ಚೆನ್ನೈ-ಹೈದರಾಬಾದ್ ರೋಚಕ ಕದನ ಕಂಡು ಟ್ವಿಟ್ಟರಿಗರು ಪುಳಕಿತ
ಮುಂಬೈ, ಮೇ 23: ವಾಂಖೇಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕ್ವಾಲಿಫೈಯರ್ ಪಂದ್ಯ, ಕ್ರಿಕೆಟ್ ಪ್ರಿಯರಿಗೆ ಕ್ಷಣ ಕ್ಷಣದ ರೋಮಾಂಚನ ನೀಡಿತು.
ಸನ್ ರೈಸರ್ಸ್ ಹೈದರಾಬಾದ್ ನೀಡಿದ ತೀರಾ ಕಡಿಮೆ ಮೊತ್ತದ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಸುಲಭವಾಗಿ ಮುಟ್ಟಲಿದೆ ಎಂದೇ ಆರಂಭದಲ್ಲಿ ಭಾವಿಸಲಾಗಿತ್ತು.
ಆದರೆ, ಬಿಗಿ ಬೌಲಿಂಗ್ ದಾಳಿ ನಡೆಸಿದ ಹೈದರಾಬಾದ್, ಚೆನ್ನೈ ತಂಡವನ್ನು ಮಣಿಸಿ ಫೈನಲ್‌ಗೇರಿಯೇ ಬಿಟ್ಟಿತು ಎಂಬ ಹಂತಕ್ಕೆ ತಲುಪಿತ್ತು. ಕೊನೆಯ ಹಂತದಲ್ಲಿ ಮರು ಹೋರಾಟ ನಡೆಸಿದ ಚೆನ್ನೈ, ನೇರವಾಗಿ ಅಂತಿಮ ಘಟ್ಟದಲ್ಲಿ ಆಡುವ ಅರ್ಹತೆ ಪಡೆದುಕೊಂಡಿತು.
ಐಪಿಎಲ್‌ನ ಹನ್ನೊಂದು ಆವೃತ್ತಿಗಳಲ್ಲಿ ಚೆನ್ನೈ ತಂಡ ಎರಡು ಆವೃತ್ತಿಗಳಲ್ಲಿ ನಿಷೇಧದ ಕಾರಣ ಆಡಿರಲಿಲ್ಲ. ಇನ್ನು 9 ಆವೃತ್ತಿಗಳಲ್ಲಿ ಈ ತಂಡ ಫೈನಲ್‌ಗೆ ತಲುಪುತ್ತಿರುವುದು ಇದು ಏಳನೇ ಬಾರಿ.
ಎರಡು ವರ್ಷದ ಬಳಿಕ ಅಖಾಡಕ್ಕೆ ಇಳಿದ ಚೆನ್ನೈ ಮತ್ತೆ ಫೈನಲ್ ತಲುಪಿರುವುದು ಅದರ ಅಭಿಮಾನಿಗಳಲ್ಲಿ ಸಂಭ್ರಮ ಉಕ್ಕಿಸಿದ್ದರೆ, ಸೋತರೂ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶ ಇರುವುದು ಹೈದರಾಬಾದ್ ತಂಡದ ಅಭಿಮಾನಿಗಳಲ್ಲಿ ಸಮಾಧಾನ ಮುಡಿಸಿದೆ.
ಮಂಗಳವಾರದ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡದ ರೋಚಕ ಗೆಲುವಿನ ಕುರಿತು ಟ್ವಿಟ್ಟರ್‌ನಲ್ಲಿ ಬಂದಿರುವ ಪ್ರತಿಕ್ರಿಯೆಗಳು ಹೇಗಿವೆ ನೋಡೋಣ...
ಚೆನ್ನೈ ಎದುರಿಸಲು ಏಳು ತಂಡ
ಇಂಡಿಯನ್ ಪ್ರೀಮಿಯರ್ ಲೀಗ್ ಎನ್ನುವುದು ಏಳು ತಂಡಗಳು ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲು ಆಡುವ ಟೂರ್ನಿ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.
5 ಎಸೆತದಲ್ಲಿ 15 ರನ್ ಅಂತಹ ದೊಡ್ಡ ವ್ಯತ್ಯಾಸವೇನೂ ಮೂಡಿಸಲಾರದು. ಅಲ್ಲದೆ, ಅದು ಫಾಫ್ ಇನ್ನಿಂಗ್ಸ್‌ಗಿಂತ ಬೇಗನೆ ಮರೆತುಹೋಗಬಹುದು. ಆದರೆ ಠಾಕೂರ್ ಇನ್ನಿಂಗ್ಸ್ ಬಹಳ ಮಹತ್ವದ್ದಾಗಿತ್ತು ಎಂದು ಮತ್ತೊಂದು ಟ್ವಿಟ್ ಮಾಡಿದ್ದಾರೆ.
ಅತ್ಯುತ್ತಮ ಸ್ಕ್ರಿಪ್ಟ್
ಚೆನ್ನೈ ಅನ್ನು ಸಿನಿಮಾ ರಂಗದ ಕೇಂದ್ರ ಕಚೇರಿ ಎಂದು ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ವ್ಯಾಖ್ಯಾನಿಸಿದ್ದಾರೆ.
ಚಿತ್ರರಂಗದ ಕೇಂದ್ರ ಕಚೇರಿಯಿಂದ ಅತ್ಯುತ್ತಮವಾದ ಸ್ಕ್ರಿಪ್ಟ್‌ಗಳು ತಯಾರಾಗುತ್ತಿವೆ ಎಂದು ಹರ್ಷ ಭೋಗ್ಲೆ, ಸಿನಿಮಾಗಳು ಮೂಡಿಸುವ ರೋಚಕತೆ ಹಾಗೂ ಅನುಭವ ಕ್ರಿಕೆಟ್‌ನಲ್ಲಿ ಸಿಗುತ್ತಿದೆ ಎಂಬ ಹೋಲಿಕೆ ನೀಡಿದ್ದಾರೆ.
ನೀವು ಕೊಟ್ಟಿದ್ದು, ಆತ ಕೊಟ್ಟಿದ್ದು...
ಚೆನ್ನೈ ತಂಡ ಗೆದ್ದದ್ದು ಅಲ್ಲಿನ ಜನರಲ್ಲಿ ಸಂಭ್ರಮ ಮೂಡಿಸಿದ್ದರೆ, ಇತ್ತ ಕೆಲವರು ಕ್ರಿಕೆಟಿಗರು ಅನುಭವಿಸಿದ ಅವಮಾನವನ್ನು ನೆನಪಿಸಿಕೊಂಡಿದ್ದಾರೆ.
ಐಪಿಎಲ್ ಮೊದಲ ಪಂದ್ಯದ ವೇಳೆ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕ್ರೀಡಾಂಗಣದಲ್ಲಿ ಪ್ರತಿಭಟನೆ ನಡೆಸಿದ್ದ ತಮಿಳು ಸಂಘಟನೆಯೊಂದು ಮೈದಾನಕ್ಕೆ ಶೂಗಳನ್ನು ಎಸೆದಿತ್ತು. ಇದರಲ್ಲಿ ಒಂದು ಶೂ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್ ಬಳಿ ಬಿದ್ದಿತ್ತು. ಅದನ್ನು ಎತ್ತಿಕೊಂಡು ಅವರು ಪೆವಿಲಿಯನ್‌ನತ್ತ ಆಕ್ರೋಶದಿಂದ ನೋಡಿದ್ದರು.
ಈಗ ಅದೇ ಡುಪ್ಲೆಸಿಸ್ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಹಿಂದಿನ ಘಟನೆಯನ್ನು ನೆನಪಿಸಿಕೊಂಡಿರುವ ಜೋಸೆಫ್ ಎಂಬುವವರು, ವ್ಯತ್ಯಾಸ ನೋಡಿ, ನೀವೇನು ಕೊಟ್ಟಿದ್ದೀರಿ, ಅವರೇನು ಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ನಿಮ್ಮ ಕೆಟ್ಟ ರಾಜಕೀಯ ಇಲ್ಲಿ ಮಾಡಬೇಡಿ. ಶೇಮ್ ಆನ್ ಯು ಎಂದು ತಮಿಳು ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾರ್ದೂಲ್ ಠಾಕೂರ್‌ನಿಂದ ಪಂದ್ಯದಲ್ಲಿ ಆಸಕ್ತಿ
ಕೊನೆಯ ಓವರ್‌ಗಳಲ್ಲಿ ಮೂರು ಬೌಂಡರಿಗಳನ್ನು ಬಾರಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ತರುವಲ್ಲಿ ಮಹತ್ವದ ಪಾತ್ರ ವಹಿಸಿದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಮುಂಬೈ ಮೂಲದವರು. ಹೀಗಾಗಿ ಅವರಿಗೆ ತವರೂರಿನಲ್ಲಿಯೂ ಬೆಂಬಲವಿತ್ತು.
ಶಾರ್ದೂಲ್ ಆಟವನ್ನು ಕ್ರಿಕೆಟ್ ಅಭಿಮಾನಿಯೊಬ್ಬರು ಹೀಗೆ ವ್ಯಾಖ್ಯಾನಿಸಿದ್ದಾರೆ. ಇಡೀ ಪಂದ್ಯವನ್ನು ಏಕಾಂಗಿಯಾಗಿ ಆಸಕ್ತಿಕರ ಮಟ್ಟಕ್ಕೆ ಕೊಂಡೊಯ್ದಿದ್ದು ಶಾರ್ದೂಲ್ ಠಾಕೂರ್.
ಮೊದಲು 4 ಓವರ್‌ಗಳಲ್ಲಿ 50 ರನ್ ನೀಡಿ ಹೈದರಾಬಾದ್ ಗೌರವಾರ್ಹ ಮೊತ್ತ ಕಲೆಹಾಕಲು ನೆರವಾದರು. ಬಳಿಕ 5 ಎಸೆತಗಳಲ್ಲಿ 3 ಬೌಂಡರಿ ಸಹಿತ 15 ರನ್ ಗಳಿಸಿ ಅದನ್ನು ಬೆನ್ನಟ್ಟುವಲ್ಲಿ ನೆರವಾದರು ಎಂದು ಭರತ್ ಸೀರ್ವಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ನ್ಯೂಟನ್ನಿನ ಹೊಸ ನಿಯಮ
ಸತತ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಹೈದರಾಬಾದ್ ತಂಡಕ್ಕೆ ನೆರವಾದವರು ಕಾರ್ಲೊಸ್ ಬ್ರಾಥ್‌ವೇಟ್. 29 ಎಸೆತಗಳಲ್ಲಿ 43 ರನ್ ಬಾರಿಸಿದ ಬ್ರಾಥ್‌ವೇಟ್, ತಂಡ ಉತ್ತಮ ಮೊತ್ತ ದಾಖಲಿಸಲು ನೆರವಾಗಿದ್ದರು.
ಆದರೆ, ಚೆನ್ನೈ ಚೇಸಿಂಗ್ ವೇಳೆ ಗೆಲ್ಲುವುದು ಕಷ್ಟ ಎಂಬ ಸ್ಥಿತಿ ತಲುಪಿದ್ದಾಗ 18ನೇ ಓವರ್ ಬೌಲಿಂಗ್ ಮಾಡಿದ ಬ್ರಾಥ್‌ವೇಟ್ 20 ರನ್‌ಗಳನ್ನಿತ್ತು ಪಂದ್ಯದ ಚಿತ್ರಣವನ್ನೇ ಬದಲಿಸಿದ್ದರು. ಅದಕ್ಕೆ ಮನೀಶ್ ಶರ್ಮಾ ಎಂಬುವವರು ಮಾಡಿರುವ ಟ್ವೀಟ್ ಹೀಗಿದೆ.
ಬ್ರಾಥ್‌ವೇಟ್ ಚಲನೆಯ ಮೂರನೆಯ ನಿಯಮ: ಪ್ರತಿ 20 ರನ್‌ಗಳ ಕ್ರಿಯೆಗೆ ಅದಕ್ಕೆ ಸಮನಾದ ಮತ್ತು ವಿರುದ್ಧವಾದ ಮಿತಿ ಮೀರಿದ ಪ್ರತಿಕ್ರಿಯೆ ಇರುತ್ತದೆ ಎಂದು ತಮಾಷೆಯಾಗಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications