KKR vs RCB: ಕೊಹ್ಲಿ ಅರ್ಧಶತಕ ವ್ಯರ್ಥ, ಡಿಕೆ ಮತ್ತೆ ಫೇಲ್; ಕೆಕೆಆರ್ ವಿರುದ್ಧ 2ನೇ ಹೀನಾಯ ಸೋಲು

ಇಂದು ( ಏಪ್ರಿಲ್ 26 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 36ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ 21 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡು, ಎದುರಾಳಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 201 ರನ್‌ಗಳ ಗುರಿಯನ್ನು ನೀಡಿತು.
ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿದ್ದು 21 ರನ್‌ಗಳ ಅಂತರದಿಂದ ಹೀನಾಯ ಸೋಲು ಕಂಡಿದೆ. ಈ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟರ್ ರೈಡರ್ಸ್ ವಿರುದ್ಧ ಎರಡನೇ ಬಾರಿಗೆ ಶರಣಾಗಿದೆ.
ಹೌದು, ಏಪ್ರಿಲ್ 9ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದ ಮೊದಲ ಮುಖಾಮುಖಿ ಪಂದ್ಯದಲ್ಲಿ 81 ರನ್‌ಗಳ ಹೀನಾಯ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಪಂದ್ಯ ಸೇಡು ತೀರಿಸಿಕೊಳ್ಳಲು ಇರುವ ವೇದಿಕೆ ಎಂದೇ ಹೇಳಲಾಗಿತ್ತು. ಆದರೆ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ರಾಯಲ್ ಚಾಲೆಂಜರ್ಸ್ ಎಡವಿ ಮತ್ತೆ ಸೋತಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್: ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭಿಕ ಆಟಗಾರರಾಗಿ ಜೇಸನ್ ರಾಯ್ ಹಾಗೂ ಎನ್ ಜಗದೀಶನ್ ಕಣಕ್ಕಿಳಿದರು. ಜೇಸನ್ ರಾಯ್ ಅಬ್ಬರಿಸಿದರೆ, ಜಗದೀಶನ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು. ಜೇಸನ್ ರಾಯ್ 29 ಎಸೆತಗಳನ್ನು ಎದುರಿಸಿ 56 ರನ್ ಗಳಿಸಿದರೆ, ಜಗದೀಶನ್ 29 ಎಸೆತಗಳಲ್ಲಿ 27 ರನ್ ಗಳಿಸಿದರು. ಇನ್ನುಳಿದಂತೆ ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ 31 ರನ್, ನಾಯಕ ನಿತೀಶ್ ರಾಣಾ 21 ಎಸೆತಗಳಲ್ಲಿ 48 ರನ್, ಆಂಡ್ರೆ ರಸೆಲ್ 1 ರನ್, ರಿಂಕು ಸಿಂಗ್ 10 ಎಸೆತಗಳಲ್ಲಿ ಅಜೇಯ 18 ರನ್ ಗಳಿಸಿದರೆ, ಡೇವಿಡ್ 3 ಎಸೆತಗಳಲ್ಲಿ 12 ರನ್ ಚಚ್ಚಿ ಅಜೇಯರಾಗಿ ಉಳಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿಜಯ್ ಕುಮಾರ್ ವೈಶಾಖ್ ಎರಡು ವಿಕೆಟ್, ವನಿಂದು ಹಸರಂಗ ಎರಡು ವಿಕೆಟ್ ಹಾಗೂ ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ಆರ್‌ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಫಾಫ್ ಡು ಪ್ಲೆಸಿಸ್ ಆರಂಭಿಕರಾಗಿ ಕಣಕ್ಕಿಳಿದರು. ಕೊಹ್ಲಿ 54 ರನ್ ಬಾರಿಸಿದರೆ, ಫಾಫ್ 17 ರನ್ ಗಳಿಸಿ ನಿರ್ಗಮಿಸಿದರು. ಮೂರನೆ ಕ್ರಮಾಂಕದಲ್ಲಿ ಕಣಕ್ಕಿಳಿದಿ ಶಹಬಾಜ್ ಅಹ್ಮದ್ ಕೇವಲ 2 ರನ್ ಗಳಿಸಿದರೆ ಗ್ಲೆನ್ ಮ್ಯಾಕ್ಸ್‌ವೆಲ್ 5 ರನ್ ಗಳಿಸಿದರು. ಇನ್ನುಳಿದಂತೆ ಮಹಿಪಾಲ್ ಲೊಮ್ರೊರ್ 34, ದಿನೇಶ್ ಕಾರ್ತಿಕ್ 22, ಸುಯಶ್ ಪ್ರಭುದೇಸಾಯಿ 10, ವನಿಂದು ಹಸರಂಗ 5, ಡೇವಿಡ್ ವಿಲ್ಲಿ ಅಜೇಯ 11 ಹಾಗೂ ವಿಜಯ್‌ಕುಮಾರ್ ವೈಶಾಖ್ ಅಜೇಯ 13 ರನ್ ಗಳಿಸಿದರು.
ಹೀಗೆ ಇಂದಿನ ಪಂದ್ಯದಲ್ಲಿ ಲೊಮ್ರೊರ್ ಹೊರತುಪಡಿಸಿ ಬೇರೆ ಯಾರೂ ಸಹ ಸ್ಪೋಟಕ ಆಟವನ್ನಾಡಿ ಅಗತ್ಯವಿದ್ದ ರನ್ ಗಳಿಸದ ಕಾರಣ ತಂಡ ಸೋಲನ್ನು ಅನುಭವಿಸಿದೆ. ಅದರಲ್ಲಿಯೂ ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ. ಫಿನಿಷರ್ ಎಂದು ಮತ್ತೆ ಕರೆಸಿಕೊಳ್ಳಲು ಸಿಕ್ಕಿದ್ದ ಒಳ್ಳೆಯ ಅವಕಾಶವನ್ನು ಕೈಚೆಲ್ಲಿದ್ದಾರೆ.
ಹೌದು, 13 ಓವರ್‌ಗಳ ಮುಕ್ತಾಯದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 42 ಎಸೆತಗಳಲ್ಲಿ 80 ರನ್ ಬೇಕಿತ್ತು. ಆಗಷ್ಟೇ ಕಣಕ್ಕೆ ಇಳಿದಿದ್ದ ದಿನೇಶ್ ಕಾರ್ತಿಕ್‌ಗೆ ಇದು ಅಬ್ಬರಿಸಿ ಪಂದ್ಯ ಗೆಲ್ಲಿಸಿ ಕಳೆದ ಪಂದ್ಯಗಳಲ್ಲಿ ಆಗಿದ್ದ ಅವಮಾನಗಳನ್ನು ತೊಡೆದು ಹಾಕಲು ಸಿಕ್ಕಿದ್ದ ಉತ್ತಮ ಅವಕಾಶವಿದು. ಆದರೆ ಅದನ್ನೂ ಸಹ ದಿನೇಶ್ ಕಾರ್ತಿಕ್ ಬಳಸಿಕೊಂಡಿಲ್ಲ.
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಒಳ್ಳೆಯ ಬೌಲಿಂಗ್ ಅಟ್ಯಾಕ್ ಮಾಡಿತು. ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರೆ, ಸುಯಶ್ ಶರ್ಮಾ ಹಾಗೂ ಆಂಡ್ರೆ ರಸೆಲ್ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications