GT vs MI: ಪಾಂಡ್ಯ ಪಡೆ ಎದುರು ನಡೆಯಲಿಲ್ಲ ರೋಹಿತ್ ಬಾಯ್ಸ್ ಆಟ; 4ನೇ ಸೋಲು ಕಂಡ ಮುಂಬೈ!

ಇಂದು ( ಏಪ್ರಿಲ್ 25 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 35ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 55 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆರಿಸಿಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಗುಜರಾತ್ ಟೈಟನ್ಸ್ ಶುಭ್‌ಮನ್ ಗಿಲ್, ಅಭಿನವ್ ಮನೋಹರ್ ಹಾಗೂ ಡೇವಿಡ್ ಮಿಲ್ಲರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿದ್ದು ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 208 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು.
ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ಗುಜರಾತ್ ಟೈಟನ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ವೃದ್ಧಿಮಾನ್ ಸಹಾ ಹಾಗೂ ಶುಭ್‌ಮನ್ ಕಣಕ್ಕಿಳಿದರು. ಸಹಾ 4 ರನ್ ಗಳಿಸಿ ಔಟ್ ಆದರೆ ಶುಭ್‌ಮನ್ ಗಿಲ್ 34 ಎಸೆತಗಳಲ್ಲಿ 56 ರನ್ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 14 ಎಸೆತಗಳಲ್ಲಿ 13 ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಜಯ್ ಶಂಕರ್ 16 ಎಸೆತಗಳಲ್ಲಿ 19 ರನ್ ಕಲೆಹಾಕಿದರು. ಹೀಗೆ ಮಧ್ಯದಲ್ಲಿ ರನ್ ವೇಗದಲ್ಲಿ ಕುಸಿತ ಕಂಡಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಡೇವಿಡ್ ಮಿಲ್ಲರ್ ಹಾಗೂ ಅಭಿನವ್ ಮನೋಹರ್ ಆಸರೆಯಾದರು.
ಮಿಲ್ಲರ್ 22 ಎಸೆತಗಳಲ್ಲಿ 46 ರನ್ ಬಾರಿಸಿದರೆ, ಅಭಿನವ್ ಮನೋಹರ್ 21 ಎಸೆತಗಳಲ್ಲಿ 42 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ರಾಹುಲ್ ತೆವಾಟಿಯಾ 5 ಎಸೆತಗಳಲ್ಲಿ ಅಜೇಯ 20 ರನ್ ಹಾಗೂ ರಶೀದ್ ಖಾನ್ 1 ಎಸೆತದಲ್ಲಿ ಅಜೇಯ 2 ರನ್ ಬಾರಿಸಿದರು.
ಮುಂಬೈ ಇಂಡಿಯನ್ಸ್ ಪರ ಅರ್ಜುನ್ ತೆಂಡೂಲ್ಕರ್, ಜೇಸನ್ ಬೆಹ್ರೆಂಡ್ರಾಫ್, ರಿಲೆ ಮೆರೆಡಿತ್ ಹಾಗೂ ಕುಮಾರ್ ಕಾರ್ತಿಕೇಯ ತಲಾ ಒಂದೊಂದು ವಿಕೆಟ್ ಪಡೆದರೆ, ಪಿಯೂಷ್ ಚಾವ್ಲಾ ಎರಡು ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: ಬೃಹತ್ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಕಣಕ್ಕಿಳಿದರು. ಎರಡನೇ ಓವರ್‌ನ ಅಂತಿಮ ಎಸೆತದಲ್ಲಿಯೇ ನಾಯಕ ರೋಹಿತ್ ಶರ್ಮಾ ಔಟ್ ಆದರು. 2 ರನ್ ಗಳಿಸಿ ಶರ್ಮಾ ನಿರ್ಗಮಿಸಿದರು. ಹೀಗೆ ಆರಂಭಿಕ ಆಘಾತ ಅನುಭವಿಸಿದ ಮುಂಬೈ ಇಂಡಿಯನ್ಸ್‌ಗೆ ಚೇತರಿಸಿಕೊಂಡು ಗೆಲುವಿನ ಕಡೆ ವಾಲುವಂತಹ ಆಟವನ್ನು ಯಾರೂ ಸಹ ಆಡಲಿಲ್ಲ.
ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 13, ಕ್ಯಾಮರೂನ್ ಗ್ರೀನ್ 33, ತಿಲಕ್ ವರ್ಮಾ 2, ಸೂರ್ಯಕುಮಾರ್ ಯಾದವ್ 23, ಟಿಮ್ ಡೇವಿಡ್ ಡಕ್ಔಟ್, ನೇಹಲ್ ವಾಧೇರಾ 40, ಪಿಯಷ್ ಚಾವ್ಲಾ 18, ಅರ್ಜುನ್ ತೆಂಡೂಲ್ಕರ್ 13, ಜೇಸನ್ ಬೆಹ್ರೆಂಡ್ರಾಫ್ ಅಜೇಯ 3 ರನ್ ಹಾಗೂ ರಿಲೆ ಮೆರಡಿತ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಗುಜರಾತ್ ಟೈಟನ್ಸ್ ಪರ ನೂರ್ ಅಹ್ಮದ್ 3 ವಿಕೆಟ್, ಮೋಹಿತ್ ಶರ್ಮಾ ಹಾಗೂ ರಶೀದ್ ಖಾನ್ ತಲಾ ಎರಡು ವಿಕೆಟ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಪಡೆದರು. ಹೀಗೆ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಪಂದ್ಯದಲ್ಲಿ ಮಕಾಡೆ ಮಲಗಿದ್ದು ಹಾಗೂ ಡೆತ್ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟ ಮುಂಬೈ ಇಂಡಿಯನ್ಸ್ ಸತತವಾಗಿ ಎರಡನೇ ಸೋಲನ್ನು ಕಂಡಿದ್ದು, ಟೂರ್ನಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳಲ್ಲಿ ಸೋತು, 3 ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications