ಮಂಗಳವಾರ, ಏಪ್ರಿಲ್ 12ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪಂದ್ಯಾವಳಿಯ ಚೊಚ್ಚಲ ಗೆಲುವು ದಾಖಲಿಸಿತು.
ಇದೇ ವೇಳೆ 2023ರ ಐಪಿಎಲ್‌ನ ಅಂಕಪಟ್ಟಿಯಲ್ಲಿ ರೋಹಿತ್ ಶರ್ಮಾ ಬಳಗ ಆಡಿದ ಮೂರು ಪಂದ್ಯಗಳಿಂದ ಎರಡು ಸೋಲು ಮತ್ತು ಒಂದು ಗೆಲುವಿನೊಂದಿಗೆ 2 ಅಂಕಗಳನ್ನು ಹೊಂದಿದ್ದು, ನೆಟ್ ರನ್‌ರೇಟ್ -0.879 ಇದೆ. ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ.

ಆಡಿದ ನಾಲ್ಕು ಪಂದ್ಯಗಳಲ್ಲಿ ಎಲ್ಲ ಪಂದ್ಯಗಳನ್ನು ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ಆಡಿದ ಮೂರು ಪಂದ್ಯಗಳಿಂದ ಎರಡು ಸೋಲು ಮತ್ತು ಒಂದು ಗೆಲುವಿನೊಂದಿಗೆ 2 ಅಂಕಗಳನ್ನು ಗಳಿಸಿ -1.502 ನೆಟ್ ರನ್‌ರೇಟ್‌ನೊಂದಿಗೆ 9ನೇ ಸ್ಥಾನದಲ್ಲಿದೆ.
ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳ ಗೆಲುವಿನೊಂದಿಗೆ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರೆ, ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ ರಾಜಸ್ಥಾನ ರಾಯಲ್ಸ್ 2ನೇ ಸ್ಥಾನದಲ್ಲಿದೆ. ಬುಧವಾರ ಸಿಎಸ್‌ಕೆ ತಂಡವನ್ನು ಎದುರಿಸಲಿರುವ ರಾಜಸ್ಥಾನ ರಾಯಲ್ಸ್ ಒಂದು ವೇಳೆ ಗೆದ್ದರೆ ಮೊದಲ ಸ್ಥಾನಕ್ಕೇರುವ ಸಾಧ್ಯತೆ ಇದೆ.
IPL 2023: ಸಿಎಸ್‌ಕೆ ಬತ್ತಳಿಕೆಗೆ ಸೇರ್ಪಡೆಯಾದ ಶ್ರೀಲಂಕಾದ ಮಾರಕ ಜೋಡಿ ಅಸ್ತ್ರ; ಎಂಸ್ ಧೋನಿ ಫುಲ್ ಖುಷ್!
ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ (ಜಿಟಿ) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ. ನೆಟ್ ರನ್‌ರೇಟ್‌ನಲ್ಲಿ ಕೆಕೆಆರ್ ತಂಡ ಗುಜರಾತ್ ಟೈಟನ್ಸ್ ತಂಡಕ್ಕಿಂತ ಮುಂದಿದೆ.
ಇದೇ ವೇಳೆ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 5ನೇ ಸ್ಥಾನದಲ್ಲಿದೆ. ಬುಧವಾರದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದರೆ ಎರಡನೇ ಸ್ಥಾನ ತಲುಪುವ ಸಾಧ್ಯತೆ ಇದೆ.

ಇನ್ನು ಪಂಜಾಬ್ ಕಿಂಗ್ಸ್ ತಂಡ ಎರಡು ಗೆಲುವುಗಳೊಂದಿಗೆ ನಾಲ್ಕು ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದರೆ, ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ನಂತರ ಸತತ ಎರಡು ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7ನೇ ಸ್ಥಾನದಲ್ಲಿದೆ.
2023ರ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಎರಡನೇ ಸ್ಥಾನಕ್ಕೇರಿದ್ದಾರೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ 209 ರನ್ ಬಾರಿಸಿದ್ದಾರೆ. ಆದರೆ, ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಆಡಿದ 3 ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 225 ರನ್ ಗಳಿಸಿ ಆರೆಂಜ್ ಕ್ಯಾಪ್ ಹೊಂದಿದ್ದಾರೆ.
ಸಿಎಸ್‌ಕೆ ತಂಡದ ಆರಂಭಿಕ ರುತುರಾಜ್ ಗಾಯಕ್ವಾಡ್ 3 ಪಂದ್ಯಗಳಲ್ಲಿ 189 ರನ್ ಗಳಿಸಿ 3ನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ 175 ರನ್ ಮತ್ತು ವಿರಾಟ್ ಕೊಹ್ಲಿ 164 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮಾರ್ಕ್ ವುಡ್ 3 ಪಂದ್ಯಗಳಲ್ಲಿ 9 ವಿಕೆಟ್‌ಗಳೊಂದಿಗೆ ಐಪಿಎಲ್ 2023ರಲ್ಲಿ ಸದ್ಯ ಪರ್ಪಲ್ ಕ್ಯಾಪ್ ಹೊಂದಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಗುಜರಾತ್ ಟೈಟನ್ಸ್ ತಂಡದ ಲೆಗ್ ಸ್ಪಿನ್ನರ್ ರಶೀದ್ ಖಾನ್ ತಲಾ 8 ವಿಕೆಟ್‌ಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.