ಸದ್ಯ ನಡೆಯುತ್ತಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಏಪ್ರಿಲ್ 3ರ ಅಂತ್ಯದ ವೇಳೆಗೆ ಆರು ಪಂದ್ಯಗಳು ನಡೆದಿದ್ದು, ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 12 ರನ್‌ಗಳ ರೋಚಕ ಜಯ ಸಾಧಿಸುವುದರೊಂದಿಗೆ ಮೊದಲ ಗೆಲುವಿನ ಖಾತೆ ತೆರೆಯಿತು.
ಎಲ್‌ಎಸ್‌ಜಿ ವಿರುದ್ಧದ ಗೆಲುವು ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡವನ್ನು ಐಪಿಎಲ್ 2023ರ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿಸಿದೆ. ಈವರೆಗೆ ಎರಡು ಪಂದ್ಯಗಳಿಂದ 1 ಗೆಲುವು ಮತ್ತು 1 ಸೋಲಿನೊಂದಿಗೆ ಎರಡು ಅಂಕಗಳನ್ನು ಗಳಿಸಿದೆ.

ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ಸೋಮವಾರದ ಸೋಲಿನ ಬಳಿಕ ಒಂದು ಸ್ಥಾನ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಈವರೆಗೆ ಎರಡು ಪಂದ್ಯಗಳಿಂದ 1 ಗೆಲುವು ಮತ್ತು 1 ಸೋಲಿನೊಂದಿಗೆ 2 ಅಂಕಗಳನ್ನು ಗಳಿಸಿದೆ. ಆದರೆ ಸಿಎಸ್‌ಕೆಗಿಂತ ಉತ್ತಮ ನೆಟ್ ರನ್‌ರೇಟ್ ಹೊಂದಿದೆ.
IPL 2023: ಮಿಂಚಿದ ಗಾಯಕ್ವಾಡ್, ಮೊಯಿನ್ ಅಲಿ; ಲಕ್ನೋ ವಿರುದ್ಧ ಗೆದ್ದು ಬೀಗಿದ ಸಿಎಸ್‌ಕೆ
ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 72 ರನ್‌ಗಳಿಂದ ಸೋಲಿಸಿದ್ದ ರಾಜಸ್ಥಾನ ರಾಯಲ್ಸ್ 2023ರ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡವನ್ನು 8 ವಿಕೆಟ್ ಮತ್ತು 3.4 ಓವರ್ ಬಾಕಿ ಇರುವಂತಯೇ ಗೆಲುವು ಸಾಧಿಸಿದ್ದ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 1.981ರ ನೆಟ್ ರನ್‌ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.
2023ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ್ದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ 4ನೇ ಸ್ಥಾನದಲ್ಲಿದೆ. ಮಂಗಳವಾರ, ಏಪ್ರಿಲ್ 4ರಂದು ಹಾರ್ದಿಕ್ ಪಾಂಡ್ಯ ಪಡೆ ಇನ್ನೂ ಗೆಲುವಿನ ಖಾತೆ ತೆರೆಯದ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೆಣಸಾಡಲಿದೆ.

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಯಾರು ಮುಂದೆ?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಐಪಿಎಲ್ 2023ರಲ್ಲಿ ಸತತ ಎರಡು ಅರ್ಧಶತಕಗಳನ್ನು ಬಾರಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ರುತುರಾಜ್ ಗಾಯಕ್ವಾಡ್ ಆಡಿದ ಎರಡು ಪಂದ್ಯಗಳಿಂದ 183.9 ಸ್ಟ್ರೈಕ್‌ರೇಟ್‌ನಲ್ಲಿ 149 ರನ್ ಗಳಿಸಿದ್ದಾರೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕ ಕೈಲ್ ಮೇಯರ್ಸ್ ಕೂಡ ಸತತ ಅರ್ಧಶತಕ ಬಾರಿಸಿ 210 ರ ಸ್ಟ್ರೈಕ್‌ರೇಟ್‌ನೊಂದಿಗೆ 126 ರನ್ ಗಳಿಸಿ ಆರೆಂಜ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಯಾರು ಮುನ್ನಡೆ?
ಲಕ್ನೋ ಸೂಪರ್ ಜೈಂಟ್ಸ್ ವೇಗಿ ಮಾರ್ಕ್ ವುಡ್ ಅವರು ಈ ಬಾರಿಯ ಐಪಿಎಲ್‌ನಲ್ಲಿ ಈವರೆಗೆ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ತಮ್ಮ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐದು ವಿಕೆಟ್ ಪಡೆದ ಮಾರ್ಕ್ ವುಡ್, ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೂರು ವಿಕೆಟ್‌ಗಳನ್ನು ಪಡೆಯುವುದರ ಮೂಲಕ 2 ಪಂದ್ಯಗಳಿಂದ 7.87 ಸರಾಸರಿಯಲ್ಲಿ 8 ವಿಕೆಟ್ ಪಡೆದಿದ್ದಾರೆ.
ಇದೇ ವೇಳೆ, ಮಾರ್ಕ್ ವುಡ್ ಅವರ ಸಹ ಆಟಗಾರ ರವಿ ಬಿಷ್ಣೋಯಿ 2 ಪಂದ್ಯಗಳಿಂದ ಐದು ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸೋಮವಾರದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದರು. ಇನ್ನು ರಾಜಸ್ಥಾನ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.