
2023ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ದಿನಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 31ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯದಿಂದ ಅದ್ಧೂರಿ ಚಾಲನೆ ಸಿಗಲಿದೆ.
ಇದೇ ವೇಳೆ, ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 16ನೇ ಋತುವಿನ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಹಿನ್ನಡೆ ಎದುರಿಸುತ್ತಿದೆ. ಏಕೆಂದರೆ ಮುಂಬೈ ಇಂಡಿಯನ್ಸ್ ತಂಡದ ಮತ್ತೊಬ್ಬ ಸ್ಟಾರ್ ವೇಗಿ ಇಡೀ ಐಪಿಎಲ್ ಪಂದ್ಯಾವಳಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಆಸ್ಟ್ರೇಲಿಯದ ವೇಗಿ ಝೈ ರಿಚರ್ಡ್‌ಸನ್ ತಮ್ಮ ಪುನರಾಗಮನ ಪಂದ್ಯದಲ್ಲಿ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದು, ವರದಿಗಳ ಪ್ರಕಾರ, ಅವರು ಐಪಿಎಲ್ 2023ರ ಸಮಯದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
'ಈತನಿಗಾಗಿ ಪ್ರಾಣ ನೀಡಲು ನಾವು ಸಿದ್ಧ' ಎಂದ ಪಾಕಿಸ್ತಾನ ಕ್ರಿಕೆಟಿಗ ಶಾನ್ ಮಸೂದ್
ಝೈ ರಿಚರ್ಡ್ಸನ್ ಗಾಯವು ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಆಘಾತ ನೀಡಿದಂತಾಗಿದೆ. ಐದು ಚಾಂಪಿಯನ್ಸ್ ಈಗಾಗಲೇ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಜ್ಜಾಗಿರುವ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಿಂದಾಗಿ ವೇಗದ ಬೌಲಿಂಗ್ ವಿಭಾಗ ಸೊರಗಿದೆ.
ಇನ್ನು ಹರಾಜಿನಲ್ಲಿ 1.5 ಕೋಟಿ ರೂ.ಗೆ ಖರೀದಿಸಿದ್ದ ಝೈ ರಿಚರ್ಡ್‌ಸನ್ ಕೂಡ ಹೊರಗುಳಿದರೆ, ತಂಡದ ಪ್ರದರ್ಶನಕ್ಕೆ ಪೆಟ್ಟು ಬೀಳಲಿದೆ. ಸದ್ಯದ ವರದಿಯ ಪ್ರಕಾರ, 2023ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುವುದು ಅಸಂಭವವಾಗಿದೆ.

ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿಯಲ್ಲಿ, ಝೈ ರಿಚರ್ಡ್‌ಸನ್ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಸಮಯದಲ್ಲಿ ಮಂಡಿನೋವಿಗೆ ತುತ್ತಾಗಿ ಜನವರಿ 4ರಿಂದ ಯಾವುದೇ ಪಂದ್ಯವನ್ನು ಆಡಿಲ್ಲ ಎಂದು ಬಹಿರಂಗಪಡಿಸಲಾಗಿದೆ. ಇತ್ತೀಚೆಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಅವರು, ಕ್ಲಬ್ ಫ್ರೀಮ್ಯಾಂಟಲ್‌ಗಾಗಿ 50-ಓವರ್‌ಗಳ ಪಂದ್ಯವನ್ನು ಆಡುತ್ತಿದ್ದರು. ಇದೀಗ ಮತ್ತೆ ಮಂಡಿರಜ್ಜುವಿಗೆ ತುತ್ತಾಗಿದ್ದು, ಅದರ ಚೇತರಿಕೆಯು ಮತ್ತೊಂದು ವಿಸ್ತೃತ ಅವಧಿಯವರೆಗೆ ಕ್ರಿಕೆಟ್‌ನಿಂದ ದೂರವಿಡಬಹುದು.
ಐಪಿಎಲ್ ಸಮಯದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ರಿಚರ್ಡ್‌ಸನ್ ಅನುಪಸ್ಥಿತಿಯಲ್ಲಿ ವೇಗದ ವಿಭಾಗವನ್ನು ಮುನ್ನಡೆಸಲು ಮುಂಬೈ ಇಂಡಿಯನ್ಸ್ ತಂಡ ಇದೀಗ ಜೋಫ್ರಾ ಆರ್ಚರ್, ಕ್ಯಾಮೆರಾನ್ ಗ್ರೀನ್ ಮತ್ತು ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು ಅವಲಂಬಿಸಬೇಕಾಗಿದೆ. ಆದರೆ, ಲೀಗ್‌ನ 16ನೇ ಆವೃತ್ತಿಯ ಆರಂಭಕ್ಕೂ ಮುನ್ನ ಒಂದೆರಡು ಬದಲಿ ಆಟಗಾರರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯೂ ಇದೆ.
ಇದೇ ವೇಳೆ, ಮಾರ್ಚ್ 17ರಿಂದ ಪ್ರಾರಂಭವಾಗುವ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾದ ತಂಡದಲ್ಲಿ ಝೈ ರಿಚರ್ಡ್‌ಸನ್ ಬದಲಿಗೆ ನಾಥನ್ ಎಲ್ಲಿಸ್ ಅವರನ್ನು ಆಯ್ಕೆ ಮಾಡಲಾಗಿದೆ. ಅತ್ತ ಮುಂಬೈ ಇಂಡಿಯನ್ಸ್ ಸ್ಟಾರ್ ವೇಗಿ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಮತ್ತು ಐಪಿಎಲ್ ಪಂದ್ಯಾವಳಿ ಪ್ರಾರಂಭವಾಗುವ ಮುನ್ನ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದೆ.