
ಇಂದು ( ಮೇ 23 ) ಚೆನ್ನೈನ ಎಂಎ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಶುಬ್‌ಮನ್ ಗಿಲ್ ಅಪರೂಪದ ದಾಖಲೆ ಬರೆದಿದ್ದಾರೆ.
ಪಂದ್ಯದಲ್ಲಿ 38 ಎಸೆತಗಳಲ್ಲಿ 42 ರನ್ ಬಾರಿಸಿದ ಶುಬ್‌ಮನ್ ಗಿಲ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ 700 ರನ್‌ಗಳನ್ನು ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಸೀಸನ್‌ವೊಂದರಲ್ಲಿ 700 ರನ್‌ಗಳನ್ನು ಪೂರೈಸಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 973 ರನ್ ಬಾರಿಸುವ ಮೂಲಕ ಈ ದಾಖಲೆ ಬರೆದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದರು.
ಸದ್ಯ ಶುಬ್‌ಮನ್ ಗಿಲ್ ಈ ಪಂದ್ಯ ಮುಗಿದ ನಂತರ ಈ ಬಾರಿಯ ಟೂರ್ನಿಯಲ್ಲಿ 15 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು, 722 ರನ್ ಕಲೆಹಾಕಿದ್ದಾರೆ. ಇನ್ನು ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಸೋಲನ್ನು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲ್ಲಲು 173 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಗುಜರಾತ್ ಟೈಟನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ದಾಳಿಗೆ ಮಣಿದು 20 ಓವರ್‌ಗಳಲ್ಲಿ 157 ರನ್‌ಗಳಿಗೆ ಆಲ್‌ಔಟ್ ಆಗಿ 15 ರನ್‌ಗಳ ಅಂತರದ ಸೋಲನ್ನು ಅನುಭವಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ತಲುಪಿದ್ದು, ಸೋತಿರುವ ಗುಜರಾತ್ ಟೈಟನ್ಸ್ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ಬರುವ ತಂಡದ ಸೆಣಸಾಟ ನಡೆಸಲಿದೆ.
ಐಪಿಎಲ್ ಇತಿಹಾಸದಲ್ಲಿ ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿ
1. 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ 973 ರನ್ ದಾಖಲಿಸಿದ್ದರು. ಇದು ಸಾರ್ವಕಾಲಿಕ ದಾಖಲೆಯಾಗಿದೆ.
2.2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ 863 ರನ್ ಬಾರಿಸಿದ್ದರು.
3. 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಡೇವಿಡ್ ವಾರ್ನರ್ 848 ರನ್ ಬಾರಿಸಿದ್ದರು.
4. 2018ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಸನ್ ರೈಸರ್ಸ್ ಪರ ಕೇನ್ ವಿಲಿಯಮ್ಸನ್ 735 ರನ್ ದಾಖಲಿಸಿದ್ದರು.
5. 2012ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರ್‌ಸಿಬಿ ಪರ ಕ್ರಿಸ್ ಗೇಲ್ 733 ರನ್ ದಾಖಲಿಸಿದ್ದರು.
6. 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮೈಕ್ ಹಸ್ಸಿ 733 ರನ್ ದಾಖಲಿಸಿದ್ದರು.
7. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಾಫ್ ಡು ಪ್ಲೆಸಿಸ್ 730 ರನ್ ಬಾರಿಸಿದ್ದಾರೆ.
8. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಪರ ಶುಬ್‌ಮನ್ ಗಿಲ್ 722 ರನ್ ಗಳಿಸಿದ್ದಾರೆ.*