RCB vs KKR: ಸೇಡಿನ ಸೆಣೆಸಾಟದಲ್ಲಿ ಆರ್‌ಸಿಬಿಗೆ ಈ ಮೂವರದ್ದೇ ಆತಂಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬುಧವಾರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ತನ್ನ ತವರು ಮೈದಾನದಲ್ಲಿ ಎದುರಿಸಲಿದೆ. ಇದೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಸೆಣೆಸಾಟ ನಡೆಸಿದ್ದಾಗ ಆರ್‌ಸಿಬಿ ತಂಡಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ಆಘಾತಕಾರಿ ಸೋಲುಣಿಸಿತ್ತು. ಸೋಲಿನ ಸನಿಹದಲ್ಲಿದ್ದ ಕೆಕೆಆರ್ ತಂಡವನ್ನು ಸೋಲಿನಿಂದ ಪಾರುಮಾಡಿದ್ದಲ್ಲದೆ ಬೃಹತ್ ಮೊತ್ತಕ್ಕೆ ಕಾರಣವಾಗಿ ಗೆಲ್ಲುವಂತೆ ಮಾಡಿದ್ದು ಶಾರ್ದೂಕ್ ಠಾಕೂರ್ ಅವರ ಸ್ಪೋಟಕ ಬ್ಯಾಟಿಂಗ್. ಇದೀಗ ಅಂದು ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಆರ್‌ಸಿಬಿ ತಂಡ.
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸತತವಾಗಿ ಸೋಲಿನ ಕಹಿಯನ್ನೇ ಅನುಭವಿಸಿಕೊಂಡು ಬಂದಿದೆ. ಹೀಗಾಗಿ ಈ ಹಂತದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೆಲುವು ಬಹಳ ಮುಖ್ಯವಾಗಿದೆ. ಆರ್‌ಸಿಬಿ ವಿರುದ್ಧವೇ ಗೆದ್ದು ಮತ್ತೆ ಗೆಲುವಿನ ಲಯಕ್ಕೆ ಮರಳುವ ಪ್ರಯತ್ನ ನಡೆಸಲಿದೆ ನಿತೀಶ್ ರಾಣಾ ನೇತೃತ್ವದ ಕೆಕೆಆರ್. ಹೀಗಾಗಿ ಈ ಸೆಣೆಸಾಟ ಕುತೂಹಲ ಮೂಡಿಸಿದೆ.

ಇನ್ನು ಆರ್‌ಸಿಬಿ ತಂಡ ಸತತ ಗೆಲುವು ಸಾಧಿಸಿದರೂ ಕೆಕೆಆರ್ ತಂಡದ ಕೆಲ ಆಟಗಾರರು ತಂಡಕ್ಕೆ ಸವಾಲಾಗುವುದು ಖಚಿತ. ಬುಧವಾರ ಆರ್‌ಸಿಬಿ ತಂಡಕ್ಕೆ ಕಂಟಕವಾಗಬಲ್ಲ ಮೂವರು ಆಟಗಾರರ ಮಾಹಿತಿ ಇಲ್ಲಿದೆ. ಮುಂದೆ ಓದಿ..
ಸ್ಪೋಟಕ ಆಟಗಾರ ಜೇಸನ್ ರಾಯ್
ಜೇಸನ್ ರಾಯ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪೋಟಕ ಆಟಗಾರ. ಕಳೆದ ಪಂದ್ಯದಲ್ಲಿ ಸಿಎಸ್‌ಕೆ ತಂಡ ಬೃಹತ್ ಮೊತ್ತದ ಗುರಿಯನ್ನು ನೀಡಿದ ಬಳಿಕ ಅಗ್ರ ಕ್ರಮಾಂಕದ ಆಟಗಾರರು ವೈಫಲ್ಯ ಅನುಭವಿಸಿದರು ಕೂಡ ಜೇಸನ್ ರಾಯ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಪೋಟಕ ಪ್ರದರ್ಶನ ನೀಡಿದರು. ಕೇವಲ 26 ಎಸೆತ ಎದುರಿಸಿದ ಅವರು 61 ರನ್‌ಗಳಿಸಿ ಮಿಂಚಿದರು, ಐದು ಸಿಕ್ಸರ್ ಹಾಗೂ ಐದು ಬೌಂಡರಿ ಸಿಡಿಸಿ ಅಬ್ಬರಿಸಿದರು. ಇದು ಕೆಕೆಆರ್ ತಂಡಕ್ಕೆ ಸಹಾಯಮಾಡದಿದ್ದರೂ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿತ್ತು. ಇದೀಗ ಆರ್‌ಸಿಬಿ ವಿರುದ್ಧದ ಪಂದ್ಯದ ನಡೆಯುವ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್‌ಗೆ ಹೇಳಿಮಾಡಿಸಿದಂತಿರುವ ಕಾರಣ ಜೇಸನ್ ಅದರ ಲಾಭ ಪಡೆಯುವ ಸಾಧ್ಯವಿದೆ.
ಕೆಕೆಆರ್ ನಾಯಕ ನಿತೀಶ್ ರಾಣಾ
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ನಿತೀಶ್ ರಾಣಾ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಅಲ್ಲದೆ ನಾಯಕನಾಗಿಯೂ ಅವರ ಪ್ರದರ್ಶನ ಗಮನಾರ್ಹವಾಗಿಲ್ಲ. ಆದರೆ ಕೆಲ ಪಂದ್ಯಗಳಲ್ಲಿ ನಿತೀಶ್ ರಾಣಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಕೆಕೆಆರ್ ತಂಡದ ಪ್ರಮುಖ ಬೌಲರ್‌ಗಳು ವೈಫಳ್ಯ ಅನುಭವಿಸಿರುವಾಗ ರಾಣಾ ಪ್ರಮುಖ ಆಟಗಾರರ ವಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಂಥಾದ್ದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿ ರಾಣಾ ಇರುವ ಕಾರಣ ಆರ್‌ಸಿಬಿ ದಾಂಡಿಗರು ಈ ಆಟಗಾರನ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ವಿಶೇಷ ಯೋಜನೆಗಳನ್ನು ಹೊಂದುವುದು ಅಗತ್ಯವಾಗಿದೆ.
ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ
ಆರ್‌ಸಿಬಿ ಈ ಬಾರಿಯ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾಗ ವರುಣ್ ಚಕ್ರವರ್ತಿ ಆರ್‌ಸಿಬಿ ತಂಡಕ್ಕೆ ದೊಡ್ಡ ಆಘಾತ ನೀಡಿದ್ದರು. ಪ್ರಮುಖ ಆಟಗಾರರನ್ನು ಕಟ್ಟಿಹಾಕುವಲ್ಲಿ ವರುಣ್ ಯಶಸ್ವಿಯಾಗಿದ್ದರು.ಇದೀಗ ಆರ್‌ಸಿಬಿ ವಿರುದ್ಧ ಮತ್ತೆ ಕೆಕೆಆರ್ ಮುಖಾಮುಖಿಯಾಗುತ್ತಿರುವುದರಿಂದ ಮತ್ತೊಮ್ಮೆ ಕಂಟಕವಾಗುವ ಸಾಧ್ಯತೆಯಿದೆ. ಆರ್‌ಸಿಬಿ ತಂಡ ಹೆಚ್ಚಾಗಿ ಅಗ್ಕ್ರಮಾಂಕದ ಆಟಗಾರನ್ನು ನೆಚ್ಚಿಕೊಂಡಿರುವ ಕಾರಣ ಪ್ರಮುಖ ಆಟಗಾರರಿಗೆ ವಿಶೇಷ ಅಸ್ತ್ರಗಳನ್ನು ಬಳಸಲು ವರುಣ್ ಸಿದ್ಧವಿರುತ್ತಾರೆ. ಹೀಗಾಗಿ ಈ ಸೆಣೆಸಾಟ ಕುತೂಹಲ ಮೂಡಿಸಲಿದ್ದು ಆರ್‌ಸಿಬಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications