IPL 2023: ಒಂದೇ ಪಂದ್ಯದಲ್ಲಿ ಐಪಿಎಲ್‌ನ ಪ್ರಮುಖ ಮೈಲಿಗಲ್ಲು ತಲುಪಿದ ವೃದ್ಧಿಮಾನ್ ಸಹಾ, ಡೇವಿಡ್ ಮಿಲ್ಲರ್
ಗುರುವಾರ, ಏಪ್ರಿಲ್ 13ರಂದು ಮೊಹಾಲಿಯಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 18ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಕೊನೆಯ ಓವರ್‌ನಲ್ಲಿ ಗೆದ್ದು ಬೀಗಿತು.
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ನೀಡಿದ್ದ 154 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ 19.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿ 6 ವಿಕೆಟ್‌ಗಳ ಗೆಲುವು ಸಾಧಿಸಿತು.

ಗುಜರಾತ್ ಟೈಟನ್ಸ್ ತಂಡದ ಗೆಲುವಿನಲ್ಲಿ ಅನುಭವಿ ಆಟಗಾರ ವೃದ್ಧಿಮಾನ್ ಸಹಾ 30 ರನ್‌ಗಳ ಕೊಡುಗೆ ನೀಡಿದರು. ಇದೇ ವೇಳೆ ವೃದ್ಧಿಮಾನ್ ಸಹಾ ಮತ್ತು ಡೇವಿಡ್ ಮಿಲ್ಲರ್ ಐಪಿಎಲ್‌ನಲ್ಲಿ ಪ್ರಮುಖ ಮೈಲಿಗಲ್ಲು ಸ್ಥಾಪಿಸಿದರು.
ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ತಂಡದ ಗೆಲುವಿನಲ್ಲಿ ಭಾಗಿಯಾದ ವೃದ್ಧಿಮಾನ್ ಸಹಾ ಮತ್ತು ಡೇವಿಡ್ ಮಿಲ್ಲರ್ ಐಪಿಎಲ್‌ನಲ್ಲಿ 2,500 ರನ್‌ಗಳನ್ನು ಪೂರೈಸಿದರು. ಗುಜರಾತ್ ಟೈಟನ್ಸ್ ತಂಡದ ರನ್ ಚೇಸಿಂಗ್ ವೇಳೆ ವೃದ್ಧಿಮಾನ್ ಸಹಾ 19 ಎಸೆತಗಳಲ್ಲಿ 30 ರನ್ ಬಾರಿಸಿದರೆ, ಡೇವಿಡ್ ಮಿಲ್ಲರ್ 18 ಎಸೆತಗಳಲ್ಲಿ ಅಜೇಯ 17 ರನ್ ಗಳಿಸಿದರು.
ಈ ಪಂದ್ಯದ ನಂತರ ವೃದ್ಧಿಮಾನ್ ಸಹಾ ಈವರೆಗೆ 148 ಐಪಿಎಲ್ ಪಂದ್ಯಗಳಲ್ಲಿ 2513 ರನ್ ಗಳಿಸಿದ್ದರೆ, ಡೇವಿಡ್ ಮಿಲ್ಲರ್ 108 ಪಂದ್ಯಗಳಲ್ಲಿ 2505 ರನ್ ಗಳಿಸಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಹಾಲಿ ಚಾಂಪಿಯನ್ ತಂಡದ ಪ್ರಮುಖರಾಗಿದ್ದಾರೆ.

ಶುಭ್ಮನ್ ಗಿಲ್ ಅರ್ಧಶತಕ; ಗುಜರಾತ್ ಟೈಟನ್ಸ್‌ಗೆ ರೋಚಕ ಗೆಲುವು
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಏಕೆಂದರೆ, ಶಿಖರ್ ಧವನ್ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಇಬ್ಬರೂ ಉತ್ತಮ ಅಡಿಪಾಯ ಹಾಕಲು ಸಾಧ್ಯವಾಗಲಿಲ್ಲ.
ಈ ಆರಂಭಿಕ ಜೋಡಿ ಕೇವಲ ಎಂಟು ರನ್‌ಗಳನ್ನು ಸ್ಕೋರ್ ಬೋರ್ಡ್‌ನಲ್ಲಿ ಕಲೆಹಾಕಿದರು. ನಂತರ ಬಂದ 27 ವರ್ಷದ ಆಸ್ಟ್ರೇಲಿಯಾದ ಬ್ಯಾಟರ್ ಮ್ಯಾಟ್ ಶಾರ್ಟ್ 24 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 36 ರನ್ ಗಳಿಸಿ ಪಂಜಾಬ್ ಕಿಂಗ್ಸ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಕೆಲವು ಉತ್ತಮ ಪ್ರದರ್ಶನಗಳಿಂದ ಶಿಖರ್ ಧವನ್ ನಾಯಕತ್ವದ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಲು ಯಶಸ್ವಿಯಾಯಿತು. ರನ್ ಚೇಸಿಂಗ್ ವೇಳೆ ಶುಭ್ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಗುಜರಾತ್ ಟೈಟನ್ಸ್‌ಗೆ ಸ್ಫೋಟಕ ಆರಂಭ ಒದಗಿಸಿದರು.
23 ವರ್ಷದ ಶುಭ್ಮನ್ ಗಿಲ್ 49 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 67 ರನ್ ಗಳಿಸಿ ಹಾಲಿ ಚಾಂಪಿಯನ್ ಗೆಲುವಿನ ಕಾರಣರಾದರು. ಅಂತಿಮ ಓವರ್‌ನಲ್ಲಿ ಗುಜರಾತ್ ತಂಡಕ್ಕೆ ಏಳು ರನ್‌ಗಳ ಅಗತ್ಯವಿತ್ತು. ಈ ವೇಳೆ ಸ್ಯಾಮ್ ಕರ್ರಾನ್ ಅವರು ಶುಭ್ಮನ್ ಗಿಲ್ ಅವರನ್ನು ಔಟ್ ಮಾಡಿದರು. ಕೊನೆಯ ಎರಡು ಎಸೆತಗಳಲ್ಲಿ 4 ರನ್ ಬೇಕಿದ್ದಾಗ ರಾಹುಲ್ ತೆವಾಟಿಯಾ ಬೌಂಡರಿ ಬಾರಿಸಿ ಗೆಲುವು ತಂದುಕೊಟ್ಟರು.
ಪಂದ್ಯದ ನಂತರ ಗುಜರಾತ್ ಟೈಟನ್ಸ್ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು 6 ಅಂಕಗಳೊಂದಿಗೆ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಗೆದ್ದು, 4 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಕುಸಿಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications