IPL Auction 2023: ಭಾರತ ತಂಡದಲ್ಲಿ ಆಡದಿದ್ದರೂ, ಈ ಆರು ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಅದೃಷ್ಟ ಖುಲಾಯಿಸುವ ಸಾಧ್ಯತೆ

ಐಪಿಎಲ್ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. 10 ಫ್ರಾಂಚೈಸಿಗಳು ಕೊಚ್ಚಿನ ಐಷಾರಾಮಿ ಹೋಟೆಲ್‌ನಲ್ಲಿ ನಡೆಯಲಿದೆ. ಬೆನ್ ಸ್ಟೋಕ್ಸ್, ಕ್ಯಾಮರೂನ್ ಗ್ರೀನ್, ಸ್ಯಾಮ್ ಕರನ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಈ ಬಾರಿಯ ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇವರು ದೊಡ್ಡ ಮೊತ್ತವನ್ನು ಪಡೆಯುವ ಸಾಧ್ಯತೆ ಇದೆ.
ದೊಡ್ಡ ಹೆಸರುಗಳ ನಡುವೆಯೆ ಭಾರತೀಯ ತಂಡಕ್ಕಾಗಿ ಆಡದಿದ್ದರೂ ದೇಶೀಯ ಕ್ರಿಕೆಟ್‌ನಲ್ಲಿ, ಲೀಗ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಹಲವು ಅನ್‌ಕ್ಯಾಪ್ಡ್ ಆಟಗಾರರು ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ವಿದೇಶಿ ಆಟಗಾರರನ್ನು ಹೊರತು ಪಡಿಸಿ ಯುವ ಕ್ರಿಕೆಟಿಗರ ಬಗ್ಗೆ ಕೂಡ ಫ್ರಾಂಚೈಸಿಗಳು ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ.
ಭಾರತೀಯ ತಂಡಕ್ಕೆ ಆಡದೇ ಇದ್ದರೂ ಕೂಡ ಐಪಿಎಲ್‌ನಲ್ಲಿ ಕೋಟಿಗಟ್ಟಲೆ ಹಣ ಪಡೆದಿರುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಈ ಬಾರಿ ಕೂಡ ಹಲವು ಯುವ ಕ್ರಿಕೆಟಿಗರು ಇದ್ದಾರೆ. ಈ ಬಾರಿ ಮಿನಿ ಹರಾಜಿನಲ್ಲಿ ಕೂಡ ಅದೇ ರೀತಿ ಹಲವು ಯುವ ಕ್ರಿಕೆಟಿಗರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ. ಅಂತಹ 6 ಕ್ರಿಕೆಟಿಗರ ಬಗ್ಗೆ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಶಿವಂ ಮಾವಿಗೆ ಒಲಿಯುತ್ತಾ ಅದೃಷ್ಟ?
40 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿರುವ ಶಿವಂ ಮಾವಿ ಈ ಬಾರಿಯ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. ಗಂಟೆಗೆ 140 ಕಿಲೋ ಮೀಟರ್ ವೇಗದಲ್ಲಿ ಬೌಲ್ ಮಾಡುವ ಸಾಮರ್ಥ್ಯ ಹೊಂದಿರುವ ಶಿವಂ ಮಾವಿ, ಕಳೆದ ಐಪಿಎಲ್‌ನಲ್ಲಿ 7.25 ಕೋಟಿ ರುಪಾಯಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಖರೀದಿ ಮಾಡಿತ್ತು. ಆದರೆ, ಕಳೆದ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ ಅವರನ್ನು ಕೆಕೆಆರ್ ಬಿಡುಗಡೆ ಮಾಡಿತ್ತು. ಆರು ಪಂದ್ಯಗಳಿಂದ ಕೇವಲ ಐದು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು.
ಗಾಯದ ಸಮಸ್ಯೆಯಿಂದ ಕಳೆದ ಆವೃತ್ತಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ, ನಂತರ ಅವರು ಚೇತರಿಸಿಕೊಂಡಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು.

ಬಲಗೈ ವೇಗದ ಬೌಲರ್ ಯಶ್ ಠಾಕೂರ್
ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ತಂಡಕ್ಕೆ ಆಡುವ ಯಶ್ ಠಾಕೂರ್ ತಮ್ಮ ಕರಾರುವಕ್ಕಾದ ಬೌಲಿಂಗ್‌ನಿಂದ ಈ ಬಾರಿ ಗಮನ ಸೆಳೆದಿದ್ದಾರೆ. ಅದರಲ್ಲೂ ಯಶ್ ಠಾಕೂರ್, ಅಂತಿಮ ಓವರ್‌ಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್‌ನಲ್ಲಿ ಅವರು 10 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ.
ಕಳೆದ ಸೀಸನ್‌ನಲ್ಲಿ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ನೆಟ್ ಬೌಲರ್ ಆಗಿದ್ದರು. ಈ ಬಾರಿ ಯಶ್ ಠಾಕೂರ್ ಐಪಿಎಲ್‌ನಲ್ಲಿ ಹರಾಜಾಗುವ ವಿಶ್ವಾಸದಲ್ಲಿದ್ದಾರೆ. ಯಶ್ ಠಾಕೂರ್ 20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದಾರೆ.

ಎನ್ ಜಗದೀಶನ್ ದಾಖಲೆ ಮೊತ್ತ ಪಡೆಯುವ ಸಾಧ್ಯತೆ
ತಮಿಳುನಾಡಿನ ಬ್ಯಾಟರ್ ಎನ್ ಜಗದೀಶನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರು ಅರುಣಾಚಲ ಪ್ರದೇಶದ ವಿರುದ್ಧ 277 ರನ್‌ಗಳ ಗಳಿಸಿ ವಿಶ್ವದಾಖಲೆ ನಿರ್ಮಿಸಿದರು. ಸತತವಾಗಿ ಅವರು ಐದು ಶತಕಗಳನ್ನು ಸಿಡಿಸಿದರು.
ಕಳೆದ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಅವರನ್ನು ಬಿಡುಗಡೆ ಮಾಡಿತು. ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಜಗದೀಶನ್‌ಗಾಗಿ ಹಲವು ಫ್ರಾಂಚೈಸಿಗಳು ಭಾರಿ ಪೈಪೋಟಿ ನಡೆಸುವ ಸಾಧ್ಯತೆ ಇದೆ. ಅವರು 20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದಾರೆ.

ಬೌಲಿಂಗ್ ಆಲ್‌ರೌಂಡರ್ ಸನ್ವೀರ್ ಸಿಂಗ್
ಪಂಜಾಬ್ ತಂಡದ ಸನ್ವಿರ್ ಸಿಂಗ್ ಬೌಲಿಂಗ್ ಆಲ್‌ರೌಂಡರ್ ಆಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅವರು ಗಮನ ಸೆಳೆದಿದ್ದಾರೆ. ಭುವನೇಶ್ವರ್ ಕುಮಾರ್ ರೀತಿ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮೂರು ಇನ್ನಿಂಗ್ಸ್‌ಗಳಲ್ಲಿ 205.17 ಸ್ಟ್ರೈಕ್‌ರೇಟ್‌ನಲ್ಲಿ 119 ರನ್‌ಗಳನ್ನು ಸಿಡಿಸಿದ್ದಾರೆ. ಅವರ ಮೂಲ ಬೆಲೆ ಕೇವಲ 40 ಲಕ್ಷ ರುಪಾಯಿ ಆಗಿದ್ದು, ಪಂಜಾಬ್ ತಂಡದ ಭಾಗವಾಗುವ ಸಾಧ್ಯತೆ ಇದೆ.

ಗಮನ ಸೆಳೆದಿರುವ ಮುಖೇಶ್ ಕುಮಾರ್
ಬಂಗಾಳದ ವೇಗದ ಬೌಲರ್ ಮುಖೇಶ್ ಕುಮಾರ್ ವಿಜಯ್ ಹಜಾರೆ, ಸೈಯಸ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧದ ಭಾರತ ಎ ಸರಣಿಯ ಭಾಗವಾಗಿದ್ದರು.
ಸೆಪ್ಟೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು. ಲೈನ್ ಮತ್ತು ಲೆಂಗ್ತ್‌ನಲ್ಲಿ ನಿಯಂತ್ರಣ ಹೊಂದಿರುವ ಮುಖೇಶ್ ಕುಮಾರ್ ವಿಕೆಟ್ ಪಡೆಯುವ ಬೌಲರ್ ಆಗಿದ್ದಾರೆ. 20 ಲಕ್ಷದ ಮೂಲ ಬೆಲೆಯಲ್ಲಿ ಅವರು ಲಭ್ಯವಿದ್ದಾರೆ.

ಸ್ಫೋಟಕ ಬ್ಯಾಟರ್ ಆಕಾಶ್ ವಸಿಷ್ಟ್
ಹಿಮಾಚಲ ಪ್ರದೇಶದ 28 ವರ್ಷದ ಹಾರ್ಡ್ ಹಿಟ್ಟಿಂಗ್ ಬ್ಯಾಟರ್ ಆಕಾಶ್ ವಸಿಷ್ಟ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಆಡುವ ಕನಸು ಹೊಂದಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದ ಅವರು, ಹಿಮಾಚಲ ಪ್ರದೇಶ ತಂಡಕ್ಕಾಗಿ ಫಿನಿಶರ್ ಬ್ಯಾಟರ್ ಆಗಿ ಮಾರ್ಪಟ್ಟರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 163 ಸ್ಟ್ರೈಕ್ ರೇಟ್‌ನಲ್ಲಿ 216 ರನ್ ಗಳಸಿದ್ದಾರೆ. ಬ್ಯಾಟಿಂಗ್ ಜೊತೆಯಲ್ಲಿ ಅವರು ಆಫ್ ಸ್ಪಿನ್ ಬೌಲರ್ ಕೂಡ ಆಗಿದ್ದು, ಅತ್ಯುತ್ತಮ ಫೀಲ್ಡರ್ ಎನಿಸಿಕೊಂಡಿದ್ದಾರೆ. 20 ಲಕ್ಷ ಮೂಲ ಬೆಲೆ ಇರುವ ಈ ಪ್ರತಿಭಾವಂತ ಆಟಗಾರನಿಗೆ ಹಲವು ಫ್ರಾಂಚೈಸಿಗಳು ಬಿಡ್ ಮಾಡುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications