ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನು ತಂಡದಿಂದ ಹೊರಗಿಟ್ಟರೆ ಟಿ20 ವಿಶ್ವಕಪ್ ಗೆಲ್ಲೋದು ಸುಲಭವಾ?

ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಆಯ್ಕೆಯಾಗಿದ್ದ ಭಾರತ ತಂಡದಲ್ಲಿ ವಿರಾಟ್ ಮತ್ತು ರೋಹಿತ್‌ಗೆ ಅವಕಾಶ ನೀಡಿರಲಿಲ್ಲ. ಇಬ್ಬರಿಗೂ ವಿಶ್ರಾಂತಿ ನೀಡಲಾಗಿದೆ ಎನ್ನುಲಾಗಿತ್ತಾದರೂ, ಟಿ20 ತಂಡದಿಂದ ಇವರನ್ನು ಹೊರಗಿಡಲು ತೆರೆಮರೆಯ ಸಿದ್ಧತೆ ಆರಂಭವಾಗಿದೆ ಎನ್ನುವ ಅನುಮಾನ ಮೂಡಿತ್ತು.
ನ್ಯೂಜಿಲೆಂಡ್ ವಿರುದ್ಧದದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆಯಾದ ಭಾರತ ತಂಡವನ್ನು ನೋಡಿದ ನಂತರ, ಬಿಸಿಸಿಐನ ಲೆಕ್ಕಾಚಾರವೇನು ಎನ್ನುವುದು ಬಯಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ರೋಹಿತ್, ಕೊಹ್ಲಿಯನ್ನು ತಂಡದಿಂದ ಹೊರಗಿಡಲಾಗಿದೆ. ಹಾರ್ದಿಕ್ ಪಾಂಡ್ಯ ನಾಯಕರಾಗಿ ಮುಂದುವರೆಯಲಿದ್ದಾರೆ. ಮುಂದಿನ ದಿನಗಳಲ್ಲಿ ರೋಹಿತ್, ಕೊಹ್ಲಿಗೆ ಭಾರತ ಟಿ20 ತಂಡದಲ್ಲಿ ಅವಕಾಶವೇ ಇಲ್ಲ ಎನ್ನುವಂತಹ ಮಾತುಗಳು ಬಿಸಿಸಿಐ ಕಚೇರಿಯಿಂದ ಕೇಳಿಬರುತ್ತಿವೆ.
2024ರ ಟಿ20 ವಿಶ್ವಕಪ್‌ಗಾಗಿ ಬಲಿಷ್ಠ ಭಾರತ ತಂಡವನ್ನು ಕಟ್ಟಲು ಬಿಸಿಸಿಐ ರೂಟ್ ಮ್ಯಾಪ್ ಸಿದ್ಧಪಡಿಸುತ್ತಿದೆ. ಭವಿಷ್ಯದ ಬಗ್ಗೆ ಯೋಚಿಸುವಾಗ ಯುವಕರಿಗೆ ಅವಕಾಶ ನೀಡಬೇಕು ಎನ್ನುವುದನ್ನು ಒಪ್ಪೋಣ, ಆದರೆ ಅಪಾರ ಅನುಭವ ಮತ್ತು ಫಾರ್ಮ್ ಹೊಂದಿರುವ ಆಟಗಾರರನ್ನೇ ತಂಡದಿಂದ ಹೊರಗಿಟ್ಟರೆ, ಯುವ ಪಡೆಗೆ ಮಾರ್ಗದರ್ಶನ ನೀಡೋದ್ಯಾರು?
ಕೊಹ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೇವಲ ಒಂದು ಪಂದ್ಯ ಮಾತ್ರ ಸಂಪೂರ್ಣವಾಗಿ ಆಡಿದರು, ಅದರಲ್ಲಿ ಗೆದ್ದ ಹಾರ್ದಿಕ್ ಪಾಂಡ್ಯ ಪಡೆ ಸರಣಿಯನ್ನು ಗೆದ್ದಿತ್ತು. ಶ್ರೀಲಂಕಾ ವಿರುದ್ಧ ಮತ್ತೆ ಯುವ ತಂಡ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡದಲ್ಲಿ ಪ್ರತಿಭಾವಂತ ಯುವ ಕ್ರಿಕೆಟಿಗರಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ, ಹಾಗಂತ ದ್ವಿಪಕ್ಷೀಯ ಸರಣಿಯಲ್ಲಿ ಗೆದ್ದ ಮಾತ್ರಕ್ಕೆ ತಂಡಕ್ಕೆ ರೋಹಿತ್, ಕೊಹ್ಲಿ ಅಗತ್ಯವಿಲ್ಲದೇ ಹೋಯಿತಾ?

ಯುವಕರಿದ್ದ ಮಾತ್ರಕ್ಕೆ ಗೆಲುವು ಸಾಧ್ಯವೇ?
30 ವರ್ಷ ಮೇಲ್ಪಟ್ಟ ಆಟಗಾರರಿಗೆ ಟಿ20 ತಂಡದಲ್ಲಿ ಸ್ಥಾನವಿಲ್ಲ ಎನ್ನುವಂತೆ ಬಿಸಿಸಿಐ ಮಾತನಾಡುತ್ತಿದೆ. ಅನುಭವಿ ಆಟಗಾರರ ಅಗತ್ಯ ಟಿ20 ತಂಡಕ್ಕೆ ಇಲ್ಲವಾ?, ಬರೀ ಯುವಕರಿದ್ದ ಮಾತ್ರಕ್ಕೆ ಗೆಲ್ಲುವುದು ಸುಲಭವಾ? ಎನ್ನುವ ಪ್ರಶ್ನೆ ಮೂಡುತ್ತದೆ. 2022ರ ಟಿ20 ವಿಶ್ವಕಪ್‌ನಲ್ಲಿ ಎಲ್ಲರಿಗಿಂತ ಹೆಚ್ಚಿನ ರನ್ ಗಳಿಸಿದ್ದು ಇದೇ ವಿರಾಟ್ ಕೊಹ್ಲಿ ಎನ್ನುವುದನ್ನು ಮರೆಯಬಾರದು. ಅದರಲ್ಲೂ ಪಾಕ್ ವಿರುದ್ಧ ಕೊಹ್ಲಿ ಇನ್ನಿಂಗ್ಸ್ ಎಂದಿಗೂ ಮರೆಯಲಾಗದ್ದು.
ಅಲ್ಲದೆ, ಕೊಹ್ಲಿಗೆ ಭಾರತ ಟಿ20 ತಂಡದಲ್ಲಿ ಮುಂದುವರೆಯಬೇಕೆನ್ನುವ ಹಂಬಲವಿದೆ. ಏಕದಿನ ವಿಶ್ವಕಪ್‌ಗಾಗಿ ರೋಹಿತ್, ಕೊಹ್ಲಿಯನ್ನು ಟಿ20 ಸರಣಿಯಿಂದ ಹೊರಗಿಟ್ಟರೆ ಒಪ್ಪಬಹುದು, ಆದರೆ, ಅವರನ್ನು ಟಿ20 ತಂಡದಿಂದಲೇ ದೂರವಿಡುವುದು ಮೂರ್ಖತನದ ನಿರ್ಧಾರ.
ಭಾರತ ಕ್ರಿಕೆಟ್ ತಂಡದಲ್ಲಿ ಸಿಗದ ಅವಕಾಶ: ವಿದೇಶಿ ಲೀಗ್‌ಗಳಲ್ಲಿ ಆಡಲು ಮುಂದಾದ ಹಿರಿಯ ಆಟಗಾರ

ಇಂಗ್ಲೆಂಡ್ ತಂಡದಲ್ಲಿ ಇದ್ದದ್ದು ಬರೀ ಯುವಕರಲ್ಲ
ಯುವ ಕ್ರಿಕೆಟಿಗರು ಇದ್ದ ಮಾತ್ರಕ್ಕೆ ತಂಡ ವಿಶ್ವಕಪ್ ಗೆಲ್ಲುತ್ತದೆ ಎನ್ನುವುದ ಭ್ರಮೆಯಷ್ಟೇ!. 2022ರಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿ ಬರೀ ಯುವಕರೇ ಇರಬೇಕಿತ್ತು, ಆದರೆ ಇಂಗ್ಲೆಂಡ್ ತಂಡದಲ್ಲಿ ಹೆಚ್ಚಿನದಾಗಿ ಇದ್ದದ್ದು ಅನುಭವಿ ಆಟಗಾರರು.
ನಾಯಕ ಜೋಸ್ ಬಟ್ಲರ್ ಗೆ 32 ವರ್ಷ, ಅಲೆಕ್ಸ್ ಹೇಲ್ಸ್‌ಗೆ 34 ವರ್ಷ, ಮೊಯೀನ್ ಅಲಿಗೆ 35 ವರ್ಷ, ಕ್ರಿಸ್ ವೋಕ್ಸ್‌ಗೆ 34 ವರ್ಷ, ಕ್ರಿಸ್ ಜೋರ್ಡಾನ್‌ಗೆ 34 ವರ್ಷ, ಆದಿಲ್ ರಶೀದ್‌ಗೆ 34 ವರ್ಷ ಇವರನ್ನು ಹೊರತುಪಡಿಸಿ ಉಳಿದ ಆಟಗಾರರು ಮಾತ್ರ ಯುವ ಆಟಗಾರರಾಗಿದ್ದರು. ಹಾಗಿದ್ದೂ ಅದು ವಿಶ್ವಕಪ್ ಗೆಲ್ಲಲಿಲ್ಲವಾ? ಆಟಗಾರರು ಫಿಟ್ ಆಗಿದ್ದು, ಫಾರ್ಮ್‌ನಲ್ಲಿದ್ದರೆ ಸಾಕು ವಯಸ್ಸು ಮುಖ್ಯವಲ್ಲ ಎಂದು ಬಿಸಿಸಿಐ ಆಲೋಚಿಸಿದರೆ ಒಳಿತು.

ವಿಶ್ವ ದರ್ಜೆಯ ಆಟಗಾರರ ವಿರುದ್ಧ ಆಡಬೇಕು
ಎರಡು ಮೂರು ದ್ವಿಪಕ್ಷೀಯ ಸರಣಿ ಗೆದ್ದ ಮಾತ್ರ ಭಾರತ ಯುವ ತಂಡ ಟಿ20 ವಿಶ್ವಕಪ್‌ಗೆ ಸಂಪೂರ್ಣವಾಗಿ ಸಿದ್ದವಾಗಿದೆ ಎಂದಲ್ಲ. ವಿಶ್ವದ ದೊಡ್ಡ ಟೂರ್ನಿಯಲ್ಲಿ ಪ್ರತಿಭಾವಂತ, ಅನುಭವಿ ಬೌಲರ್ ಗಳನ್ನು ಎದುರಿಸಲು, ಅನುಭವಿ ಬ್ಯಾಟರ್ ಕೂಡ ಬೇಕಿರುತ್ತದೆ.
ಪಾಕ್‌ನಂತಹ ವಿಶ್ವದರ್ಜೆಯ ಬೌಲಿಂಗ್ ಎದುರು ಕೊಹ್ಲಿಯಂತೆ ಇನ್ಯಾರು ಆಡಲು ಸಾಧ್ಯ. ಒತ್ತಡದ ಸಂದರ್ಭಗಳಲ್ಲಿ ತಂಡಕ್ಕೆ ಮೈದಾನದಲ್ಲಿ ಸರಿಯಾದ ಮಾರ್ಗದರ್ಶನ ನೀಡೋದಕ್ಕಾದರೂ ರೋಹಿತ್, ಕೊಹ್ಲಿ ತಂಡದಲ್ಲಿ ಇರಬೇಕು.
ಯುವಕರ ಆಕ್ರಮಣಕಾರಿ ಆಟ, ಹಿರಿಯ ಆಟಗಾರರ ರಣತಂತ್ರ, ಅನುಭವ ಜೊತೆಯಾದಾಗ ಮಾತ್ರ ವಿಶ್ವದ ಬಲಿಷ್ಠ ತಂಡಗಳ ಎದುರು ಗೆಲ್ಲಲು ಸಾಧ್ಯ. ಕೊಹ್ಲಿ ಇನ್ನೂ ಸಾಕಷ್ಟು ಫಿಟ್‌ನೆಸ್ ಹೊಂದಿರುವ ಆಟಗಾರ, ಏಕದಿನ ವಿಶ್ವಕಪ್ ಬಳಿಕ ಅವರನ್ನು ಟಿ20 ತಂಡಕ್ಕೆ ಮತ್ತೆ ಕರೆಯಬೇಕು, ರೋಹಿತ್ ಶರ್ಮಾಗೆ ಕೂಡ ಫಿಟ್‌ನೆಸ್ ಹೆಚ್ಚಿಸಿಕೊಳ್ಳಲು ಬಿಸಿಸಿಐ ಸಲಹೆ ನೀಡಿ ಟಿ20 ತಂಡದಲ್ಲಿ ಅವಕಾಶ ನೀಡಿದರೆ, ಭಾರತ ತಂಡಕ್ಕೆ ಮುಂದಿನ ಟಿ20 ವಿಶ್ವಕಪ್ ಗೆಲುವಿನ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಕೊಳ್ಳೆ ಹೊಡೆದ ಮೇಲೆ ಊರು ಬಾಗಿಲು ಹಾಕಲು ಮುಂದಾಗುವ ಬಿಸಿಸಿಐ, ಈ ಬಾರಿಯಾದರೂ ಸರಿಯಾದ ನಿರ್ಧಾರ ಮಾಡುತ್ತಾ ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications