
ಶಾರೂಖ್ ಖಾನ್ (9 ಕೋಟಿ ರೂಪಾಯಿ)
ದೇಶೀಯ ಕ್ರಿಕೆಟ್‌ನಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಗಮನಸೆಳೆದ ತಮಿಳುನಾಡು ಮೂಲದ ಬ್ಯಾಟರ್ ಶಾರೂಖ್ ಖಾನ್ ಕಳೆದ ಐಪಿಎಲ್ ಸೀಸನ್‌ನ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಬಿಕರಿಯಾದರು. 14ನೇ ಐಪಿಎಲ್ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ 11 ಪಂದ್ಯಗಳಲ್ಲಿ 134.51ರ ಸ್ಟ್ರೈಕ್‌ರೇಟ್‌ನಲ್ಲಿ 153 ರನ್ ಕಲೆಹಾಕಿದ ಶಾರೂಖ್ ಖಾನ್ ನಂತರದ ಆವೃತ್ತಿಯ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಹರಾಜಾಗಿದ್ದು ಇತಿಹಾಸ.
ಐಪಿಎಲ್ 2022ರ ಸೀಸನ್‌ನಲ್ಲಿ ಶಾರೂಖ್ ಖಾನ್‌ಗೆ 9 ಕೋಟಿ ರೂಪಾಯಿ ಬಿಡ್ ಮಾಡುವ ಮೂಲಕ ಪಂಜಾಬ್ ಕಿಂಗ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿದು. ಆದ್ರೆ ಶಾರೂಖ್ ಕೊಟ್ಟ ಮೊತ್ತಕ್ಕಾದ್ರೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡರು. 8 ಪಂದ್ಯಗಳಿಂದ 108.33 ಸ್ಟ್ರೈಕ್‌ರೇಟ್‌ನಲ್ಲಿ 153 ರನ್ ಕಲೆಹಾಕಿದರು.
ಇತ್ತೀಚಿನ ಸೈಯದ್ ಮುಷ್ತಾಕ್ ಅಲಿ 2022 ಟೂರ್ನಿಯಲ್ಲೂ ಶಾರೂಖ್ ಉತ್ತಮ ಪ್ರದರ್ಶನ ನೀಡಿಲ್ಲ. ಆರು ಪಂದ್ಯಗಳಲ್ಲಿ ತಮಿಳುನಾಡು ಬ್ಯಾಟರ್ 93.75 ಸ್ಟ್ರೈಕ್‌ರೇಟ್‌ನಲ್ಲಿ ಗಳಿಸಿದ್ದು ಕೇವಲ 45 ರನ್. ಹೀಗಾಗಿ ಪಂಜಾಬ್ ಕಿಂಗ್ಸ್ ಈ ಆಟಗಾರನನ್ನು ಮುಂದುವರಿಸುವುದು ಬಹುತೇಕ ಅನುಮಾನವಾಗಿದೆ.

ಶಾರ್ದೂಲ್ ಠಾಕೂರ್ (10.75 ಕೋಟಿ ರೂಪಾಯಿ)
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶಾರ್ದೂಲ್ ಠಾಕೂರ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರ. ಇದುವರೆಗೆ 75 ಪಂದ್ಯಗಳಿಂದ 82 ವಿಕೆಟ್ ಕಬಳಿಸಿರುವ ಶಾರ್ದೂಲ್ ಠಾಕೂರ್ 9.06 ಎಕಾನಮಿಯಲ್ಲಿ ವಿಕೆಟ್‌ಗಳನ್ನ ಪಡೆದಿದ್ದಾರೆ.
31 ವರ್ಷದ ಈ ಬೌಲರ್ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗಬಲ್ಲರು. ಅಂತರಾಷ್ಟ್ರೀಯ ಪಂದ್ಯಗಳಲ್ಲೂ ಮಿಂಚಿರುವ ಶಾರ್ದೂಲ್ 25 ಟಿ20 ಪಂದ್ಯಗಳಲ್ಲಿ 33 ವಿಕೆಟ್ ಪಡೆದಿದ್ದಾರೆ.
ಐಪಿಎಲ್ 2022ರ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಈತನನ್ನು ದುಬಾರಿ ಮೊತ್ತ ನೀಡಿ ಖರೀದಿಸಿತು. ಆದ್ರೆ ಶಾರ್ದೂಲ್ 14 ಪಂದ್ಯಗಳಲ್ಲಿ ಪಡೆದಿದ್ದು 15 ವಿಕೆಟ್‌ಗಳು. ಇಷ್ಟಲ್ಲದೆ 9.79 ಎಕಾನಮಿಯಲ್ಲಿ ಬೌಲಿಂಗ್ ದುಬಾರಿ ಎನಿಸಿದರು. ಬ್ಯಾಟಿಂಗ್‌ನಲ್ಲಿ 120 ರನ್ ಕಲೆಹಾಕಿದರು.
ಡೆಲ್ಲಿ ಕ್ಯಾಪಿಟಲ್ಸ್ 10.75 ಕೋಟಿ ನೀಡುವ ಮೂಲಕ ಬೌಲಿಂಗ್ ಆಲ್‌ರೌಂಡರ್ ಅನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಆದ್ರೆ ಶಾರ್ದೂಲ್ ತನ್ನ ಬೆಲೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲಗೊಂಡರು. ಹೀಗಾಗಿ ಮುಂಬರುವ ಆಟಗಾರರ ಹರಾಜಿಗೂ ಮುನ್ನ ಶಾರ್ದೂಲ್‌ರನ್ನ ಡೆಲ್ಲಿ ಕ್ಯಾಪಿಟಲ್ಸ್ ರಿಲೀಸ್ ಮಾಡುವ ಸಾಧ್ಯತೆಯಿದೆ.

ನಿಕೋಲಸ್ ಪೂರನ್ (10.75 ಕೋಟಿ ರೂಪಾಯಿ)
ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಹೆಸರಾದವರು. ಆದ್ರೆ ಇತ್ತೀಚೆಗೆ ಟಿ20 ವಿಶ್ವಕಪ್ ಸೂಪರ್ 12 ಹಂತವನ್ನೂ ಪ್ರವೇಶಿಸಲು ಸಾಧ್ಯವಾಗದೇ ಪೂರನ್ ನಾಯಕತ್ವದ ವೆಸ್ಟ್ ಇಂಡೀಸ್ ಭಾರೀ ಮುಖಭಂಗ ಎದುರಿಸಿತು.
ಇನ್ನು ಐಪಿಎಲ್ ವಿಚಾರಕ್ಕೆ ಬಂದ್ರೆ 2022ರ ಸೀಸನ್‌ನಲ್ಲಿ 14 ಪಂದ್ಯಗಳಲ್ಲಿ 144.34ರ ಸ್ಟ್ರೈಕ್‌ರೇಟ್‌ನಲ್ಲಿ 306 ರನ್ ಕಲೆಹಾಕಿದರು. ಆದ್ರೆ ತದನಂತರ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪೂರನ್ 10 ಪಂದ್ಯಗಳಲ್ಲಿ ಗಳಿಸಿದ್ದು 108 ರನ್‌ಗಳು ಮಾತ್ರ. ಇವರ ಕೆಟ್ಟ ಪ್ರದರ್ಶನ ಟಿ20 ವಿಶ್ವಕಪ್‌ನಲ್ಲೂ ಮುಂದುವರಿದಿದ್ದಲ್ಲದೆ ಕೇವಲ 25 ರನ್ ಕಲೆಹಾಕಿದರು.
ಟ್ರಿನಿಡಾಡ್ ಮೂಲದ ನಿಕೋಲಸ್ ಪೂರನ್ ಹೀಗೆ ಕಳಪೆ ಆಟವಾಡಿದ್ರೆ, ನ್ಯೂಜಿಲೆಂಡ್ ಆಟಗಾರ ಗ್ಲೆನ್ ಫಿಲಿಪ್ಸ್ ಅಬ್ಬರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೀಗಾಗಿ ಎಸ್‌ಆರ್‌ಎಚ್ 10.75 ಕೋಟಿ ಕೊಟ್ಟು ಖರೀದಿಸಿದ್ದ ಪೂರನ್‌ರನ್ನ ರಿಲೀಸ್ ಮಾಡಿ, ಗ್ಲೆನ್ ಫಿಲಿಪ್ಸ್ ಮೇಲೆ ಬಿಡ್ ಮಾಡುವ ಸಾಧ್ಯತೆಯಿದೆ.

ಮಯಾಂಕ್ ಅಗರ್ವಾಲ್ (12 ಕೋಟಿ)
ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ಬದಲಾವಣೆ ಮಾಡಿದ್ದು, ಟೀಂ ಇಂಡಿಯಾ ಓಪನರ್ ಶಿಖರ್ ಧವನ್‌ಗೆ ನಾಯಕತ್ವ ಪಟ್ಟ ಕಟ್ಟಿದೆ. ಈ ಮೂಲಕ ಮಯಾಂಕ್ ಅಗರ್ವಾಲ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದರ ಜೊತೆಗೆ ಮುಂದಿನ ಸೀಸನ್‌ಗೂ ಮುನ್ನ, 12 ಕೋಟಿ ರೂಪಾಯಿ ಬಿಡ್ ಮಾಡಿ ಖರೀದಿಸಿದ್ದ ಮಯಾಂಕ್ ಅಗರ್ವಾಲ್‌ರನ್ನ ಪಂಜಾಬ್ ಕಿಂಗ್ಸ್ ಕೈ ಬಿಡುವ ಸಾಧ್ಯತೆಯಿದೆ.
ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ 14 ಪಂದ್ಯಗಳಲ್ಲಿ 7 ಪಂದ್ಯ ಜಯಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ 6ನೇ ಸ್ಥಾನದಲ್ಲಿ ಐಪಿಎಲ್ 2022ರ ಸೀಸನ್ ಅಂತ್ಯಗೊಳಿಸಿತು. ನಾಯಕತ್ವದ ಒತ್ತಡವು ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಮೇಲೆ ಪ್ರಭಾವ ಬೀರಿತು. 13 ಪಂದ್ಯಗಳಲ್ಲಿ ಮಯಾಂಕ್ ಅಗರ್ವಾಲ್ 122.50 ಸ್ಟ್ರೈಕ್‌ರೇಟ್‌ನಲ್ಲಿ ಗಳಿಸಿದ್ದು ಕೇವಲ 196 ರನ್‌ಗಳು.
ಶಿಖರ್ ಧವನ್ ಮತ್ತು ಜಾನಿ ಬೈಸ್ಟ್ರೋವ್ ಓಪನರ್ ಆಗಿ ಕಣಕ್ಕಿಳಿದ ಪರಿಣಾಮ ಮಯಾಂಕ್ ಸ್ವತಃ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಶುರು ಮಾಡಿ ವಿಫಲಗೊಂಡರು. ಇತ್ತೀಚೆಗಷ್ಟೇ ಪಂಜಾಬ್ ಕಿಂಗ್ ನಾಯಕತ್ವ ಬದಲಿಸಿ ಶಿಖರ್ ಧವನ್‌ಗೆ ಪಟ್ಟ ಕಟ್ಟಿದೆ. ಹೀಗಾಗಿ ಐಪಿಎಲ್ 2023ರ ಆಟಗಾರರ ಹರಾಜಿಗೂ ಮುನ್ನ ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್‌ನಲ್ಲಿ ಉಳಿಯುವುದು ಅನುಮಾನ ಮೂಡಿಸಿದೆ.

ಇಶಾನ್ ಕಿಶನ್ (15.25 ಕೋಟಿ ರೂಪಾಯಿ)
ಐಪಿಎಲ್ 2022ರ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ಮುಂಬೈ ಇಂಡಿಯನ್ಸ್ ಬ್ಯಾಟರ್ ಇಶಾನ್ ಕಿಶನ್ ಆಟಗಾರರ ಹರಾಜಿನಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ಎದುರಾಳಿ ಮೇಲೆ ತನ್ನ ಸ್ಪೋಟಕ ಬ್ಯಾಟಿಂಗ್ ಮೂಲಕ ಆಕ್ರಮಣ ಮಾಡುವ ಇಶಾನ್ ಕಿಶನ್ ಇದುವರೆಗೆ ಐಪಿಎಲ್‌ನಲ್ಲಿ 75 ಪಂದ್ಯಗಳಲ್ಲಿ 132.34 ಸ್ಟ್ರೈಕ್‌ರೇಟ್‌ನೊಂದಿಗೆ 1870 ರನ್ ಕಲೆಹಾಕಿದ್ದಾರೆ.
ಐಪಿಎಲ್ 15ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಪಾಯಿಂಟ್ಸ್ ಟೇಬಲ್‌ನಲ್ಲಿ ತಳಮುಟ್ಟಿದ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 14 ಪಂದ್ಯಗಳಲ್ಲಿ 120.11 ಸ್ಟ್ರೈಕ್‌ರೇಟ್‌ನಲ್ಲಿ 418 ರನ್ ಕಲೆಹಾಕಿದರು.
ಆದ್ರೆ ಇಶಾನ್ ಕಿಶನ್‌ಗೆ ಅಷ್ಟು ದೊಡ್ಡ ಮೊತ್ತ ಕೊಟ್ಟು ಮುಂದಿನ ಐಪಿಎಲ್ ಸೀಸನ್‌ನಲ್ಲಿ ಮುಂದುವರಿಸಲು ಮುಂಬೈ ಇಂಡಿಯನ್ಸ್ ಮನಸ್ಸು ಮಾಡುವುದಿಲ್ಲ. ಪರ್ಸ್ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಇಶಾನ್ ಕಿಶನ್ ಕೈ ಬಿಡುವ ಸಾಧ್ಯತೆಯಿದ್ದು, ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಖರೀದಿಸಲು ಮುಂದಾಗಬಹುದು.
ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ ಎನ್ನಲಾಗಿರುವ ಐಪಿಎಲ್ 2023ರ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 10 ಫ್ರಾಂಚೈಸಿಗಳು ತೀವ್ರ ಸ್ಪರ್ಧೆ ಒಡ್ಡಲಿವೆ.


Click it and Unblock the Notifications












