
ಕಳೆದ ಮಾರ್ಚ್ ತಿಂಗಳಾಂತ್ಯದಲ್ಲಿ ಆರಂಭಗೊಂಡ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯದ ಹಂತ ತಲುಪಿದೆ. ಇಂದು (ಮೇ 20) ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 68ನೇ ಲೀಗ್ ಪಂದ್ಯ ಜರುಗಿದೆ.
ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ಕೇವಲ 1 ರನ್‌ನಿಂದ ಗೆದ್ದು ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ ಫೀಲ್ಡಿಂಗ್ ಆಯ್ದುಕೊಂಡು ತಮ್ಮ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿ ಎದುರಾಳಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೆಲ್ಲಲು 177 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿದ್ದು, ರೋಚಕ ಹಣಾಹಣಿಯಲ್ಲಿ ಸೋಲನ್ನು ಕಂಡಿದೆ. ಕೊನೆಯ ಎಸೆತದವರೆಗೂ ಏಕಾಂಗಿ ಹೋರಾಟ ನಡೆಸಿದ ರಿಂಕು ಸಿಂಗ್ ಆಟ ವ್ಯರ್ಥವಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್: ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕ ಆಟಗಾರರಾಗಿ ಕರಣ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಕಣಕ್ಕಿಳಿದರು. ಕರಣ್ ಶರ್ಮಾ 5 ಎಸೆತಗಳಲ್ಲಿ 3 ರನ್ ಗಳಿಸಿ ಔಟ್ ಆದರೆ, ಕ್ವಿಂಟನ್ ಡಿ ಕಾಕ್ 28 ಎಸೆತಗಳಲ್ಲಿ 27 ರನ್ ಬಾರಿಸಿದರು. ಇನ್ನುಳಿದಂತೆ ಪ್ರೇರಕ್ ಮಂಕಡ್ 20 ಎಸೆತಗಳಲ್ಲಿ 26 ರನ್, ಮಾರ್ಕಸ್ ಸ್ಟಾಯಿನಿಸ್ ಡಕ್ಔಟ್, ನಾಯಕ ಕೃನಾಲ್ ಪಾಂಡ್ಯ 8 ಎಸೆತಗಳಲ್ಲಿ 9 ರನ್, ಆಯುಷ್ ಬದೋನಿ 21 ಎಸೆತಗಳಲ್ಲಿ 25 ರನ್, ನಿಕೋಲಸ್ ಪೂರನ್ 30 ಎಸೆತಗಳಲ್ಲಿ 58 ರನ್, ರವಿ ಬಿಷ್ಣೋಯಿ 2 ಎಸೆತಗಳಲ್ಲಿ 2 ರನ್, ಕೃಷ್ಣಪ್ಪ ಗೌತಮ್ 4 ಎಸೆತಗಳಲ್ಲಿ ಅಜೇಯ 11 ರನ್ ಹಾಗೂ ನವೀನ್ ಉಲ್ ಹಕ್ 3 ಎಸೆತಗಳಲ್ಲಿ ಅಜೇಯ 2 ರನ್ ಬಾರಿಸಿದರು.
ಇನ್ನು ಆರಂಭದಿಂದಲೇ ವಿಕೆಟ್ ಕಳೆದುಕೊಂಡು ವೇಗವಾಗಿ ರನ್ ಗಳಿಸಲಾಗದೇ ಪರದಾಡುತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಸರೆಯಾದದ್ದು ನಿಕೋಲಸ್ ಪೂರನ್. ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೂರನ್ 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 58 ಬಾರಿಸಿ ತಂಡದ ರನ್ ವೇಗ ಹೆಚ್ಚುವಂತೆ ಮಾಡಿದರು.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಸುನಿಲ್ ನರೈನ್, ಶಾರ್ದೂಲ್ ಠಾಕೂರ್ ಹಾಗೂ ವೈಭವ್ ಅರೋರ ತಲಾ ಎರಡು ವಿಕೆಟ್ ಪಡೆದರೆ, ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.
ಕೊಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್: ಕೆಕೆಆರ್ ಪರ ಅರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಹಾಗೂ ವೆಂಕಟೇಶ್ ಐಯ್ಯರ್ ದೊಡ್ಡ ಹೊಡೆತಗಳನ್ನು ಬಾರಿಸಿದ ಕಾರಣ ಪವರ್‌ಪ್ಲೇ ಮುಗಿಯುವ ಮುನ್ನವೇ ತಂಡದ ಮೊತ್ತ 60 ದಾಟಿತ್ತು. ಇಷ್ಟರಮಟ್ಟಿಗೆ ಬೃಹತ್ ಆರಂಭ ಪಡೆದುಕೊಂಡ ಕೆಕೆಆರ್ ಈ ಇಬ್ಬರು ಔಟ್ ಆಗುತ್ತಿದ್ದಂತೆ ನಿಧಾನಗತಿಯಲ್ಲಿ ರನ್ ಗಳಿಸಿತು.
ವೆಂಕಟೇಶ್ ಐಯ್ಯರ್ 15 ಎಸೆತಗಳಲ್ಲಿ 24 ರನ್ ಗಳಿಸಿದರೆ, ಜೇಸನ್ ರಾಯ್ 28 ಎಸೆತಗಳಲ್ಲಿ 45 ರನ್ ಬಾರಿಸಿದರು. ಇನ್ನುಳಿದಂತೆ ನಾಯಕ ನಿತಿಶ್ ರಾಣಾ 8, ರಹ್ಮನ್ನುಲ್ಲಾ ಗುರ್ಬಜ್ 10, ಆಂಡ್ರೆ ರಸೆಲ್ 7, ಶಾರ್ದೂಲ್ ಠಾಕೂರ್ 3, ಸುನಿಲ್ ನರೇನ್ 1, ವೈಭವ್ ಅರೋರ ಅಜೇಯ 1 ರನ್ ಹಾಗೂ ರಿಂಕು ಸಿಂಗ್ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 67 ರನ್ ಚಚ್ಚಿದರು.
ತಂಡ ವಿಕೆಟ್ ಕಳೆದುಕೊಂಡು ಸೋಲಿನತ್ತ ಸಾಗುತ್ತಿದ್ದಾಗ ತಾಳ್ಮೆಯಿಂದ ಬ್ಯಾಟ್ ಬೀಸಿದ ರಿಂಕು ಸಿಂಗ್ ವೀಕ್ಷಕರು ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುವ ಮಟ್ಟಕ್ಕೆ ಬ್ಯಾಟ್ ಬೀಸಿ ಗೆಲುವಿನ ಸನಿಹಕ್ಕೆ ತಂದರು. ಅದರಲ್ಲಿಯೂ ಗೆಲ್ಲಲು ಕೊನೆಯ 12 ಎಸೆತಗಳಲ್ಲಿ 40 ರನ್‌ಗಳ ಅಗತ್ಯವಿದ್ದಾಗ ನವೀನ್ ಉಲ್ ಹಕ್ ಮಾಡಿದ 19ನೇ ಓವರ್‌ನಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 20 ರನ್ ಬಾರಿಸಿದ ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದರು.
ಕೊನೆಯ 3 ಎಸೆತಗಳಲ್ಲಿ ತಂಡಕ್ಕೆ ಗೆಲ್ಲಲು 18 ರನ್‌ಗಳು ಬೇಕಿದ್ದಾಗ 6, 4 ಹಾಗೂ ಸಿಕ್ಸರ್ ಚಚ್ಚಿದ ರಿಂಕು ಸಿಂಗ್ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದರು. ಸದ್ಯ ಕೊಲ್ಕತ್ತಾ ಪಂದ್ಯ ಸೋತರೂ ರಿಂಕು ಆಟಕ್ಕೆ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ಪರ ಯಶ್ ಠಾಕೂರ್ ಹಾಗೂ ರವಿ ಬಿಷ್ಣೋಯ್ ತಲಾ ಎರಡು ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ ಹಾಗೂ ಕೃಷ್ಣಪ್ಪ ಗೌತಮ್ ತಲಾ ಒಂದೊಂದು ವಿಕೆಟ್ ಪಡೆದರು.