
ಕೋಲ್ಕತ್ತಾ, ಮೇ 26: ಶುಕ್ರವಾರ ನಡೆದ ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ಸನ್ ರೈಸರ್ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 14 ರನ್ ಜಯ ಸಾಧಿಸಿತು. ಇದರ ಬೆನ್ನಲ್ಲೇ ಹೈದರಾಬಾದ್ ಬೌಲರ್ ರಶೀದ್ ಖಾನ್ ಅವರು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಕ್ವಾಲಿಫೈಯರ್ 2ರಲ್ಲಿ ಕೋಲ್ಕತ್ತಾ ವಿರುದ್ಧ ಹೈದರಾಬಾದ್ ನ ರಶೀದ್ ಖಾನ್ ಮಾರಕ ಸ್ಪಿನ್ ದಾಳಿ ನಡೆಸಿದ್ದರು. 4 ಓವರ್ ಗಳಲ್ಲಿ 19 ರನ್ ನೀಡಿ ಒಟ್ಟು 3 ವಿಕೆಟ್ ಕಬಳಿಸಿ ರಶೀದ್ ನೈಟ್ ರೈಡರ್ಸನ್ನು ಕಾಡಿದರು.
ಬ್ಯಾಟಿಂಗ್ ವೇಳೆಯೂ ರಶೀದ್ ಬ್ಯಾಟ್ ನಿಂದ 10 ಎಸೆತಗಳಿಗೆ 34 ರನ್ ಸಿಡಿದಿದ್ದವು. ಈ ಪಂದ್ಯದಲ್ಲಿ ಆಲ್ ರೌಂಡರ್ ಆಟ ಪ್ರದರ್ಶಿಸಿದ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು. ಜೊತೆಗೆ ರಶೀದ್ ಸಾಧನೆ ಅವರನ್ನು ಐಪಿಎಲ್ ಅಧಿಕ ವಿಕೆಟ್ ಗಳಿಸಿದವರ ಸಾಲಿನಲ್ಲೂ ಎರಡನೇ ಸ್ಥಾನದಲ್ಲಿ ತಂದು ನಿಲ್ಲಿಸಿದೆ.
ಈ ಐಪಿಎಲ್ ಆವೃತ್ತಿಯಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಅಗ್ರ 10 ಸ್ಥಾನಿಗರಲ್ಲಿ ಸನ್ ರೈಸರ್ಸ್ ಹೈದರಾಬಾದ್ ನ ರಶೀದ್ 2ನೇ ಸ್ಥಾನದಲ್ಲಿದ್ದರೆ, ಎಸ್ ಕೌಲ್ 3ನೇ ಸ್ಥಾನದಲ್ಲಿದ್ದಾರೆ. ಇಬ್ಬರೂ 16 ಪಂದ್ಯಗಳಲ್ಲಿ 21 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದರೆ.
ಇನ್ನು 4ನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ನ ಉಮೇಶ್ ಯಾದವ್ (20 ವಿಕೆಟ್) ಮತ್ತು 5ನೇ ಸ್ಥಾನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ನ ಟ್ರೆಂಟ್ ಬೌಲ್ಟ್ (18 ವಿಕೆಟ್) ಇದ್ದು ಅವರಿಗೂ ಪಂದ್ಯವನ್ನಾಡುವ ಅವಕಾಶವಿಲ್ಲ.
ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಗ್ರ 10 ಸ್ಥಾನಿಗರಲ್ಲಿ ರಶೀದ್, ಕೌಲ್ ಬಿಟ್ಟರೆ ಉಳಿದ ಯಾರಿಗೂ ಇನ್ನು ಪಂದ್ಯವನ್ನಾಡುವ ಅವಕಾಶವೇ ಉಳಿದುಕೊಂಡಿಲ್ಲ ಎನ್ನುವುದು ವಿಶೇಷ.
14 ಪಂದ್ಯಗಳಲ್ಲಿ 24 ವಿಕೆಟ್ ಸಾಧನೆ ಹೊಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ನ ಆಂಡ್ರ್ಯೂ ಟೈ ಸದ್ಯ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲಿಗರಾಗಿ ಉಳಿದಿದ್ದಾರಾದರೂ ಸನ್ ರೈಸರ್ಸ್ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿರುವುದರಿಂದ ಪರ್ಪಲ್ ಕ್ಯಾಪ್ ಅಂತಿಮವಾಗಿ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.