದರು.

ಅಜಿಂಕ್ಯಾ ರಹಾನೆ ಔಟಾದ ನಂತರ ಬಂದ ಶಿವಂ ದುಬೆ 26 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಂಬಟಿ ರಾಯುಡು 16 ಎಸೆತಗಳಲ್ಲಿ 3 ಬೌಂಡರಿ ಸಮೇತ ಅಜೇಯ 20 ರನ್ ಗಳಿಸಿದರು.
ಇನ್ನು ಬೌಲಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಜೇಸನ್ ಬೆಹ್ರೆನ್‌ಡಾರ್ಫ್, ಪಿಯೂಷ್ ಚಾವ್ಲಾ ಮತ್ತು ಕಿಮಾರ್ ಕಾರ್ತಿಕೇಯ ತಲಾ ಒಂದೊಂದು ವಿಕೆಟ್ ಪಡೆದರು. ಉಳಿದಲ್ಲ ಬೌಲರ್‌ಗಳು ದುಬಾರಿಯಾದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು.

ಮುಂಬೈ ಇಂಡಿಯನ್ಸ್ ಪರ ಬ್ಯಾಟಿಂಗ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ನೀಡಿದರು. ಈ ಜೋಡಿ 4 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 38 ರನ್ ಜೊತೆಯಾಟ ನೀಡಿತು. ನಾಯಕ ರೋಹಿತ್ ಶರ್ಮಾ 13 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 21 ರನ್ ಗಳಿಸಿ ಔಟಾದರು.
ನಂತರ ಬಂದ ಕ್ಯಾಮೆರಾನ್ ಗ್ರೀನ್ 11 ಎಸೆತಗಳಲ್ಲಿ 1 ಬೌಂಡರಿ ಸಮೇತ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಸೂರ್ಯಕುಮಾರ್ ಯಾದವ್ ಕೇವಲ 1 ರನ್ ಗಳಿಸಿ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವಿಫಲರಾದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ತಿಲಕ್ ವರ್ಮಾ 18 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 22 ರನ್ ಗಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ಅರ್ಷದ್ ಖಾನ್ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನು ಟಿಮ್ ಡೇವಿಡ್ 22 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 31 ರನ್ ಬಾರಿಸಿದರು. ಟ್ರಿಸ್ಟಾನ್ ಸ್ಟಬ್ಸ್ 5 ರನ್, ಹೃತಿಕ್ ಶೋಕೆನ್ 13 ಎಸೆತಗಳಲ್ಲಿ 3 ಬೌಂಡರಿ ಸಮೇತ 18 ರನ್ ಗಳಿಸಿದರು.
ಇನ್ನು ಬೌಲಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ರವೀಂದ್ರ ಜಡೇಜಾ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದರು. ತುಷಾರ್ ದೇಶಪಾಂಡೆ 3 ಓವರ್‌ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರೆ, ಸಿಸಾಂಡ ಮಗಲ 4 ಓವರ್‌ಗಳಲ್ಲಿ 37 ರನ್ ನೀಡಿ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications