IPL Auction 2023 : ಬೆನ್ ಸ್ಟೋಕ್ಸ್ ತಂಡದಲ್ಲಿದ್ದರೂ ಈ ವಿಚಾರದಲ್ಲಿ ಸಿಎಸ್‌ಕೆ ದುರ್ಬಲವಾಗಿದೆ ಎಂದ ಮಾಜಿ ಕ್ರಿಕೆಟಿಗ

2023ರ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ರನ್ನು ಖರೀದಿ ಮಾಡಿದೆ. ಬೆನ್ ಸ್ಟೋಕ್ಸ್ ತಂಡಕ್ಕೆ ಸೇರಿದ ಬಳಿಕ ಸಿಎಸ್‌ಕೆ ಬಲಿಷ್ಠ ತಂಡದಂತೆ ಕಾಣುತ್ತಿದೆ. ಆದರೆ, ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಮಾತ್ರ ಸಿಎಸ್‌ಕೆ ತಂಡ ಬೌಲಿಂಗ್ ವಿಚಾರದಲ್ಲಿ ದುರ್ಬಲವಾಗಿದೆ ಎಂದು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅಂತಿ ಓವರ್ ಬೌಲಿಂಗ್ ಮಾಡುವ ಉತ್ತಮ ಬೌಲರ್ ಇಲ್ಲ ಎಂದು ಹೇಳಿದ್ದಾರೆ. ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಹೊರತು ಪಡಿಸಿದರೆ ಉಳಿದ ಬೌಲರ್‌ಗಳನ್ನು ನಂಬಲಾಗದು, ಜೇಮಿಸನ್ ಮಾತ್ರ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಏಕೈಕ ಗುಣಮಟ್ಟದ ವೇಗಿ ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಆಡುವ ಬಳಗದಲ್ಲಿ ಅವರು ನಾಲ್ಕನೇ ವಿದೇಶಿ ಆಟಗಾರನನ್ನು ಆಯ್ಕೆ ಮಾಡುವಾಗ ಕೈಲ್ ಜೇಮಿಸನ್, ಡ್ವೈನ್ ಪ್ರಿಟೋರಿಯಸ್ ಮತ್ತು ಮಹೀಶ್ ತೀಕ್ಷಣ ನಡುವೆ ಪೈಪೋಟಿ ನಡೆಯುತ್ತದೆ. ಅವರು ಬೌಲರ್ ಆಯ್ಕೆ ಮಾಡುವಲ್ಲಿ ಗೊಂದಲ ಉಂಟಾಗಲಿದೆ ಎಂದು ಹೇಳಿದ್ದಾರೆ. ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಡೆವೊನ್ ಕಾನ್ವೇ ಅವರ ಮೊದಲ ಮೂರು ಆಯ್ಕೆಯಾಗಿರಲಿದ್ದಾರೆ ಎಂದು ಜಾಫರ್ ಹೇಳಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಸಮಸ್ಯೆ
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಉತ್ತಮ ಬ್ಯಾಟರ್ ಮತ್ತು ಆಲ್‌ರೌಂಡರ್ ಇದ್ದಾರೆ. ಅವರ ಸ್ಪಿನ್ ವಿಭಾಗ ಕೂಡ ಉತ್ತಮವಾಗಿದೆ. ಆದರೆ, ವೇಗದ ಬೌಲಿಂಗ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಸಮಸ್ಯೆಯಿದೆ. ಅವರು ಸ್ಕೋರ್‌ಗಳನ್ನು ರಕ್ಷಿಸುವಲ್ಲಿ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಕಳೆದ ಸೀಸನ್‌ನಲ್ಲಿ ಕೂಡ ಇದು ಸಿಎಸ್‌ಕೆ ಸಮಸ್ಯೆಯಾಗಿತ್ತು ಎಂದು ಜಾಫರ್ ಹೇಳಿದ್ದಾರೆ.
ಮೊಯಿನ್ ಅಲಿ, ಬೆನ್ ಸ್ಟೋಕ್ಸ್ ಮತ್ತು ಡೆವೊನ್ ಕಾನ್ವೇ, ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ, ಆದರೆ ಉಳಿದ ಒಂದು ಸ್ಥಾನಕ್ಕಾಗಿ ಅವರು ಕೈಲ್ ಜೇಮಿಸನ್ ಅವರನ್ನು ಆಯ್ಕೆ ಮಾಡಬಹುದು, ಅದಕ್ಕಾಗಿ ಪ್ರಿಟೋರಿಯಸ್ ಮತ್ತು ಮಹೇಶ್ ತೀಕ್ಷಣ ಅವರನ್ನು ಕೈ ಬಿಡಬೇಕಾಗುತ್ತದೆ ಎಂದು ಹೇಳಿದರು.
IPL 2023 Auction: ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರರು ಪ್ರಾಬಲ್ಯ ಸಾಧಿಸಲು ಇಲ್ಲಿದೆ ಕಾರಣ

ಡ್ವೇನ್ ಬ್ರಾವೋಗೆ ಬದಲೀ ಆಟಗಾರ ಯಾರು?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಲ್‌ರೌಂಡರ್ ಆಗಿದ್ದವರು ಡ್ವೇನ್ ಬ್ರಾವೋ, ಡೆತ್ ಓವರ್ ಗಳಲ್ಲಿ ಅವರು ಅತ್ಯುತ್ತಮ ಬೌಲಿಂಗ್ ಮಾಡುತ್ತಿದ್ದರು. ಬ್ಯಾಟಿಂಗ್‌ನಲ್ಲಿ ಕೂಡ ಬ್ರಾವೋ ಕೊಡುಗೆ ಉತ್ತಮವಾಗಿತ್ತು. 2023ರ ಮಿನಿ ಹರಾಜಿಗೆ ಮುನ್ನ ಅವರು ಐಪಿಎಲ್‌ಗೆ ವಿದಾಯ ಹೇಳಿದ್ದು, ಸಿಎಸ್‌ಕೆ ತಂಡದ ಬೌಲಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ.
ಈ ಬಾರಿ ತಂಡದಲ್ಲಿ ಬೆನ್‌ಸ್ಟೋಕ್ಸ್ ಇದ್ದರೂ ಕೂಡ ಅವರು ಅಂತಿಮ ಓವರ್ ಗಳಲ್ಲಿ ಪರಿಣಾಮಕಾರಿ ಬೌಲರ್ ಆಗಲಾರರು. ಕಳೆದ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

ರಾಜವರ್ಧನ್ ಹಂಗರ್ಗೇಕರ್ ಉತ್ತಮ ಆಯ್ಕೆ
ಈ ಬಾರಿಯ ಮಿನಿ ಹರಾಜಿನಲ್ಲಿ ಸಿಎಸ್‌ಕೆ ದೇಶೀಯ ಆಟಗಾರರ ಖರೀದಿಯಲ್ಲಿ ಉತ್ತಮವಾಗಿದೆ ಎಂದು ವಾಸಿಂ ಜಾಫರ್ ಹೇಳಿದ್ದಾರೆ. "ಮಹಾರಾಷ್ಟ್ರ ತಂಡದ ಆಟಗಾರ ರಾಜವರ್ಧನ್ ಹಂಗರ್ಗೇಕರ್ ಅವರನ್ನು ಖರೀದಿ ಮಾಡಿದ್ದು ಉತ್ತಮ ನಿರ್ಧಾರ. ದೇಶೀಯ ಕ್ರಿಕೆಟ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ" ಎಂದು ಹೇಳಿದರು.
ಚೆನ್ನೈ ಸೂಪರ್ ಕಿಂಗ್ಸ್ ಇಬ್ಬರು ವಿದೇಶಿಯರು ಮತ್ತು ಐವರು ಭಾರತೀಯ ಆಟಗಾರನ್ನು ಖರೀದಿಸಿತು. ಬೆನ್ ಸ್ಟೋಕ್ಸ್ (16.25 ಕೋಟಿ ರು.), ಕೈಲ್ ಜೇಮಿಸನ್ (1 ಕೋಟಿ ರು.), ನಿಶಾಂತ್ ಸಂಧು (60 ಲಕ್ಷ ರು.), ಅಜಿಂಕ್ಯ ರಹಾನೆ (50 ಲಕ್ಷ ರು.), ಭಗತ್ ವರ್ಮಾ, ಅಜಯ್ ಮಂಡಲ್ ಮತ್ತು ಶೇಕ್ ರಶೀದ್ (ತಲಾ 20 ಲಕ್ಷ ರು.) ಸಿಎಸ್‌ಕೆ ತಂಡಕ್ಕೆ ಸೇರಿದ್ದಾರೆ.

2023ರ ಐಪಿಎಲ್‌ಗೆ ಸಿಎಸ್‌ಕೆ ತಂಡ
ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್‌ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಕೇಶ್ ದೇಶಪಾಂಡೆ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಕ್ ರಶೀದ್, ನಿಶಾಂತ್ ಸಂಧು, ಕೈಲ್ ಜೇಮಿಸನ್, ಅಜಯ್ ಮಂಡಲ್, ಭಗತ್ ವರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications