ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ 2ನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಮಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿರುವ ಗುಜರಾತ್ ಟೈಟನ್ಸ್ ತಂಡ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು ಮುಂಬೈ ವಿರುದ್ಧ ಅಬ್ಬರಿಸಿದೆ. ಅದರಲ್ಲೂ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಈ ಮಹತ್ವದ ಪಂದ್ಯದಲ್ಲಿ ಜಿಟಿ ತಂಡ ಭಾರೀ ಮೊತ್ತದ ಗುರಿಯನ್ನು ಮುಂಬೈ ಇಂಡಿಯನ್ಸ್ ಮುಂದಿಟ್ಟಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಗುಜರಾತ್ ಟೈಟನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಶುಬ್ಮನ್ ಗಿಲ್ ಹಾಗೂ ವೃಏದ್ಧಿಮಾನ್ ಸಾಹಾ ಜೋಡಿ 54 ರನ್‌ಗಳ ಜೊತೆಯಾಟ ನೀಡಿ ಬೇರ್ಪಟ್ಟರು. ಅದಾದ ಬಳಿಕ ಸಾಯಿ ಸುದರ್ಶನ್ ಜೊತೆಗೆ ಶುಬ್ಮನ್ ಗಿಲ್ ಅಮೋಘ ಇನ್ನಿಂಗ್ಸ್ ಕಟ್ಟಿದರು. ಮುಂಬೈ ಇಂಡಿಯನ್ಸ್ ತಂಡದ ಎಲ್ಲಾ ಬೌಲರ್‌ಗಳನ್ನು ದಂಡಿಸಿದ ಶುಬ್ಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ನರೇಂದ್ರ ಮೋದಿ ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಗಿಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಎರಡನೇ ವಿಕೆಟ್‌ಗೆ ಶುಬ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಜೋಡಿ ಬರೊಬ್ಬರಿ 138 ರನ್‌ಗಳನ್ನು ಕಲೆಹಾಕಿದರು. 60 ಎಸತಗಳನ್ನು ಎದುರಿಸಿದ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಭರ್ಜರಿ 129 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಈ ಅಮೋಘ ಇನ್ನಿಂಗ್ಸ್‌ನಲ್ಲಿ 10 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿ ಒಳಗೊಂಡಿತ್ತು. ಭರ್ಜರಿ 215ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ ಶುಬ್ಮನ್ ಗಿಲ್ ಎದುರಾಳಿ ಬೌಲರ್‌ಗಳಿಗೆ ಆಘಾತ ನೀಡಿದರು.
ಇನ್ನು ನಂತರ ಸಾಯಿ ಸುದರ್ಶನ್ 31 ಎಸೆತಗಳಲ್ಲಿ 43 ರನ್‌ಗಳಿಸಿ ರಿಟೈರ್ಡ್ ಔಟ್ ಆದರೆ ನಾಯಕ ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 28 ರನ್‌ಗಳಿಸಿ ಅಬ್ಬರಿಸಿದರು. ರಶೀದ್ ಖಾನ್ 5 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ನಿಗದಿತ 20 ಓವರ್‌ಗಳಲ್ಲಿ ಗುಜರಾತ್ ಟೈಟನ್ಸ್ ತಂಡ 3 ವಿಕೆಟ್ ಕಳದುಕೊಂಡು 233 ರನ್‌ಗಳನ್ನು ಗಳಿಸಿದ್ದು ಬೃಹತ್ ಮೊತ್ತದ ಗುರಿ ನಿಗದಿಪಡಿಸಿದೆ.
ಗುಜರಾತ್ ಟೈಟನ್ಸ್ ಆಡುವ ಬಳಗ: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಮುಂಬೈ ಇಂಡಿಯನ್ಸ್ ಆಡುವ ಬಳಗ: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಕ್ಯಾಮೆರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್