ಸೋಮವಾರ, ಏಪ್ರಿಲ್ 10ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ರೋಚಕವಾಗಿ ಕೇವಲ 1 ವಿಕೆಟ್‌ನಿಂದ ಗೆಲುವು ದಾಖಲಿಸಿತು.
ಆರ್‌ಸಿಬಿ ನೀಡಿದ 213 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಗೆಲುವಿನ ಗುರಿ ತಲುಪಿತು. ಈ ಮೂಲಕ ಆರ್‌ಸಿಬಿ ತಂಡಕ್ಕೆ ಸತತ ಎರಡನೇ ಸೋಲು ಎದುರಾಯಿತು. ಲಕ್ನೋ ಸೂಪರ್ ಜೈಂಟ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಉತ್ತಮ ಆರಂಭವನ್ನು ಪಡೆದುಕೊಂಡಿತು. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಜೋಡಿ ಮೊದಲ ವಿಕೆಟ್‌ಗೆ 11.3 ಓವರ್‌ಗಳಲ್ಲಿ 96 ರನ್‌ಗಳ ಜೊತೆಯಾಟ ನೀಡಿದರು.
ಬೆಂಗಳೂರಿನ ಮೈದಾನದಲ್ಲಿ ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ಅಜೇಯ 82 ರನ್ ಬಾರಿದ್ದರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮತ್ತೊಂದು ಅರ್ಧಶತಕ ಸಿಡಿಸಿದರು.
ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 61 ರನ್ ಗಳಿಸಿದಾಗ, ಇದರಲ್ಲಿ 4 ಬೌಂಡರಿ ಮತ್ತು 4 ಬೃಹತ್ ಸಿಕ್ಸರ್ ಸೇರಿದ್ದವು. ಇದೀಗ ವಿರಾಟ್ ಕೊಹ್ಲಿ ತಮ್ಮ 218 ಐಪಿಎಲ್ ಇನ್ನಿಂಗ್ಸ್‌ಗಳಿಂದ 227 ಸಿಕ್ಸರ್‌ಗಳನ್ನು ದಾಖಲಿಸಿದರು. ಈ ವೇಳೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಬ್ಯಾಟರ್ ಕೀರನ್ ಪೊಲಾರ್ಡ್ ಅವರ ದಾಖಲೆಯನ್ನು ಹಿಂದಿಕ್ಕಿದರು.

ವೆಸ್ಟ್ ಇಂಡೀಸ್‌ನ ಲೆಜೆಂಡ್ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಅವರು 2022ರ ಐಪಿಎಲ್ ಆವೃತ್ತಿಯ ನಂತರ ನಿವೃತ್ತರಾದಾಗ 171 ಐಪಿಎಲ್ ಇನ್ನಿಂಗ್ಸ್‌ಗಳಿಂದ 223 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಅಗ್ರ ಐದು ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಸಿಎಸ್‌ಕೆ ನಾಯಕ ಎಂಎಸ್ ಧೋನಿಗಿಂತ ಕೇವಲ ಐದು ಸಿಕ್ಸರ್‌ಗಳಿಂದ ಹಿಂದೆ ಇದ್ದಾರೆ. ಎಂಎಸ್ ಧೋನಿ ತಮ್ಮ ಹೆಸರಿಗೆ 232 ಸಿಕ್ಸರ್‌ಗಳನ್ನು ಹೊಂದಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಬಾರಿಸಿದ ನಾಲ್ವರು ಆಟಗಾರರು
ಇನ್ನು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 241 ಸಿಕ್ಸರ್‌ಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಸ್ಟಾರ್ ಎಬಿ ಡಿವಿಲಿಯರ್ಸ್ 170 ಇನ್ನಿಂಗ್ಸ್‌ಗಳಿಂದ 251 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಆರ್‌ಸಿಬಿ ತಂಡದ ಮತ್ತೊಬ್ಬ ಮಾಜಿ ಆಟಗಾರ ಕ್ರಿಸ್ ಗೇಲ್ ಕೇವಲ 170 ಐಪಿಎಲ್ ಇನ್ನಿಂಗ್ಸ್‌ಗಳಿಂದ 357 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಇನ್ನೂ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಮತ್ತು ಎಂಎಸ್ ಧೋನಿ ನಂತರ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಐಪಿಎಲ್ ಇತಿಹಾಸದಲ್ಲಿ 200ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಏಕೈಕ ಸಕ್ರಿಯ ಕ್ರಿಕೆಟಿಗರಾಗಿದ್ದಾರೆ.

34 ವರ್ಷದ ಅನುಭವಿ ವಿರಾಟ್ ಕೊಹ್ಲಿ ಐಪಿಎಲ್ 2023ರ ತಮ್ಮ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 6 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳ ನೆರವಿನಿಂದ 49 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದ್ದರು. ಈ ಐಪಿಎಲ್ ಋತುವಿನಲ್ಲಿ ವಿರಾಟ್ ಕೊಹ್ಲಿ ಈಗಾಗಲೇ 3 ಇನ್ನಿಂಗ್ಸ್‌ಗಳಿಂದ 9 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಕ್ರಿಸ್ ಗೇಲ್- 142 ಪಂದ್ಯ - 141 ಇನ್ನಿಂಗ್ಸ್ - 357 ಸಿಕ್ಸರ್
ಎಬಿ ಡಿವಿಲಿಯರ್ಸ್- 184 ಪಂದ್ಯ - 170 ಇನ್ನಿಂಗ್ಸ್- 251 ಸಿಕ್ಸರ್
ರೋಹಿತ್ ಶರ್ಮಾ - 229 ಪಂದ್ಯ - 224 ಇನ್ನಿಂಗ್ಸ್ - 241 ಸಿಕ್ಸರ್
ಎಂಎಸ್ ಧೋನಿ - 237 ಪಂದ್ಯ - 208 ಪಂದ್ಯ - 232 ಸಿಕ್ಸರ್
ವಿರಾಟ್ ಕೊಹ್ಲಿ - 226 ಪಂದ್ಯ - 218 ಪಂದ್ಯ - 227 ಸಿಕ್ಸರ್