IPL 2023: ಪಾಂಡ್ಯ ನಾಯಕತ್ವ ಧೋನಿಯಂತೆಯೇ ಇದೆ ಎಂದ ಮಾಜಿ ಸಿಎಸ್‌ಕೆ ಆಟಗಾರ

ಐಪಿಎಲ್ 2023ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 31ರಂದು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.
ಗುಜರಾತ್ ಟೈಟಾನ್ಸ್ ಮೊದಲನೇ ಆವೃತ್ತಿಯಲ್ಲಿ ಚಾಂಪಿಯನ್ ಆಗುವ ಮೂಲಕ ಯಶಸ್ವೀ ತಂಡ ಎನಿಸಿಕೊಂಡಿದೆ. ಗುಜರಾತ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದಾರೆ. ಎಂಎಸ್ ಧೋನಿ ಅಭಿಮಾನಿಯಾಗಿರುವ ಪಾಂಡ್ಯ ಈ ಬಾರಿ ಮೊದಲನೇ ಪಂದ್ಯದಲ್ಲೇ ಸಿಎಸ್‌ಕೆ ತಂಡವನ್ನು ಎದುರಿಸುತ್ತಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ನರ್ ಆರ್ ಸಾಯಿ ಕಿಶೋರ್ ತಮ್ಮ ತಂಡದ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಲಕ್ಷಣಗಳ ವಿಷಯದಲ್ಲಿ ದಂತಕಥೆ ಎಂಎಸ್ ಧೋನಿಯನ್ನು ಹೋಲುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಯಿ ಕಿಶೋರ್ ಗುಜರಾತ್ ಟೈಟಾನ್ಸ್ ತಂಡಕ್ಕಾಗಿ ಆಡುವ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು.
"ಹಾರ್ದಿಕ್ ಪಾಂಡ್ಯ ಮತ್ತು ಎಂಎಸ್ ಧೋನಿ ಅವರು ವಿಷಯಗಳನ್ನು ನಿರ್ವಹಿಸುವ ರೀತಿಯಲ್ಲಿ ಬಹಳ ಹೋಲಿಕೆ ಇದೆ, ಇಬ್ಬರೂ ಮೈದಾನದಲ್ಲಿ ಸಾಕಷ್ಟು ಶಾಂತವಾಗಿರುತ್ತಾರೆ" ಎಂದು ಸಾಯಿ ಕಿಶೋರ್ ಹೇಳಿದ್ದಾರೆ. ಶುಕ್ರವಾರ ವರ್ಚುವಲ್ ಸಂವಾದದ ಅವಧಿಯಲ್ಲಿ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದರು.

ಯಶಸ್ಸು ಮತ್ತು ವೈಫಲ್ಯವನ್ನು ನಿಭಾಯಿಸುತ್ತಾರೆ
"ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ನಾನು ಇಷ್ಟಪಡುವ ವಿಚಾರವೆಂದರೆ ಅವರು ಯಶಸ್ಸು ಮತ್ತು ವೈಫಲ್ಯವನ್ನು ಸಮಾನವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿರುವುದು. ಆ ಗುಣ ಅವರಲ್ಲಿ ವಿಶಿಷ್ಟವಾಗಿದೆ. ಅವರ ಆಲೋಚನೆ ಅವರಿಗೆ ದೊಡ್ಡ ಶಕ್ತಿಯಾಗಿದೆ" ಎಂದು ಹೇಳಿದ್ದಾರೆ.
ಈ ಬಾರಿ ಮತ್ತೆ ಚಾಂಪಿಯನ್ ಆಗಲು ಕಳೆದ ವರ್ಷದ ಆಟವನ್ನು ಮತ್ತೆ ಅಂಗಳಕ್ಕೆ ತರಬೇಕಿದೆ ಎಂದು ಸಾಯಿ ಕಿಶೋರ್ ಹೇಳಿದರು. ಕಳೆದ ವರ್ಷ ನಾವು ಉತ್ತಮವಾಗಿ ಆಡಿದ್ದೇವೆ, ಹಾಲಿ ಚಾಂಪಿಯನ್ ಎನ್ನುವ ಸ್ಥಾನವನ್ನು ಉಳಿಕೊಳ್ಳುವುದು ಈಗ ನಮ್ಮ ನಿರ್ಧಾರಕ್ಕೆ ಬಿಟ್ಟದ್ದು. ಈ ಬಾರಿ ಕೂಡ ಉತ್ತಮವಾಗಿ ಆಡಿದರೆ, ಮತ್ತೆ ಚಾಂಪಿಯನ್ ಆಗಬಹುದು ಎಂದು ಹೇಳಿದರು.

ಇಂಪ್ಯಾಕ್ಟ್ ಪ್ಲೇಯರ್ ನಿಯಮ ಅನುಕೂಲ
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಎನ್ನುವ ಹೊಸ ನಿಯಮ, ದೇಶೀಯ ಆಟಗಾರರಿಗೆ ಹೆಚ್ಚು ಅವಕಾಶವನ್ನು ನೀಡಲು ಸಹಾಯ ಮಾಡುತ್ತದೆ ಎಂದು ಸಾಯಿಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
"ಇದು ಸೂಪರ್-ಸಬ್ ನಿಯಮದಂತಿದೆ, ಅಲ್ಲಿ ನಾವು ಬೌಲರ್ ಅಥವಾ ಬ್ಯಾಟ್ಸ್‌ಮನ್ ಅನ್ನು ಬಳಸಬಹುದು. ಇದು ಮೂಲತಃ 12 ಜನರೊಂದಿಗೆ ಆಡುವಂತಿದೆ. ನಾವು ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಈ ನಿಯಮದಲ್ಲಿ ಆಡಿದ್ದೇವೆ. ಒಂದೇ ಬದಲಾವಣೆಯೆಂದರೆ, ನಾವು ಇದನ್ನು 20 ನೇ ಓವರ್‌ವರೆಗೆ ಬಳಸಬಹುದು, ದೇಶೀಯ ಕ್ರಿಕೆಟ್‌ನಲ್ಲಿ ಇದನ್ನು 14 ನೇ ಓವರ್‌ಗೆ ನಿರ್ಬಂಧಿಸಲಾಗಿದೆ. 20 ಓವರ್‌ಗಳಲ್ಲಿ, ಅದನ್ನು ನಿಭಾಯಿಸಲು ತುಂಬಾ ಸುಲಭವಾಗಬೇಕು," ಎಂದು ಅವರು ಹೇಳಿದರು.
ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಯತ್ನಿಸುವುದಾಗಿ ಸಾಯಿ ಕಿಶೋರ್ ಹೇಳಿದ್ದಾರೆ. "ಭಾರತ ತಂಡದಲ್ಲಿ ಸಾಕಷ್ಟು ಎಡಗೈ ಸ್ಪಿನ್ನರ್‌ಗಳಿದ್ದಾರೆ. ಐಪಿಎಲ್ ನಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಗುಜರಾತ್ ಟೈಟಾನ್ಸ್ ಪರವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸ ಹೊಂದಿದ್ದೇನೆ" ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications