
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ಇದೇ ಮಾರ್ಚ್ 31ರಂದು ಅದ್ಧೂರಿ ಚಾಲನೆ ಸಿಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಎಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.
ಇದೇ ವೇಳೆ ಆರ್‌ಸಿಬಿ ತಂಡವು ಲೆಜೆಂಡರಿ ಬ್ಯಾಟರ್‌ಗಳಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಪಂದ್ಯಾವಳಿ ಆಡುತ್ತಿದೆ. ಆದರೂ, ಇವರಿಬ್ಬರು ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 184 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 5162 ರನ್ ಗಳಿಸಿದ್ದಾರೆ. ಹೆಚ್ಚಿನ ಐಪಿಎಲ್ ಋತುಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ರಮುಖ ಆಟಗಾರನಾಗಿದ್ದರು.

ಇದೀಗ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಅವರು 2021ರ ಐಪಿಎಲ್ ನಂತರ ನಿವೃತ್ತಿಯ ಬಗ್ಗೆ ಎಬಿ ಡಿವಿಲಿಯರ್ಸ್ ಅವರೊಂದಿಗೆ ನಡೆಸಿದ ಮಾತುಕತೆ ಬಗ್ಗೆ ಮಾತನಾಡಿದ್ದಾರೆ.
"ಎಬಿ ಡಿವಿಲಿಯರ್ಸ್ ನಿವೃತ್ತಿಯನ್ನು ಹಿಂತೆಗೆದುಕೊಳ್ಳುವಂತೆ ಶೇ.100ರಷ್ಟು ನಾವು ಪ್ರಯತ್ನಿಸಿದ್ದೇವೆ. ಅವರು ಅತ್ಯುತ್ತಮ ಕ್ರಿಕೆಟಿಗನಾಗಿದ್ದಾರೆ. ನಾವು ಮುಂದಿನ ವರ್ಷಕ್ಕೆ ತಂಡದ ಪರಿಸ್ಥಿತಿಗಳನ್ನು ಯೋಜಿಸುತ್ತಿದ್ದಾಗ, ಎಬಿಡಿ ಅವರ ಆ ಫೋನ್ ಕರೆಯನ್ನು ಸ್ವೀಕರಿಸುವುದು ತುಂಬಾ ಕಷ್ಟಕರವಾಗಿತ್ತು," ಎಂದು ಮೈಕ್ ಹೆಸ್ಸನ್ ತಿಳಿಸಿದ್ದಾರೆ.
ODI World Cup 2023: ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಸಂಭಾವ್ಯ ದಿನಾಂಕ, ಸ್ಥಳಗಳ ಪಟ್ಟಿ
"ಸುಮಾರು ಮಾತುಕತೆಯ ನಂತರ, ಎಬಿಡಿ ತೆಗೆದುಕೊಂಡ ನಿರ್ಧಾರವನ್ನು ನಾವು ಗೌರವಿಸಬೇಕು ಎಂದು ಅರಿತುಕೊಂಡೆವು. ಆ ನಿರ್ಧಾರದಿಂದ ಅವನನ್ನು ಹಿಂದೆ ಸರಿಸುವುದು ನನ್ನ ಕಡೆಯಿಂದ ತಪ್ಪಾಗುತ್ತದೆ ಎಂದುಕೊಂಡೆ," ಎಂದು ಮೈಕ್ ಹೆಸ್ಸನ್ ಆರ್‌ಸಿಬಿಯ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ.

ಎಬಿಡಿ ಯಾವಾಗಲೂ ಆರ್‌ಸಿಬಿ ತಂಡದ ಭಾಗವಾಗಿರುತ್ತಾರೆ: ಮೈಕ್ ಹೆಸ್ಸನ್
"ಆರ್‌ಸಿಬಿ ತಂಡವು 2022ರಿಂದ ಎಬಿ ಡಿವಿಲಿಯರ್ಸ್ ಅವರನ್ನು ಮೈದಾನದಲ್ಲಿ ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತಿದೆ. ಅವರು ಅಭಿಮಾನಿಗಳ ಮೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಎಬಿ ಡಿವಿಲಿಯರ್ಸ್ ಸ್ಫೋಟಕ ಆಟ ಮತ್ತು ಪಿಚ್‌ನಲ್ಲಿ ಆತ ಹೊಂದಿದ್ದ ಪ್ರಾಬಲ್ಯವು ಅದ್ವಿತೀಯವಾಗಿದೆ," ಎಂದು ಆರ್‌ಸಿಬಿ ಡೈರೆಕ್ಟರ್ ಮೈಕ್ ಹೆಸ್ಸನ್ ಹೇಳಿದರು.
ಐಪಿಎಲ್‌ನ ಮುಂಬರುವ ಸೀಸನ್‌ಗಳಲ್ಲಿ ಎಬಿ ಡಿವಿಲಿಯರ್ಸ್ ಆರ್‌ಸಿಬಿ ತಂಡದೊಂದಿಗೆ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದರ ಕುರಿತು ಮೈಕ್ ಹೆಸ್ಸನ್ ಪ್ರತಿಕ್ರಿಯಿಸಿ, ""ಎಬಿಡಿ ಯಾವಾಗಲೂ ಆರ್‌ಸಿಬಿ ತಂಡದ ಭಾಗವಾಗಿರುತ್ತಾರೆ. ತಂಡದೊಂದಿಗೆ ಆತನನ್ನು ಮರಳಿ ಇರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿಯೊಂದಿಗಿನ ಎಬಿಡಿ ಸಂಬಂಧ ಎಷ್ಟಿದೆ ಎಂಬುದು ನಮಗೆ ತಿಳಿದಿದೆ,'' ಎಂದು ಮೈಕ್ ಹೆಸ್ಸನ್ ತಿಳಿಸಿದ್ದಾರೆ.
2023ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸಲಿದ್ದಾರೆ. 15 ವರ್ಷಗಳ ಬಳಿಕ ಆರ್‌ಸಿಬಿ ತಂಡಕ್ಕೆ ಅದೃಷ್ಟ ಖುಲಾಯಿಸಲಿದೆ ಎಂದು ಎಲ್ಲರೂ ಭಾವಿಸಿದ್ದಾರೆ. ಇದೇ ವೇಳೆ ಎಬಿ ಡಿವಿಲಿಯರ್ಸ್ ಆರ್‌ಸಿಬಿ ಭಾಗವಾಗಿ ಆಟಗಾರರಿಗೆ ಹೇಗೆ ಮಾರ್ಗದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಐಪಿಎಲ್ 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೂರ್ಣ ತಂಡ
ಫಾಫ್ ಡು ಪ್ಲೆಸಿಸ್ (ನಾಯಕ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗೆ, ಆಕಾಶ್ ದೀಪ್, ಜೋಶ್ ಹ್ಯಾಝಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲೆ, ಹಿಮಾಂಶು ಶರ್ಮಾ.