Vyshak Vijaykumar: ಆರ್‌ಸಿಬಿ ತಂಡಕ್ಕೆ ಪದಾರ್ಪಣೆಗೂ ಮುನ್ನ ಸಲಹೆ ನೀಡಿದ್ದು ಯಾರು?; ಕನ್ನಡಿಗ ವೈಶಾಕ್ ಹೇಳಿದ್ದೇನು?
ಶನಿವಾರ, ಏಪ್ರಿಲ್ 15ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 23 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಈ ವೇಳೆ ಐಪಿಎಲ್ ಮತ್ತು ಆರ್‌ಸಿಬಿ ತಂಡದ ಪರ ಚೊಚ್ಚಲ ಪಂದ್ಯವಾಡಿದ ವೈಶಾಕ್ ವಿಜಯ್‌ಕುಮಾರ್ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿ, ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡಿದರು. ಗಾಯಾಳು ರಜತ್ ಪಾಟಿದಾರ್ ಬದಲಿಗೆ ಆರ್‌ಸಿಬಿ ಸೇರಿಕೊಂಡ ವೈಶಾಕ್, 2023ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು.

26ರ ಹರೆಯದ ವೈಶಾಕ್ ವಿಜಯ್‌ಕುಮಾರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಸೇರಿದಂತೆ ಮೂರು ವಿಕೆಟ್ ಪಡೆದು ಎದುರಾಳಿ ತಂಡದ ರನ್ ವೇಗಕ್ಕೆ ನಿಯಂತ್ರಣ ಹೇರಿದರು. ತಮ್ಮ ಚೊಚ್ಚಲ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡದ ಇನ್ನೋರ್ವ ಬೌಲರ್ ಮೊಹಮ್ಮದ್ ಸಿರಾಜ್ ಸಲಹೆ ನೀಡಿದ್ದರು ಎಂದು ಬೆಂಗಳೂರು ಮೂಲದ ಬೌಲರ್ ವೈಶಾಕ್ ವಿಜಯ್‌ಕುಮಾರ್ ಬಹಿರಂಗಪಡಿಸಿದರು.
"ಪಂದ್ಯಕ್ಕೂ ಮುನ್ನ ಮೊಹಮ್ಮದ್ ಸಿರಾಜ್‌ರೊಂದಿಗೆ ಮಾತನಾಡಿದ್ದು ಉತ್ತಮವಾಯಿತು. ಆತ ಅದ್ಭುತ ಬೌಲರ್ ಮತ್ತು ಕೆಲವು ವರ್ಷಗಳಿಂದ ಆರ್‌ಸಿಬಿ ತಂಡಕ್ಕೆ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಕೆಲವು ಸಲಹೆ ನೀಡಿದರು," ಎಂದರು.
"ಎದುರಾಳಿ ತಂಡದಲ್ಲಿ ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅದರ ಬಗ್ಗೆ ಚಿಂತಿಸಬೇಡಿ, ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಇಷ್ಟು ದಿನ ರಣಜಿ ತಂಡದಲ್ಲಿ ಏನು ಮಾಡಿದ್ದಿರೋ, ಅದನ್ನೆ ಮುಂದುವರೆಸಿ. ಮೈದಾನದಲ್ಲಿ ಆನಂದವಾಗಿರಿ," ಎಂದು ಮೊಹಮ್ಮದ್ ಸಿರಾಜ್ ಸಲಹೆ ನೀಡಿದರು ಎಂದು ವೈಶಾಕ್ ವಿಜಯ್‌ಕುಮಾರ್ ಬಹಿರಂಗಪಡಿಸಿದರು.

ಕರ್ನಾಟಕ ಪರ ದೇಶೀಯ ಕ್ರಿಕೆಟ್ ಆಡುತ್ತಿರುವ ವೇಗಿ ವೈಶಾಕ್ ವಿಜಯ್‌ಕುಮಾರ್ ಮೂಲತಃ ಬೆಂಗಳೂರಿನವರಾಗಿದ್ದು, ಹೀಗಾಗಿ ಆರ್‌ಸಿಬಿ ತಂಡದ ಆಡುವ ಕನಸು ಕಂಡಿದ್ದರು. ಕರ್ನಾಟಕ ಪರ 14 ಟಿ20 ಪಂದ್ಯಗಳಿಂದ 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆರ್‌ಸಿಬಿಗೆ ಸೇರಿದ ನಂತರ ಚೊಚ್ಚಲ ಪಂದ್ಯವು ಅವರಿಗೆ ವಿಶೇಷವಾಗಿತ್ತು. ಏಕೆಂದರೆ ವೈಶಾಕ್ ಪೋಷಕರು ತಮ್ಮ ಮಗನ ಮೊದಲ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದರು.
"ಬೆಂಗಳೂರಿನವನಾಗಿ ಆರ್‌ಸಿಬಿ ತಂಡಕ್ಕಾಗಿ ಆಡುವುದು ಒಂದು ಕನಸು, ಅದರ ಭಾಗವಾಗಿ ಪಂದ್ಯದಲ್ಲಿ ಆಡಿದ್ದಕ್ಕೆ ಅದೃಷ್ಟಶಾಲಿಯಾಗಿದ್ದೇನೆ. ನಾನು ಮೊದಲ ಎರಡು ಎಸೆತಗಳಿಗೆ ಹೆದರುತ್ತಿದ್ದೆ, ಆದರೆ ಒಂದೆರಡು ಓವರ್‌ಗಳ ನಂತರ, ನಾನು ಅರ್ಹನೆಂದು ಭಾವಿಸಿದೆ. ಈ ಕ್ಷಣ ನಾನು ಪ್ರಪಂಚದ ಮೇಲಿದ್ದೇನೆ ಎಂದು ನನಗೆ ಅನಿಸುತ್ತದೆ," ಎಂದು ವೈಶಾಕ್ ವಿಜಯ್‌ಕುಮಾರ್ ಅಭಿಪ್ರಾಯಪಟ್ಟರು.

"ಮುಖ್ಯ ಕೋಚ್ ಸಂಜಯ್ ಬಂಗಾರ್ ಮತ್ತು ಮೈಕ್ ಹೇಸನ್ ಸರ್ ಅವರು ಪಂದ್ಯದ ಮುನ್ನಾ ದಿನ ನನ್ನನ್ನು ಕರೆದು ಒಂದೆರಡು ಪ್ರಶ್ನೆಗಳನ್ನು ಕೇಳಿದರು. ನಂತರ ಅವರು ನಾಳೆ ನೀವು ನಿಮ್ಮ ಚೊಚ್ಚಲ ಪಂದ್ಯವನ್ನು ಆಡಲಿದ್ದೀರಿ ಎಂದು ಹೇಳಿದಾಗ, ನಾನು ಮೂಕವಿಸ್ಮಿತನಾಗಿದ್ದೆ," ಎಂದು ತಮ್ಮ ಅನುಭವವನ್ನು ವೈಶಾಕ್ ವಿಜಯ್‌ಕುಮಾರ್ ಹಂಚಿಕೊಂಡರು.
ಆರ್‌ಸಿಬಿ ತಂಡ ತನ್ನ ಐದನೇ ಪಂದ್ಯವನ್ನು ಸೋಮವಾರ, ಏಪ್ರಿಲ್ 17ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತವರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದ್ದು, ಮತ್ತೊಮ್ಮೆ ವೈಶಾಕ್ ವಿಜಯ್‌ಕುಮಾರ್ ಅವರು ಪಂದ್ಯ ವಿಜೇತ ಪ್ರದರ್ಶನ ನೀಡಲಿದ್ದಾರೆ ಎಂಬುದು ಆರ್‌ಸಿಬಿ ಅಭಿಮಾನಿಗಳ ಆಶಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications