ಗುರುವಾರ, ಏಪ್ರಿಲ್ 13ರಂದು ಮೊಹಾಲಿಯಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 18ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಕೊನೆಯ ಓವರ್‌ನಲ್ಲಿ 6 ವಿಕೆಟ್‌ಗಳಿಂದ ಗೆದ್ದು ಬೀಗಿತು.
ಗುಜರಾತ್ ಟೈಟನ್ಸ್ ತಂಡ ಐಪಿಎಲ್‌ನಲ್ಲಿ ಬಹಳ ಕಡಿಮೆ ಇತಿಹಾಸ ಹೊಂದಿದೆ, ಕಳೆದ 2022ರ ಋತುವಿನಲ್ಲಿ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡಿ ಅಂತಿಮವಾಗಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು.

ಗುಜರಾತ್ ಟೈಟನ್ಸ್ ತಂಡ ವಿಶೇಷವಾಗಿ ಗುರಿಯನ್ನು ಬೆನ್ನಟ್ಟುವಾಗ ಪಂದ್ಯವನ್ನು ಅಂತಿಮ ಓವರ್‌ಗೆ ಕೊಂಡೊಯ್ಯುವ ಅಭ್ಯಾಸವನ್ನು ರೂಢಿಸಿಕೊಂಡಿದೆ. ಕಡಿಮೆ ಮೊತ್ತದ ಗುರಿ ಚೇಸಿಂಗ್ ಮಾಡುವಾಗ ಬ್ಯಾಟರ್‌ಗಳು ನಿಧಾನಗತಿ ಆಟದಿಂದ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಠಿಣವಾಗಿ ಗೆಲ್ಲುತ್ತಿದ್ದಾರೆ.
ಗುರುವಾರ ಮೊಹಾಲಿಯಲ್ಲಿ ನಡೆದ ಐಪಿಎಲ್ 2023ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 154 ರನ್‌ಗಳ ಗುರಿ ಬೆನ್ನಟ್ಟಿ, ಒಂದು ಎಸೆತ ಬಾಕಿ ಇರುವಾಗಲೇ ಆರು ವಿಕೆಟ್‌ಗಳ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ಬಳಗ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿತು.
ಇದೀಗ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತನ್ನ ತಂಡದ ಬ್ಯಾಟರ್‌ಗಳು ಪಂದ್ಯವನ್ನು ಅಂತಿಮ ಓವರ್‌ಗೆ ಕೊಂಡೊಯ್ದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಶುಭ್ಮನ್ ಗಿಲ್ 49 ಎಸೆತಗಳಲ್ಲಿ 67 ರನ್ ಬಾರಿಸಿದಾಗ ಹಾಲಿ ಚಾಂಪಿಯನ್ ತಂಡ ಆರಾಮದಾಯಕ ಗುರಿ ಬೆನ್ನಟ್ಟುವ ಹಾದಿಯಲ್ಲಿದ್ದರು.

19ನೇ ಓವರ್‌ನಲ್ಲಿ ಪಂಜಾಬ್ ವೇಗಿ ಅರ್ಶ್‌ದೀಪ್ ಸಿಂಗ್ ಕೇವಲ ಆರು ರನ್‌ಗಳನ್ನು ಬಿಟ್ಟುಕೊಟ್ಟ ನಂತರ, ಗುಜರಾತ್ ಗೆಲುವಿಗೆ ಅಂತಿಮ ಓವರ್‌ನಲ್ಲಿ ಏಳು ರನ್‌ಗಳ ಅವಶ್ಯಕತೆ ಇತ್ತು. ಈ ವೇಳೆ ಶುಭ್ಮನ್ ಗಿಲ್ ರನ್-ಔಟ್ ಜೀವದಾನ ಪಡೆದರು. ಆದರೆ ನಂತರದ ಎಸೆತದಲ್ಲಿ ಸ್ಯಾಮ್ ಕರ್ರಾನ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಒತ್ತಡ ಹೇರಿದರು.
ನಂತರ ಕೊನೆಯ ಎರಡು ಎಸೆತಗಳಲ್ಲಿ 4 ರನ್‌ಗಳು ಅಗತ್ಯವಿದ್ದಾಗ, ಗುಜರಾತ್ ಟೈಟನ್ಸ್ ಆಲ್‌ರೌಂಡರ್ ರಾಹುಲ್ ತೆವಾಟಿಯಾ ಬೌಂಡರಿ ಗಳಿಸುವ ಮೂಲಕ ಜಯ ತಂದುಕೊಟ್ಟರು.
ಪಂದ್ಯದ ನಂತರ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, "ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದೆವು. ಪಂದ್ಯವು ಕೊನೆಯವರೆಗೂ ತೆಗೆದುಕೊಳ್ಳುತ್ತದೆ ಅಂದುಕೊಂಡಿರಲಿಲ್ಲ. ಹೀಗಾಗಿ ನಾನು ಬ್ಯಾಟರ್‌ಗಳನ್ನು ಪ್ರಶಂಸಿಸುವುದಿಲ್ಲ," ಎಂದರು.

"ಈ ಪಂದ್ಯದಿಂದ ನಾವು ಕಲಿಯಲು ಖಂಡಿತವಾಗಿಯೂ ಬಹಳಷ್ಟಿದೆ. ಅದು ಕ್ರೀಡೆಯ ಸೊಬಗು, ಅದು ಮುಗಿಯುವವರೆಗೂ ಮುಗಿಯುವುದಿಲ್ಲ. ನಾವು ಡ್ರಾಯಿಂಗ್ ಬೋರ್ಡ್‌ಗೆ ಹಿಂತಿರುಗುತ್ತೇವೆ. ಮಧ್ಯಮ ಓವರ್‌ಗಳಲ್ಲಿ ನಾವು ಆಕ್ರಮಣಕಾರಿಯಾಗಿ ಆಡಲು ಯೋಜಿಸಬೇಕಿದೆ," ಎಂದು ಗುರುವಾರ ರಾತ್ರಿ ಪಂದ್ಯದ ನಂತರದ ಹಾರ್ದಿಕ್ ಪಾಂಡ್ಯ ಹೇಳಿದರು.
"ವಿಕೆಟ್ ಉತ್ತಮವಾಗಿತ್ತು ಆದರೆ ಮಣ್ಣಿನ ಮತ್ತು ವಿಕೆಟ್ ಗಡಸುತನದಿಂದಾಗಿ ಚೆಂಡು ಒಣಗುತ್ತಿದೆ. ಹೊಸ ಚೆಂಡು ಆಡುವಾಗ ಅದು ಬೆಲ್ಟರ್ ಆಗಿತ್ತು. ಮೋಹಿತ್ ಮತ್ತು ಅಲ್ಜಾರಿ ಬಂದಾಗ ನನಗೆ ಆಶ್ಚರ್ಯವಾಗಲಿಲ್ಲ. ಅವರು ಅದ್ಭುತ ಬೌಲಿಂಗ್ ಮಾಡಿದರು," ಎಂದು ಪಾಂಡ್ಯ ಹೇಳಿದರು.
ಐಪಿಎಲ್ 2022ರಲ್ಲಿ ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಪ್ರಶಸ್ತಿಗೆ ಮುನ್ನಡೆಸಿದ ಭಾರತ ಟಿ20 ನಾಯಕ ಹಾರ್ದಿಕ್ ಪಾಂಡ್ಯ, ಈ ಪಂದ್ಯದಲ್ಲಿ ಹಿರಿಯ ವೇಗಿ ಮೋಹಿತ್ ಶರ್ಮಾ ಅವರ ಪ್ರದರ್ಶನವನ್ನು ಹಾಡಿ ಹೊಗಳಿದರು. ಮೋಹಿತ್ ಶರ್ಮಾ ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಗುಜರಾತ್ ಟೈಟನ್ಸ್‌ಗೆ ನೆಟ್ ಬೌಲರ್ ಆಗಿ ಸೇರಿಕೊಂಡಿದ್ದರು.
"ಗೆಲುವಿನ ಎಲ್ಲಾ ಕ್ರೆಡಿಟ್ ಮೋಹಿತ್ ಶರ್ಮಾಗೆ ಸಲ್ಲುತ್ತದೆ. ನೆಟ್ ಬೌಲರ್ ಆಗಿ ನಮ್ಮೊಂದಿಗೆ ಸೇರಿದರು ಮತ್ತು ನಂತರ ಅವರ ಅವಕಾಶಕ್ಕಾಗಿ ಕಾದರು. ಅವರ ಸಮಯ ಇಂದು ಬಂದಿದೆ," ಎಂದು ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದರು.