
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತುವಿನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ.
ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಎಂಎಸ್ ಧೋನಿ ನಾಯತಕತ್ವದ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.
ಇದೇ ವೇಳೆ ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಈ ಬಾರಿಯೂ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.
2023ರ ಐಪಿಎಲ್ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್‌ಗೆ ಮಹತ್ವದ ಋತುವಾಗಿದೆ. ಏಕೆಂದರೆ, ಕಳೆದ ಎರಡು ಋತುಗಳಲ್ಲಿ ಪ್ಲೇಆಫ್ಸ್‌ಗೆ ಮುನ್ನಡೆಯಲು ವಿಫಲವಾಗಿದೆ. ಆದರೂ, ನಾಯಕ ರೋಹಿತ್ ಶರ್ಮಾ ಈ ವರ್ಷದ ಕೊನೆಯಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ತಮ್ಮ ತಯಾರಿಗೆ ಆದ್ಯತೆ ನೀಡಲಿದ್ದಾರೆ.
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರು ಟಿ20 ಲೀಗ್ ನಂತರ ಭಾರತ ರಾಷ್ಟ್ರೀಯ ತಂಡದ ಬಿಡುವಿಲ್ಲದ ವೇಳಾಪಟ್ಟಿಯನ್ನು ನೋಡಿದರೆ, ತಮ್ಮ ಕೆಲಸದ ಹೊರೆ ನಿರ್ವಹಣೆಯ ಭಾಗವಾಗಿ 2023ರ ಐಪಿಎಲ್‌ನಲ್ಲಿ ಕೆಲವು ಪಂದ್ಯಗಳನ್ನು ಆಡದಿರಲು ನಿರ್ಧರಿಸಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ವರದಿಯ ಪ್ರಕಾರ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ಸಹ ಆಟಗಾರ ಸೂರ್ಯಕುಮಾರ್ ಯಾದವ್ ಮಾಜಿ ಚಾಂಪಿಯನ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾರತವು ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಹೊಂದಿದ್ದು, 2023ರ ಐಪಿಎಲ್ ಫೈನಲ್‌ನ ಒಂದು ವಾರದ ನಂತರ ಲಂಡನ್‌ನ ಓವಲ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಪ್ರಾರಂಭವಾಗುತ್ತದೆ. ಅನಂತರ ಕೆಲವು ದ್ವಿಪಕ್ಷೀಯ ಸರಣಿಯ ಬಳಿಕ ಅಕ್ಟೋಬರ್-ನವೆಂಬರ್‌ನಲ್ಲಿ ತವರಿನಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಿಗದಿಯಾಗಿದ್ದು, ಆ ವೇಳೆಗೆ ಭಾರತ ತಂಡ ಸಂಪೂರ್ಣ ಫಿಟ್ ಆಗಿರಬೇಕಿದೆ.
IPL 2023: ಮುಂಬೈ ಇಂಡಿಯನ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ, ಸಂಭಾವ್ಯ ಬಲಿಷ್ಠ ಆಡುವ 11ರ ಬಳಗ, ಪೂರ್ಣ ತಂಡ
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ರೋಹಿತ್ ಶರ್ಮಾ ಅವರು ಈ ವರ್ಷದಲ್ಲಿ ಆಡುವ ಐಪಿಎಲ್ ಪಂದ್ಯಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಅವರು ತಂಡದೊಂದಿಗೆ ಪ್ರಯಾಣಿಸುವುದನ್ನು ಮುಂದುವರಿಸುವುದನ್ನು ನಿಲ್ಲಿಸುವುದಿಲ್ಲ. ಸೂರ್ಯಕುಮಾರ್ ಯಾದವ್ ಅವರು ರೋಹಿತ್ ಶರ್ಮಾರಿಂದ ಮಾರ್ಗದರ್ಶನ ತೆಗೆದುಕೊಂಡು ತಂಡವನ್ನು ಮುನ್ನಡೆಸಲಿದ್ದಾರೆ.

ಜಸ್ಪ್ರೀತ್ ಬುಮ್ರಾ ಅಲಭ್ಯತೆಯಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗಾಗಲೇ ಹಿನ್ನಡೆ ಉಂಟಾಗಿದೆ. ಬೆನ್ನಿನ ನೋವಿನ ಶಸ್ತ್ರಚಿಕಿತ್ಸೆಯಿಂದಾಗಿ 2023ರ ಸಂಪೂರ್ಣ ಐಪಿಎಲ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಇನ್ನು ಕೆಲವು ಪಂದ್ಯಗಳಿಗೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ಹೇಗೆ ಆಡಲಿದೆ ಎಂಬುದನ್ನು ನೋಡಬೇಕಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ರೋಹಿತ್ ಶರ್ಮಾ ಅವರು "ಭಾರತ ರಾಷ್ಟ್ರೀಯ ತಂಡದ ಆಟಗಾರರನ್ನು ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಫಿಟ್ ಆಗಿ ಇಡುವುದು ಐಪಿಎಲ್ ಫ್ರಾಂಚೈಸಿಗಳಿಗೆ ಬಿಟ್ಟ ವಿಚಾರ," ಎಂದು ಹೇಳಿದ್ದರು.
ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಈ ಕೊರತೆ ಕಾಡುತ್ತಿದೆ; ಮಾಜಿ ನಾಯಕ ಸೌರವ್ ಗಂಗೂಲಿ
"ಮುಖ್ಯವಾಗಿ, ಫಿಟ್ ಆಗಿರುವುದು ಆಟಗಾರರಿಗೆ ಬಿಟ್ಟದ್ದು. ಅವರೆಲ್ಲರೂ ತಿಳಿದವರು, ಅವರು ತಮ್ಮ ದೇಹದ ಬಗ್ಗೆ ಗಮನ ಹರಿಸಬೇಕು. ಕೆಲಸದ ಹೊರೆ ಹೆಚ್ಚಾಗುತ್ತಿದೆ ಎಂದು ಭಾವಿಸಿದಾಗ, ಒಂದು ಅಥವಾ ಎರಡು ಪಂದ್ಯಗಳಲ್ಲಿ ವಿರಾಮ ತೆಗೆದುಕೊಳ್ಳಬಹುದು. ಆದರೆ, ಅದು ಆಗುತ್ತದೆಯೇ ಎಂಬುದು ನನಗೆ ಅನುಮಾನ," ಎಂದು ರೋಹಿತ್ ಶರ್ಮಾ ಚೆನ್ನೈನಲ್ಲಿ ಹೇಳಿದ್ದರು.
2022ರ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ 14 ಪಂದ್ಯಗಳಿಂದ ಕೇವಲ 19.14 ಸರಾಸರಿಯಲ್ಲಿ 268 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡು ಐಪಿಎಲ್ ಇತಿಹಾಸದಲ್ಲಿ ಕೆಟ್ಟ ಪ್ರದರ್ಶನ ನೀಡಿತು.