IPL 2023: ಸಿಎಸ್‌ಕೆ ತಂಡ ಟ್ರೋಫಿ ಗೆಲ್ಲಲ್ಲ, ಈ ಬಾರಿ ಹೊಸ ತಂಡ ಗೆದ್ದರೆ ಖುಷಿಯಾಗುತ್ತದೆ; ಎಸ್ ಶ್ರೀಶಾಂತ್

ಭಾರತದಲ್ಲಿ ಕ್ರಿಕೆಟ್ ಕಾವು ಹೆಚ್ಚಾಗಿದ್ದು, ಸದ್ಯ ಒಂದರ ಹಿಂದೆ ಒಂದರಂತೆ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿವೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ದ್ವಿಪಕ್ಷೀಯ ಸರಣಿ ಒಂದು ಕಡೆಯಾದರೆ, ಮತ್ತೊಂದೆಡೆ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಸಹ ನಡೆಯುತ್ತಿದೆ. ಇದಾದ ನಂತರ ಮಾರ್ಚ್ 31ರಿಂದ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಸೀಸನ್ ಸಹ ಆರಂಭಗೊಳ್ಳಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಋತುವಿಗೆ ಕೆಲವೇ ದಿನಗಳ ಸಮಯ ಬಾಕಿ ಉಳಿದಿದ್ದು, ಎಲ್ಲಾ ಹತ್ತು ತಂಡಗಳು ಟಿ20 ಪಂದ್ಯಾವಳಿಗಾಗಿ ತಯಾರಿ ಆರಂಭಿಸಿವೆ. ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಉದ್ಘಾಟನಾ ಪಂದ್ಯದ ಮೂಲಕ ಚಾಲನೆ ಸಿಗಲಿದೆ.
ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಕೆಲವು ವಾರಗಳ ಹಿಂದೆಯೇ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಇದೀಗ ಉಳಿದ ತಂಡಗಳು ತಮ್ಮ ತವರಿನ ಕ್ರೀಡಾಂಗಣದಲ್ಲಿ ಶಿಬಿರಗಳನ್ನು ಪೂರ್ಣಗೊಳಿಸುತ್ತಿವೆ.

ಐಪಿಎಲ್‌ಗಾಗಿ ಪ್ರೇಕ್ಷಕರು, ಕ್ರೀಡಾಭಿಮಾನಿಗಳಲ್ಲಿ ಉತ್ಸಾಹ ಜೋರಾಗಿದೆ. ಇದೇ ವೇಳೆ ಮಾಜಿ ಕ್ರಿಕೆಟಿಗರು ಮತ್ತು ವೀಕ್ಷಕ ವಿವರಣೆಗಾರರು ತಮ್ಮ ನೆಚ್ಚಿನ ತಂಡಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಎಸ್ ಶ್ರೀಶಾಂತ್ ಈ ಬಾರಿಯ ಐಪಿಎಲ್ ಟ್ರೋಫಿ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
'ಸ್ಪೋರ್ಟ್ಸ್ ಯಾರಿ'ಗೆ ನೀಡಿದ ಸಂದರ್ಶನದಲ್ಲಿ, "ಆರ್‌ಸಿಬಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಉತ್ತಮ ಅವಕಾಶವಿದೆ. ಆದರೆ ಸಿಎಸ್‌ಕೆ ತಂಡ ಈ ಬಾರಿ ಟ್ರೋಫಿ ಗೆಲ್ಲುತ್ತದೆ ಎಂದು ನಾನು ಯೋಚಿಸುವುದಿಲ್ಲ," ಎಂದು ಮಾಜಿ ವೇಗಿ ಎಸ್ ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ.
"ಮಲಯಾಳಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಾನು ಬೆಂಬಲ ನೀಡುತ್ತಿದ್ದೇನೆ. ಆದರೆ ಹೊಸ ತಂಡ ಪ್ರಶಸ್ತಿ ಗೆಲ್ಲಬೇಕು. 2023ರ ಐಪಿಎಲ್ ಟ್ರೋಫಿಯನ್ನು ಆರ್‌ಸಿಬಿ ತಂಡ ಗೆದ್ದರೆ ನನಗೆ ತುಂಬಾ ಸಂತೋಷವಾಗುತ್ತದೆ. ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ಗಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಹೀಗಾಗಿ ಆರ್‌ಸಿಬಿ ಟ್ರೋಫಿ ಗೆದ್ದರೆ ಅದು ಉತ್ತಮವಾಗಿರುತ್ತದೆ," ಎಂದು ಎಸ್ ಶ್ರೀಶಾಂತ್ ತಿಳಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಒಂದು ಕಾಲದಲ್ಲಿ ಐಪಿಎಲ್‌ನ ಅತ್ಯಂತ ಸ್ಥಿರತೆಯಿಂದ ಕೂಡಿದ ತಂಡವೆಂದು ಹೆಸರಾಗಿತ್ತು. ಸತತ ಹತ್ತು ಐಪಿಎಲ್ ಋತುಗಳಲ್ಲಿ ಎರಡನೇ ಸುತ್ತಿಗೆ ಅರ್ಹತೆ ಪಡೆದಿತ್ತು. ಎರಡು ವರ್ಷಗಳ ಬ್ಯಾನ್ ನಂತರ, ಸಿಎಸ್‌ಕೆ 2021ರಲ್ಲಿ ಟ್ರೋಫಿ ಗೆದ್ದು ಅದ್ಭುತವಾಗಿ ಪುನರಾಗಮನ ಮಾಡಿದರೂ, 2022ರ ಐಪಿಎಲ್‌ನ ಲೀಗ್ ಹಂತದಲ್ಲಿ ಮುಗ್ಗರಿಸಿತು.
ಇತ್ತ ಐಪಿಎಲ್‌ನ ಪ್ರತಿ ಋತುವಿನ ಭಾಗವಾಗಿರುವ ಆರ್‌ಸಿಬಿ ತಂಡ ಈವರೆಗೆ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. 2022ರ ಐಪಿಎಲ್‌ನಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆದರೂ, 2ನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿತು.
ಆದರೆ, ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಆರ್‌ಸಿಬಿ ತಂಡವೂ ಒಂದಾಗಿದ್ದು, 2023ರ ಐಪಿಎಲ್ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್ ಆಲ್‌ರೌಂಡರ್ ವಿಲ್ ಜಾಕ್ಸ್ ಗಾಯಗೊಂಡು ಐಪಿಎಲ್ ಲೀಗ್‌ನಿಂದ ಹೊರಬಿದ್ದಿದ್ದಾರೆ. ಇದೀಗ ಅವರ ಬದಲಾಗಿ ನ್ಯೂಜಿಲೆಂಡ್‌ನ ಆಲ್‌ರೌಂಡರ್ ಮೈಕಲ್ ಬ್ರೇಸ್‌ವೆಲ್ ಅವರನ್ನು ಆರ್‌ಸಿಬಿ ತಂಡ ಆಯ್ಕೆ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications