ಮಂಗಳವಾರ, ಮಾರ್ಚ್ 26ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಏಳನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ರನ್‌ಗಳ ಅದ್ಭುತ ಗೆಲುವು ಸಾಧಿಸಿತು.
ಈ ಮೂಲಕ ಸತತ ಎರಡನೇ ಗೆಲುವಿನ ಮೂಲಕ 4 ಅಂಕಗಳೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಇನ್ನು ಗುಜರಾತ್ ಟೈಟನ್ಸ್ ಮೊದಲ ಪಂದ್ಯದ ಗೆಲುವಿನ ನಂತರ, ಇದೀಗ ಎರಡನೇ ಪಂದ್ಯದಲ್ಲಿ ಸೋಲು ಅನುಭವಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶಿವಂ ದುಬೆ ಮತ್ತು ರಚಿನ್ ರವೀಂದ್ರ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್‌ಗಳನ್ನು ಕಲೆಹಾಕಿತು.
207 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 143 ರನ್‌ಗಳನ್ನು ಗಳಿಸಿ 63 ರನ್‌ಗಳ ಭಾರೀ ಅಂತರದಿಂದ ಮುಖಭಂಗ ಅನುಭವಿಸಿತು.
ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಶುಭ್ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಉತ್ತಮ ಆರಂಭ ನೀಡಿದರೂ, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಶುಭ್ಮನ್ ಗಿಲ್ 5 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರೆ, ವೃದ್ಧಿಮಾನ್ ಸಹಾ 17 ಎಸೆತಗಳಲ್ಲಿ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ಸಾಯಿ ಸುದರ್ಶನ್ 31 ಎಸೆತಗಳಲ್ಲಿ 37 ರನ್, ವಿಜಯ್ ಶಂಕರ್ 12 ರನ್, ಡೇವಿಡ್ ಮಿಲ್ಲರ್ 21 ರನ್, ಅಜ್ಮತುಲ್ಲಾ ಒಮರ್ಜಾಯ್ 11 ರನ್, ರಾಹುಲ್ ತೆವಾಟಿಯಾ 6 ರನ್, ಉಮೇಶ್ ಯಾದವ್ 10 ರನ್ ಗಳಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬೌಲಿಂಗ್‌ನಲ್ಲಿ ದೀಪಕ್ ಚಹಾರ್, ಮುಸ್ತಾಪಿಜುರ್ ರಹಮಾನ್ ಮತ್ತು ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಡೇರಿಲ್ ಮಿಚೆಲ್ ಮತ್ತು ಮತೀಶ್ ಪತಿರಾನ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರಂಭಿಕರಾದ ರಚಿನ್ ರವೀಂದ್ರ ಮತ್ತು ರುತುರಾಜ್ ಗಾಯಕ್ವಾಡ್ ಭರ್ಜರಿ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 62 ರನ್‌ಗಳ ಜೊತೆಯಾಟ ನಿರ್ಮಿಸಿತು.
ರಚಿನ್ ರವೀಂದ್ರ 20 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 46 ರನ್ ಬಾರಿಸಿದರೆ, ನಾಯಕ ರುತುರಾಜ್ ಗಾಯಕ್ವಾಡ್ 36 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 46 ರನ್ ಗಳಿಸಿದರು.

ನಂತರ ಅಜಿಂಕ್ಯ ರಹಾನೆ 12 ರನ್ ಗಳಿಸಿ ಔಟಾದರೆ, ಬಳಿಕ ಬಂದ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು ಮತ್ತು ಕೇವಲ 23 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಮೇತ 51 ರನ್ ಬಾರಿಸಿದರು. ಉಳಿದಂತೆ ಡೇರಿಲ್ ಮಿಚೆಲ್ 24 ರನ್, ಸಮೀರ್ ರಿಜ್ವಿ 14 ರನ್ ಮತ್ತು ರವೀಂದ್ರ ಜಡೇಜಾ 7 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ರಶೀದ್ ಖಾನ್ 2 ವಿಕೆಟ್ ಪಡೆದರೆ, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್ ಮತ್ತು ಮೋಹಿತ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು. ಭರ್ಜರಿ ಅರ್ಧಶತಕ ಸಿಡಿಸಿದ ಶಿವಂ ದುಬೆ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.