ಭಾನುವಾರ, ಏಪ್ರಿಲ್ 9ರಂದು ನಡೆದ ಎರಡು ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರೋಚಕ ಗೆಲುವು ಸಾಧಿಸಿತು. ನಂತರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಮೋಘ ಜಯ ದಾಖಲಿಸಿತು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅಸಾಧ್ಯ ಗೆಲುವು ಸಾಧಿಸಿದ ನಂತರ ಐಪಿಎಲ್ 2023ರ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು. ರಾಜಸ್ಥಾನ ರಾಯಲ್ಸ್ ತಂಡ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಆಡಿದ ಮೂರು ಪಂದ್ಯಗಳಿಂದ ತಲಾ 4 ಅಂಕಗಳನ್ನು ಹೊಂದಿವೆ. ಆದರೆ ನಿತೀಶ್ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನೆಟ್ ರನ್‌ರೇಟ್ 1.375ಕ್ಕೆ ಹೋಲಿಸಿದರೆ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವು 2.067ನ ಉತ್ತಮ ನೆಟ್ ರನ್‌ರೇಟ್ ಹೊಂದಿದೆ.
ಇನ್ನು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ 3 ಪಂದ್ಯಗಳಿಂದ 4 ಅಂಕಗಳನ್ನು ಗಳಿಸಿ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸೋಮವಾರ, ಏಪ್ರಿಲ್ 10ರಂದು ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಸೋಲಿಸಿದರೆ ಲಕ್ನೋ ಸೂಪರ್ ಜೈಂಟ್ಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಐಪಿಎಲ್ 2023ರ ಮೊದಲ ಸೋಲು ಕಂಡ ನಂತರ ಗುಜರಾತ್ ಟೈಟನ್ಸ್ ತಂಡ 4ನೇ ಸ್ಥಾನಕ್ಕೆ ಕುಸಿದಿದೆ.

ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಎಂಟು ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 2023ರ ಜಯದೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಮೇಲೇರಲು ಯಶಸ್ವಿಯಾಯಿತು.ಸನ್‌ರೈಸರ್ಸ್ ಹೈದರಾಬಾದ್ ಆಡಿದ 3 ಪಂದ್ಯಗಳಿಂದ 2 ಅಂಕಗಳನ್ನು ಗಳಿಸಿ ಎಂಟನೇ ಸ್ಥಾನಕ್ಕೆ ಏರಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ 3 ಪಂದ್ಯಗಳಿಂದ 2 ಜಯ ದಾಖಲಿಸಿ 4 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಡಿದ 2 ಪಂದ್ಯಗಳಿಂದ 1 ಗೆಲುವು ದಾಖಲಿಸಿ 2 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.
ಇನ್ನು ಪಂಜಾಬ್ ಕಿಂಗ್ಸ್ ತಂಡ ಆಡಿದ 3 ಪಂದ್ಯಗಳಿಂದ 2 ಜಯ ದಾಖಲಿಸಿ 4 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮಾತ್ರ ಇನ್ನೂ ಗೆಲುವಿನ ಖಾತೆ ತೆರೆಯದ ಎರಡು ತಂಡಗಳಾಗಿವೆ.

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಶಿಖರ್ ಧವನ್ ಮುನ್ನಡೆ
ಪಂಜಾಬಗ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಜೇಯ 99 ರನ್ ಗಳಿಸಿದ ನಂತರ 2023ರ ಐಪಿಎಲ್‌ನಲ್ಲಿ ಸದ್ಯ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಶಿಖರ್ ಧವನ್ ಕೇವಲ 3 ಪಂದ್ಯಗಳಿಂದ ಎರಡು ಅರ್ಧಶತಕ ಮತ್ತು 149 ಸ್ಟ್ರೈಕ್‌ರೇಟ್‌ನೊಂದಿಗೆ 225 ರನ್ ಬಾರಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ 3 ಪಂದ್ಯಗಳಲ್ಲಿ ಎರಡು ಅರ್ಧಶತಕಗಳೊಂದಿಗೆ 189 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ 3 ಪಂದ್ಯಗಳಲ್ಲಿ 158 ರನ್ ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ರಶೀದ್ ಖಾನ್ ಮುನ್ನಡೆ
ಗುಜರಾತ್ ಟೈಟನ್ಸ್ ತಂಡದ ಲೆಗ್ ಸ್ಪಿನ್ನರ್ ರಶೀದ್ ಖಾನ್ 2023ರ ಐಪಿಎಲ್‌ನಲ್ಲಿ 3 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದು ಸದ್ಯ ಪರ್ಪಲ್ ಕ್ಯಾಪ್ ಹೊಂದಿದ್ದಾರೆ. ರಶೀದ್ ಖಾನ್ ಅವರು ಕೆಕೆಆರ್ ವಿರುದ್ಧ ಐಪಿಎಲ್ 2023ರ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದರು.
ರಾಜಸ್ಥಾನ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಆಡಿದ 3 ಪಂದ್ಯಗಳಿಂದ 8 ವಿಕೆಟ್‌ಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮಾರ್ಕ್ ವುಡ್ ಆಡಿದ 2 ಪಂದ್ಯಗಳಿಂದ 8 ವಿಕೆಟ್‌ಗಳನ್ನು ಪಡೆದು ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.