IPL 2024 PlayOffs Scenario: ಜಿಟಿ ವಿರುದ್ಧ ಸಿಎಸ್‌ಕೆ ಸೋಲು; ಆರ್‌ಸಿಬಿ ಪ್ಲೇಆಫ್ ಕನಸಿಗೆ ಮತ್ತೆ ಜೀವ!
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕಳಪೆ ಅಭಿಯಾನ ಆರಂಭಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಲೀಗ್‌ನ ಕೊನೆಯಲ್ಲಿ ಅದ್ಭುತವಾಗಿ ಪುನರಾಗಮನ ಮಾಡುತ್ತಿದ್ದು, ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಗುರುವಾರದಂದು ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್‌ಗಳಿಂದ ಸೋಲಿಸಿ ಐಪಿಎಲ್ 2024ರಲ್ಲಿ 4ನೇ ಸತತ ಗೆಲುವು ಸಾಧಿಸಿತು ಮತ್ತು ಅಂಕಪಟ್ಟಿಯಲ್ಲಿ 10 ಅಂಕಗಳನ್ನು ಕಲೆಹಾಕಿ 7ನೇ ಸ್ಥಾನಕ್ಕೆ ಏರಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡವು ಅಧಿಕೃತವಾಗಿ ಅಗ್ರ 4 ಸ್ಥಾನಗಳ ರೇಸ್‌ನಿಂದ ಹೊರಹಾಕಲ್ಪಟ್ಟ ಎರಡನೇ ತಂಡವೆನಿಸಿತು. ಈಗಾಗಲೇ ಮುಂಬೈ ಇಂಡಿಯನ್ಸ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.

ಇದೀಗ ಶುಕ್ರವಾರದಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 35 ರನ್‌ಗಳಿಂದ ಸೋತ ಬಳಿಕ, ಆರ್‌ಸಿಬಿ ಪ್ಲೇಆಫ್ ಕನಸಿಗೆ ಮತ್ತೆ ಜೀವ ಬಂದಿದೆ.
ಐಪಿಎಲ್ 2024ರ ಅಭಿಯಾನದ ಲೀಗ್ ಹಂತದಲ್ಲಿ ಆರ್‌ಸಿಬಿ ಇನ್ನೂ ಎರಡು ಪಂದ್ಯಗಳನ್ನು ಆಡಲಿದ್ದು, ಆದರೆ ಎಲ್ಲವೂ ಅವರ ಕೈಯಲ್ಲಿಲ್ಲ. ಅಗ್ರ 4 ಸ್ಥಾನ ಪಡೆಯಲು ಸಾಧ್ಯವಿದ್ದರೂ, ಪ್ಲೇಆಫ್ ಸನ್ನಿವೇಶವು ಸುಲಭವಲ್ಲ.
ಪ್ರಸ್ತುತ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ತಲಾ 16 ಅಂಕಗಳೊಂದಿಗೆ ಅಗ್ರ 2 ಸ್ಥಾನಗಳನ್ನು ಭದ್ರಪಡಿಸಿಕೊಂಡಿವೆ.

ಇನ್ನು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕ್ರಮವಾಗಿ 14 ಮತ್ತು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
ಆರ್‌ಸಿಬಿ ತನ್ನ ಉಳಿದ ಪಂದ್ಯಗಳ ಗೆಲುವಿನೊಂದಿಗೆ ಗರಿಷ್ಠ 14 ಅಂಕಗಳನ್ನು ಪಡೆಯಬಹುದು. ಆದರೆ, ಆರ್‌ಸಿಬಿ ಪರವಾಗಿ ಎಲ್ಲವೂ ಸಾಗಲೂ ಇತರೆ ಕೆಲವು ಫಲಿತಾಂಶಗಳು ಅಂದುಕೊಂಡಂತೆ ನಡೆಯಬೇಕಿದೆ.
ಐಪಿಎಲ್ 2024: ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಹೇಗೆ ಪಡೆಯಬಹುದು?
ಸನ್ನಿವೇಶ 1: ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ಉಳಿದಿರುವ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಒಂದು ಪಂದ್ಯ ಸೋತರೂ ಪ್ಲೇಆಫ್ ರೇಸ್‌ನಿಂದ ಹೊರಬೀಳಲಿದೆ. ಆರ್‌ಸಿಬಿ ತಂಡವು ಪ್ಲೇಆಫ್ ಸ್ಥಾನಕ್ಕಾಗಿ ಸಿಎಸ್‌ಕೆ, ಎಸ್‌ಆರ್‌ಹೆಚ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎಲ್‌ಎಸ್‌ಜಿ ತಂಡಗಳೊಂದಿಗೆ ಸ್ಪರ್ಧಿಸುತ್ತಿದೆ.
ಸನ್ನಿವೇಶ 2: ಈಗಾಗಲೇ ಗುಜರಾತ್ ಟೈಟನ್ಸ್ ವಿರುದ್ಧ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಉಳಿದ ಎರಡು ಲೀಗ್ ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯದಲ್ಲಿ ಸೋಲು ಅನುಭವಿಸಬೇಕಿದೆ. ಸಿಎಸ್‌ಕೆ ತಂಡವು ಆರ್‌ಸಿಬಿ ಎದುರಿಸುವ ಮೊದಲು ರಾಜಸ್ಥಾನ್ ರಾಯಲ್ ತಂಡವನ್ನು ಎದುರಿಸಲಿದೆ.
ಸಿಎಸ್‌ಕೆ ಧನಾತ್ಮಕ ನೆಟ್ ರನ್ ರೇಟ್ +0.491 ಹೊಂದಿರುವುದರಿಂದ, ರುತುರಾಜ್ ಗಾಯಕ್ವಾಡ್ ನಾಯಕತ್ವದ ತಂಡಕ್ಕೆ ದೊಡ್ಡ ಸೋಲುಗಳು ನಿಜವಾಗಿಯೂ ಆರ್‌ಸಿಬಿ ತಂಡದ ಪ್ಲೇಆಫ್ ಕನಸಿಗೆ ಸಹಾಯ ಮಾಡಲಿವೆ.
ಸನ್ನಿವೇಶ 3: ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ ರೇಸ್‌ನಲ್ಲಿರುವ ಮತ್ತೊಂದು ತಂಡವಾಗಿದೆ. ಈವರೆಗೆ ಆಡಿದ 12 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ, ತಮ್ಮ ಹೆಸರಿಗೆ 12 ಅಂಕಗಳನ್ನು ಹೊಂದಿದ್ದಾರೆ. ಇನ್ನೂ 2 ಲೀಗ್ ಪಂದ್ಯಗಳು ಬಾಕಿಯಿದ್ದು, ಎಲ್‌ಎಸ್‌ಜಿ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನಾದರೂ ಸೋಲಬೇಕಿದೆ.
ಲಕ್ನೋ ಸೂಪರ್ ಜೈಂಟ್ಸ್ ತನ್ನ ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ, 16 ಅಂಕಗಳೊಂದಿಗೆ ಲೀಗ್ ಹಂತ ಮುಗಿಸಲಿದ್ದಾರೆ ಮತ್ತು ಆರ್‌ಸಿಬಿ ತಂಡ ಪ್ಲೇಆಫ್ ರೇಸ್‌ನಿಂದ ಹಿಂದೆ ಸರಿಯಲಿದೆ.
ಸನ್ನಿವೇಶ 4: ಡೆಲ್ಲಿ ಕ್ಯಾಪಿಟಲ್ಸ್ ಕೂಡ 12 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ ಅಗ್ರ 4 ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿದ್ದು, ತಮ್ಮ ಮುಂದಿನ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯ ಸೋಲಬೇಕಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಲ್‌ಎಸ್‌ಜಿ ಮತ್ತು ಆರ್‌ಸಿಬಿ ವಿರುದ್ಧ ಆಡಲಿದ್ದು, ಈ ಸಂದರ್ಭದಲ್ಲಿ ಎಲ್‌ಎಸ್‌ಜಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದರೆ ಆರ್‌ಸಿಬಿ ತಂಡಕ್ಕೆ ಹೆಚ್ಚು ಲಾಭ.
ಸನ್ನಿವೇಶ 5: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 3 ಅಥವಾ 4ನೇ ಸ್ಥಾನಕ್ಕೆ ಕೆಳಗಿಳಿಸಬಹುದು. ಇದು ಸಂಭವಿಸಲು ಎಸ್‌ಆರ್‌ಹೆಚ್ ತಮ್ಮ ಎಲ್ಲಾ ಪಂದ್ಯಗಳನ್ನು ಸೋಲುವ ಅಗತ್ಯವಿದೆ. ಅಲ್ಲದೆ ಅವರ ನೆಟ್ ರನ್ ರೇಟ್ ಆರ್‌ಸಿಬಿಗಿಂತ ಕಡಿಮೆಯಿರಬೇಕು. ಪ್ರಸ್ತುತ, ಹೈದರಾಬಾದ್ ತಂಡವು (+0.406) ಬೆಂಗಳೂರು (+0.217) ತಂಡಕ್ಕಿಂತ ಉತ್ತಮ ನೆಟ್ ರನ್ ರೇಟ್ ಹೊಂದಿದೆ.
ಮತ್ತೊಂದೆಡೆ, ಗುಜರಾತ್ ಟೈಟನ್ಸ್ ತಂಡ ಕೂಡ ಲೆಕ್ಕಾಚಾರವಾಗಿ ಪ್ಲೇಆಫ್ ಸ್ಥಾನಕ್ಕಾಗಿ ರೇಸ್‌ನಲ್ಲಿ ಓಡುತ್ತಿದೆ. ಆದರೆ ಅವರ ನೆಟ್ ರನ್ ರೇಟ್ -1.063 ಇರುವುದರಿಂದ ಯಾವುದೇ ತಂಡಗಳನ್ನು ಹಿಂದಿಕ್ಕುವ ಸಾಧ್ಯತೆಯಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications