
ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಚಾಂಪಿಯನ್ ಯಾರು ಎಂಬುದು ತಿಳಿದುಬರಬೇಕಿತ್ತು. ಹೌದು, ನಿನ್ನೆ ( ಮೇ 28 ) ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವೆ ಆಯೋಜನೆಯಾಗಿದ್ದ ಫೈನಲ್ ಪಂದ್ಯ ಮಳೆಯಿಂದ ರದ್ದಾಗಿದೆ.
ಹೀಗಾಗಿ ಪಂದ್ಯವನ್ನು ಇಂದಿಗೆ ಮುಂದೂಡಲ್ಪಟ್ಟಿದ್ದು, ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿಯೇ ಇಂದು ಸಂಜೆ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಹೀಗೆ ರಿಸರ್ವ್ ಡೇನಂದು ಈ ಪಂದ್ಯ ಜರುಗಲಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಎರಡನೇ ಬಾರಿಗೆ ಚಾಂಪಿಯನ್ ಆಗುತ್ತಾ ಅಥವಾ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಹೀಗೆ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಕುತೂಹಲ ಹೆಚ್ಚಾಗಿ ಚರ್ಚೆಗಳು ಆರಂಭಗೊಂಡಿದ್ದು, ಎರಡೂ ತಂಡಗಳು ಈ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಯಾವ ರೀತಿಯ ಟ್ರ್ಯಾಕ್ ಹೊಂದಿವೆ ಹಾಗೂ ಮುಖಾಮುಖಿ ಪಂದ್ಯಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಇನ್ನು ಈ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರೀಡಾಂಗಣ ತವರು ನೆಲವಾಗಿರುವ ಗುಜರಾತ್ ಟೈಟನ್ಸ್ ತಂಡ ಇಲ್ಲಿ ಒಟ್ಟು 9 ಪಂದ್ಯಗಳಲ್ಲಿ ಸೆಣಸಾಡಿದ್ದು, 6 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಮೂರು ಪಂದ್ಯಗಳಲ್ಲಿ ಸೋತಿದೆ. ಈ ಗೆದ್ದ ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿ ಗೆದ್ದಿರುವ ಗುಜರಾತ್ ಟೈಟನ್ಸ್ ಎರಡು ಪಂದ್ಯಗಳನ್ನು ಚೇಸಿಂಗ್ ಮಾಡಿ ಗೆದ್ದಿದೆ.
ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಕ್ರೀಡಾಂಗಣದಲ್ಲಿ ಒಮ್ಮೆಯೂ ಯಶಸ್ಸು ಸಿಕ್ಕಿಲ್ಲ. ಈ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಈ ಮೂರೂ ಪಂದ್ಯಗಳಲ್ಲಿಯೂ ಸಹ ಧೋನಿ ಪಡೆ ಸೋತಿದೆ.
ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿರುವ ಒಟ್ಟು ಐಪಿಎಲ್ ಪಂದ್ಯಗಳು ಹಾಗೂ ಫಲಿತಾಂಶ: ಇಲ್ಲಿ ಇಲ್ಲಿಯವರೆಗೂ ಒಟ್ಟು 26 ಐಪಿಎಲ್ ಪಂದ್ಯಗಳು ಜರುಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡ ಒಟ್ಟು 13 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಚೇಸಿಂಗ್ ಮಾಡಿದ ತಂಡ 13 ಪಂದ್ಯಗಳಲ್ಲಿ ಗೆದ್ದಿದೆ.
ಮುಖಾಮುಖಿ ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಇಲ್ಲಿಯವರೆಗೂ ಒಟ್ಟು 4 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಈ ಪೈಕಿ ಗುಜರಾತ್ ಟೈಟನ್ಸ್ 3 ಪಂದ್ಯಗಳಲ್ಲಿ ಗೆದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಒಂದು ಪಂದ್ಯದಲ್ಲಿ ಗೆದ್ದಿದೆ.
ಮೊದಲಿಗೆ ಕಳೆದ ವರ್ಷದ ಲೀಗ್ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದಾಗ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲ್ಲಲು 170 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾಗಿದ್ದ ಗುಜರಾತ್ ಟೈಟನ್ಸ್ 19.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿ 3 ವಿಕೆಟ್‌ಗಳ ರೋಚಕ ಗೆಲುವನ್ನು ಕಂಡಿತ್ತು.
ಬಳಿಕ ಅದೇ ಆವೃತ್ತಿಯಲ್ಲಿ ಮತ್ತೊಂದು ಲೀಗ್ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದಾಗಲೂ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ್ದ ಗುಜರಾತ್ ಟೈಟನ್ಸ್ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿ 7 ವಿಕೆಟ್‌ಗಳ ಗೆಲುವನ್ನು ಕಂಡಿತ್ತು.
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮೂರನೇ ಬಾರಿಗೆ ಇತ್ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿಯೂ ಸಹ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿತ್ತು ಹಾಗೂ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಗುಜರಾತ್ ಟೈಟನ್ಸ್‌ಗೆ 179 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿ ಬೆನ್ನತ್ತುವಲ್ಲಿ ಯಶಸ್ವಿಯಾಗಿದ್ದ ಗುಜರಾತ್ ಟೈಟನ್ಸ್ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ 5 ವಿಕೆಟ್‌ಗಳ ಗೆಲುವನ್ನು ದಾಖಲಿಸಿತ್ತು.
ಇತ್ತೀಚೆಗಷ್ಟೆ ನಡೆದ ಈ ಬಾರಿಯ ಐಪಿಎಲ್ ಟೂರ್ನಿಯ ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲ್ಲಲು 173 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಗುಜರಾತ್ ಟೈಟನ್ಸ್ 157 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 15 ರನ್‌ಗಳ ಗೆಲುವನ್ನು ಕಂಡು ಅದೇ ಮೊದಲ ಬಾರಿಗೆ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದಿತ್ತು.