LSG vs GT: 136 ರನ್ ಚೇಸ್ ಮಾಡಲಾಗದೇ ಪರದಾಡಿ ಸೋತ ಲಕ್ನೋ; ತವರಲ್ಲೇ ಮುಖಭಂಗ!

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 30ನೇ ಪಂದ್ಯದಲ್ಲಿ ಇಂದು ( ಏಪ್ರಿಲ್ 22 ) ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಎರಡೂ ತಂಡಗಳು ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದ ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 7 ರನ್‌ಗಳ ನೀರಸ ಗೆಲುವನ್ನು ಕಂಡಿದೆ.
ಇನ್ನು ಲಕ್ನೋನ ಅಟಲ್ ಬಿಹಾರಿ ವಾಜಪೇಯಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದಿರುವ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾಟ್ ಟೈಟನ್ಸ್ ದೊಡ್ಡ ಇನ್ನಿಂಗ್ಸ್ ಕಟ್ಟಲಾಗದೇ ರನ್ ಕಲೆಹಾಕಲು ಪರದಾಡಿತು. 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 135 ರನ್‌ಗಳನ್ನು ಗುಜರಾತ್ ಟೈಟನ್ಸ್ ಕಲೆಹಾಕಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 136 ರನ್‌ಗಳ ಸುಲಭ ಗುರಿಯನ್ನು ನೀಡಿತು.
ಅತ್ತ ಲಕ್ನೋ ಸೂಪರ್ ಜೈಂಟ್ಸ್ ಈ ಅಲ್ಪಮೊತ್ತದ ಗುರಿಯನ್ನೂ ಸಹ ಬೆನ್ನತ್ತಲಾಗದೇ ಮಕಾಡೆ ಮಲಗಿದೆ. 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 128 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್ ತವರಿನ ಸ್ಟೇಡಿಯಂನಲ್ಲಿಯೇ ಇಷ್ಟೊಂದು ಕಡಿಮೆ ಗುರಿಯನ್ನು ಬೆನ್ನತ್ತಲಾಗದೇ ಮುಖಭಂಗ ಅನುಭವಿಸಿದೆ.ಗುಜರಾತ್ ಟೈಟನ್ಸ್ ಪರ ವೃದ್ಧಿಮಾನ್ ಸಹಾ ಹಾಗೂ ಶುಭ್‌ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದರು.
ಈ ಪೈಕಿ ಶುಭ್‌ಮನ್ ಗಿಲ್ ಯಾವುದೇ ರನ್ ಗಳಿಸದೇ ಡಕ್ ಔಟ್ ಆದರೆ, ಸಹಾ 37 ಎಸೆತಗಳಲ್ಲಿ 47 ರನ್ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಹಾರ್ದಿಕ್ ಪಾಂಡ್ಯ 50 ಎಸೆತಗಳಲ್ಲಿ 66 ರನ್ ಬಾರಿಸಿದರು. ಇನ್ನುಳಿದಂತೆ ಅಭಿನವ್ ಮನೋಹರ್ 3, ವಿಜಯ್ ಶಂಕರ್ 10, ಡೇವಿಡ್ ಮಿಲ್ಲರ್ 6 ಹಾಗೂ ರಾಹುಲ್ ತೆವಾಟಿಯಾ ಅಜೇಯ 2 ರನ್ ಗಳಿಸಿದರು.
ಗುಜರಾತ್ ಟೈಟನ್ಸ್ ಪರ ವೃದ್ಧಿಮಾನ್ ಸಹಾ ಹಾಗೂ ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್‌ಮನ್ ಸಹ ಉತ್ತಮ ಆಟವನ್ನಾಡಲಿಲ್ಲ. ಪರಿಣಾಮ ಕಳಪೆ ಮೊತ್ತವನ್ನು ತಂಡ ಕಲೆಹಾಕಿದೆ. ಅತ್ತ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ಕೃನಾಲ್ ಪಾಂಡ್ಯ ಹಾಗೂ ಮಾರ್ಕಸ್ ಸ್ಟಾಯಿನಿಸ್ ತಲಾ ಎರಡು ವಿಕೆಟ್ ಪಡೆದರೆ, ನವೀನ್ ಉಲ್ ಹಕ್ ಹಾಗೂ ಅಮಿತ್ ಮಿಶ್ರಾ ತಲಾ ಒಂದೊಂದು ವಿಕೆಟ್ ಪಡೆದರು.
ಹೀಗೆ ಗುಜರಾತ್ ಟೈಟನ್ಸ್ ರನ್ ಗಳಿಸಲು ಪರದಾಡಿದರೆ ಅತ್ತ ಲಕ್ನೋ ಸೂಪರ್ ಜೈಂಟ್ಸ್ ಈ ಅಲ್ಪಮೊತ್ತವನ್ನು ಚೇಸ್ ಮಾಡಲು ಯತ್ನಿಸಿ ವಿಫಲಗೊಂಡು ಮುಖಭಂಗಕ್ಕೊಳಗಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕರಾಗಿ ನಾಯಕ ಕೆಎಲ್ ರಾಹುಲ್ ಹಾಗೂ ಕೈಲ್ ಮೇಯರ್ಸ್ ಕಣಕ್ಕಿಳಿದರು. ಈ ಪೈಕಿ ರಾಹುಲ್ 68 ರನ್ ಗಳಿಸಿದರಾದರೂ ಅದನ್ನು ಗಳಿಸಲು 61 ಎಸೆತಗಳನ್ನು ಎದುರಿಸಿ ನೀರಸ ಬ್ಯಾಟಿಂಗ್ ಮಾಡಿದರು.
ಅದರಲ್ಲೂ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ ಕೊನೆಯ ಓವರ್‌ವರೆಗೆ ಇದ್ದರೂ ಪಂದ್ಯವನ್ನು ಗೆಲ್ಲಿಸಲಾಗದೇ ಇದ್ದದ್ದು ಟ್ರೋಲ್‌ಗೆ ಒಳಗಾಗಿದೆ. ಇನ್ನುಳಿದಂತೆ ಕೈಲ್ ಮೇಯರ್ಸ್ 24, ಕೃನಾಲ್ ಪಾಂಡ್ಯ 23, ನಿಕೋಲಸ್ ಪೂರನ್ 1, ಆಯುಷ್ ಬಡೋನಿ 8, ಮಾರ್ಕಸ್ ಸ್ಟೋಯಿನಿಸ್ ಡಕ್ಔಟ್, ದೀಪಕ್ ಹೂಡಾ 2, ಪ್ರೇರಕ್ ಮಂಕದ್ ಹಾಗೂ ರವಿ ಬಿಷ್ಣೋಯಿ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಗುಜರಾತ್ ಟೈಟನ್ಸ್ ಪರ ಮೋಹಿತ್ ಶರ್ಮಾ ಹಾಗೂ ನೂರ್ ಅಹ್ಮದ್ ತಲಾ ಎರಡು ವಿಕೆಟ್‌ಗಳನ್ನು ಪಡೆದಿದ್ದು, ರಶೀದ್ ಖಾನ್ ಒಂದು ವಿಕೆಟ್ ಪಡೆದರು. ಇನ್ನು 57 ಎಸೆತಗಳಲ್ಲಿ ಗೆಲ್ಲಲು 53 ರನ್ ಬೇಕಿದ್ದಾಗ 9 ವಿಕೆಟ್‌ಗಳನ್ನು ಹೊಂದಿದ್ದ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯವನ್ನು ಕೈ ಚೆಲ್ಲಿದ್ದು ಹಾಸ್ಯಾಸ್ಪದವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications