2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನ ಕೆಲವು ತಂಡಗಳು ಗಾಯಗಳಿಂದ ತತ್ತರಿಸಿವೆ. ಹಲವು ಆಟಗಾರರು ಗಾಯ ಮತ್ತು ಇತರೆ ಕಾರಣಗಳಿಂದ ಪಂದ್ಯಾವಳಿಯಿಂದ ಹೊರುಗುಳಿದರೆ, ಇನ್ನು ಕೆಲವರು ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
ಇನ್ನು ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ 2024ರ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಪಾದದ ಗಾಯಕ್ಕೆ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳಲು ವಿಫಲರಾದ ಕಾರಣ, ಗುಜರಾತ್ ಟೈಟನ್ಸ್ ತಂಡದಿಂದ ಹೊರಗುಳಿದರು.
ಇದೀಗ ಗುಜರಾತ್ ಟೈಟನ್ಸ್ (ಜಿಟಿ) ಫ್ರಾಂಚೈಸಿಯು ಗಾಯಾಳು ಮೊಹಮ್ಮದ್ ಶಮಿ ಬದಲಿಗೆ ವೇಗಿ ಸಂದೀಪ್ ವಾರಿಯರ್ ಅವರನ್ನು 2024ರ ಐಪಿಎಲ್‌ಗೆ ಆಯ್ಕೆ ಮಾಡಿದೆ.

ಇದೇ ವೇಳೆ ಮುಂಬೈ ಇಂಡಿಯನ್ಸ್ (ಎಂಐ) 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಗೆ ದಿಲ್ಶನ್ ಮಧುಶಂಕ ಅವರ ಬದಲಿಯಾಗಿ ಕ್ವೆನಾ ಮಫಕಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ.
ಭಾರತ ರಾಷ್ಟ್ರೀಯ ತಂಡದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಇತ್ತೀಚೆಗಷ್ಟೇ ಬಲ ಹಿಮ್ಮಡಿ ಸಮಸ್ಯೆಗೆ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದೀಗ ಗುಣಮುಖರಾಗುತ್ತಿದ್ದಾರೆ. ಅವರ ಬದಲಿ ಆಟಗಾರ ಸಂದೀಪ್ ವಾರಿಯರ್ ಈವರೆಗೆ ಐದು ಐಪಿಎಲ್ ಪಂದ್ಯಗಳನ್ನು ಆಡಿದ್ದು, 50 ಲಕ್ಷ ರೂಪಾಯಿಗೆ ಗುಜರಾತ್ ಟೈಟನ್ಸ್ ತಂಡ ಸೇರಲಿದ್ದಾರೆ.
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‌ಗಳಿಂದ ಸೋತ ನಂತರ, ಮೊಹಮ್ಮದ್ ಶಮಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ.
ಸಂದೀಪ್ ವಾರಿಯರ್‌ಗೆ ಸಂಬಂಧಿಸಿದಂತೆ 32 ವರ್ಷದ ಬೌಲರ್ 2019ರಿಂದ ಐದು ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ, 7.88ರ ಎಕಾನಮಿ ದರದಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು.
"ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ, ಇತ್ತೀಚೆಗೆ ತಮ್ಮ ಬಲ ಹಿಮ್ಮಡಿ ಸಮಸ್ಯೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ," ಎಂದು ಐಪಿಎಲ್ ಹೇಳಿಕೆ ಬಿಡುಗಡೆ ಮಾಡಿದೆ.
"ಮೊಹಮ್ಮದ್ ಶಮಿ ಬದಲಿಗೆ, ಸಂದೀಪ್ ವಾರಿಯರ್ ಸ್ಥಾನ ತುಂಬಲಿದ್ದಾರೆ. ಇದುವರೆಗೆ 5 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ಮೂಲ ಬೆಲೆ 50 ಲಕ್ಷ ರೂಪಾಯಿಗೆ ಗುಜರಾತ್ ಟೈಟನ್ಸ್ ಸೇರುತ್ತಾರೆ," ಎಂದು ಐಪಿಎಲ್ ಪೋಸ್ಟ್ ಮಾಡಿದೆ.

ಸಂದೀಪ್ ವಾರಿಯರ್ ಅವರಿಗೆ ಗುಜರಾತ್ ಟೈಟನ್ಸ್ ತಂಡ ನಾಲ್ಕನೇ ಐಪಿಎಲ್ ಫ್ರಾಂಚೈಸ್ ಆಗಿದ್ದು, ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಪರ ಆಡಿದ್ದರು.
ಮೋಹಿತ್ ಶರ್ಮಾ, ಜೋಶ್ ಲಿಟಲ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ಕಾರ್ತಿಕ್ ತ್ಯಾಗಿ, ದರ್ಶನ್ ನಲ್ಕಂಡೆ ಮತ್ತು ಸುಶಾಂತ್ ಮಿಶ್ರಾ ಅವರನ್ನು ಒಳಗೊಂಡ ವೇಗದ ಬೌಲರ್‌ಗಳ ತಂಡವನ್ನು ಸಂದೀಪ್ ವಾರಿಯರ್ ಸೇರಲಿದ್ದಾರೆ.
ಶೆಫೀಲ್ಡ್ ಶೀಲ್ಡ್ ಫೈನಲ್‌ನಲ್ಲಿ ಕೀಪರ್-ಬ್ಯಾಟರ್ ಟ್ಯಾಸ್ಮೆನಿಯಾ ಪರ ಆಡುವ ನಿರೀಕ್ಷೆಯಿರುವುದರಿಂದ ಗುಜರಾತ್ ಟೈಟನ್ಸ್ ಮೊದಲ ಎರಡು ಪಂದ್ಯಗಳಲ್ಲಿ ಮ್ಯಾಥ್ಯೂ ವೇಡ್ ಇಲ್ಲದೆಯೇ ಆಡಲಿದೆ.
ಬೈಕ್ ಅಪಘಾತದಲ್ಲಿ ಗಾಯಗೊಂಡಿರುವ ಜಾರ್ಖಂಡ್ ಬ್ಯಾಟ್ಸ್‌ಮನ್ ರಾಬಿನ್ ಮಿಂಜ್ ಅವರು ಆಡುವು ಇನ್ನೂ ಅನುಮಾನವೆನಿಸಿದೆ. ಐಪಿಎಲ್ ಮಿನಿ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ಗೆ ವ್ಯಾಪಾರಗೊಂಡ ನಂತರ, ಶುಭ್ಮನ್ ಗಿಲ್ ಈ ಋತುವಿನಲ್ಲಿ ಎರಡು ಬಾರಿ ಫೈನಲಿಸ್ಟ್ ಮತ್ತು 2022ರ ಐಪಿಎಲ್ ಚಾಂಪಿಯನ್ ತಂಡವನ್ನು ಮುನ್ನಡೆಸಲಿದ್ದಾರೆ.
ಭಾನುವಾರ, ಮಾರ್ಚ್ 24ರ ಸಂಜೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ತಮ್ಮ ಋತುವಿನ ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯಲಿವೆ.