ಭಾನುವಾರ, ಜುಲೈ 23ರಂದು ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ 4ನೇ ದಿನದಂದು ಪ್ರವಾಸಿ ಭಾರತ ತಂಡ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಕೊನೆಯ ದಿನದಂದು ಗೆಲುವಿಗೆ ವೆಸ್ಟ್ ಇಂಡೀಸ್‌ನ 8 ವಿಕೆಟ್‌ಗಳನ್ನು ಪಡೆಯಬೇಕಿದೆ.
ಇನ್ನು ಭಾರತ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ರಿಷಭ್ ಪಂತ್ ಫಿಟ್ ಆಗಿದ್ದರೆ, ಇಶಾನ್ ಕಿಶನ್ ಅವರು ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುವ ಅವಕಾಶವನ್ನು ಪಡೆಯುತ್ತಿರಲಿಲ್ಲ.
ಆದರೆ, ಎಡಗೈ ಬ್ಯಾಟರ್ ರಿಷಭ್ ಪಂತ್ ಅವರು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆದರು. ಅಂದಿನಿಂದ ಕ್ರಿಕೆಟ್‌ನಿಂದ ದೂರವಿರುವ ಅವರು ಸದ್ಯ ಎನ್‌ಸಿಎನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಇಶಾನ್ ಕಿಶನ್, ಭಾನುವಾರ ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ 4ನೇ ದಿನದಂದು ಕೇವಲ 33 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕ ಗಳಿಸಿದರು.
ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 24 ಓವರ್‌ಗಳಲ್ಲಿ 2 ವಿಕೆಟ್‌ಗೆ 181 ರನ್ ಗಳಿಸಿ ಡಿಕ್ಲೇರ್ ಮಾಡಿಕೊಳ್ಳುವ ಮುನ್ನ ಇಶಾನ್ ಕಿಶನ್ ಅವರು 34 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ಅಜೇಯ 52 ರನ್ ಬಾರಿಸಿದರು.
ಇಶಾನ್ ಕಿಶನ್ ಅವರು ರಿಷಭ್ ಪಂತ್ ಅವರ ಬ್ಯಾಟ್‌ನೊಂದಿಗೆ ಬ್ಯಾಟಿಂಗ್ ಮಾಡುತ್ತಿರುವ ಚಿತ್ರಗಳು ವೈರಲ್ ಆದವು. ರಿಷಭ್ ಪಂತ್‌ಗೆ ಗೌರವ ಸಲ್ಲಿಸಲು ಒಂದೇ ಕೈಯಲ್ಲಿ ಸಿಕ್ಸರ್ ಬಾರಿಸಿ ತನ್ನ ಚೊಚ್ಚಲ ಅರ್ಧಶತಕ ಗಳಿಸಿದರು. ಇದು ರಿಷಭ್ ಪಂತ್ ಅವರ ಟ್ರೇಡ್‌ಮಾರ್ಕ್ ಸಿಕ್ಸರ್ ಆಗಿದೆ ಎಂಬುದು ಗಮನಿಸಬೇಕಾದ ಸಂಗತಿ.
ಇಶಾನ್ ಕಿಶನ್ ಅವರು ರಿಷಭ್ ಪಂತ್ ಅವರೊಂದಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ನಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಆತನಿಂದ ಕೆಲವು ಉಪಯುಕ್ತ ವಿಕೆಟ್ ಕೀಪಿಂಗ್ ಸಲಹೆಗಳನ್ನು ಪಡೆದಿರುವುದಾಗಿ ಬಹಿರಂಗಪಡಿಸಿದರು.
"ಈ ಮೊದಲು ನಾನು ಎನ್‌ಸಿಎಯಲ್ಲಿದ್ದಾಗ ರಿಷಭ್ ಪಂತ್ ಕೂಡ ಇದ್ದರು. ನಾನು ಹೇಗೆ ಆಡುತ್ತೇನೆ ಎಂದು ಅವನಿಗೆ ತಿಳಿದಿದೆ. ನಾವು 19 ವರ್ಷದೊಳಗಿನ ದಿನಗಳಿಂದ ಪರಸ್ಪರ ಪರಿಚಿತರಾಗಿದ್ದೇವೆ. ಯಾರಾದರೂ ನನಗೆ ಸಲಹೆ ನೀಡಬೇಕೆಂದು ನಾನು ಬಯಸಿದ್ದೆ. ಅದೃಷ್ಟವಶಾತ್, ಪಂತ್ ನನ್ನ ಬ್ಯಾಟಿಂಗ್ ಸ್ಫುಟಗೊಳಿಸಲು ಸಲಹೆ ನೀಡಿದರು," ಎಂದು ಇಶಾನ್ ಕಿಶನ್ ಹೇಳಿದರು.
"ಬೌಲರ್‌ಗಳೊಂದಿಗೆ ಮಾತನಾಡಲು ಅನೇಕ ಹಿರಿಯ ಆಟಗಾರರಿದ್ದಾರೆ. ನಾಳೆ ಉತ್ತಮ ಆಟವಾಗಬೇಕು, ಆರಂಭಿಕ ವಿಕೆಟ್‌ಗಳನ್ನು ಪಡೆಯಲು ನಾವು ಸರಿಯಾದ ಪ್ರದೇಶಗಳಲ್ಲಿ ಎಸೆಯಬೇಕು ಎಂಬುದು ಮುಖ್ಯವಾಗಿದೆ. ಬಿಳಿ ಜೆರ್ಸಿಯಲ್ಲಿ ಆಡುವುದು ನನ್ನ ಕನಸಾಗಿತ್ತು. ನಾನು ಒಳಗೆ ಹೋಗಿ ಪ್ರತಿ ಚೆಂಡನ್ನು ಹೊಡೆಯಲು ಬಯಸುತ್ತೇನೆ. ನನ್ನನ್ನು ಬೆಂಬಲಿಸಿದ ನನ್ನ ಹೆತ್ತವರಿಗೆ ಹೆಚ್ಚಾಗಿ ಕೃತಜ್ಞತೆ ಸಲ್ಲಿಸುತ್ತೇನೆ," ಎಂದು ಇಶಾನ್ ಕಿಶನ್ ತಿಳಿಸಿದರು.
ಎರಡನೇ ಪಂದ್ಯದ ಬಗ್ಗೆ ಹೇಳುವುದಾದರೆ, 365 ರನ್‌ಗಳ ಗುರಿ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್ ತಂಡ ನಾಲ್ಕನೇ ದಿನದಾಟದಂತ್ಯಕ್ಕೆ 32 ಓವರ್‌ಗಳಲ್ಲಿ 2 ವಿಕೆಟ್‌ಗೆ 76 ರನ್ ಗಳಿಸಿದೆ. ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ವೆಸ್ಟ್ ಇಂಡೀಸ್ ನಾಯಕ ಕ್ರೇಗ್ ಬ್ರಾಥ್‌ವೈಟ್ ಮತ್ತು ಕಿರ್ಕ್ ಮೆಕೆಂಜಿ ವಿಕೆಟ್ ಪಡೆದರು.
ಸದ್ಯ ಐದನೇ ದಿನದಾಟಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡದ ಟಗೆನರೈನ್ ಚಂದ್ರಪಾಲ್ 24 ರನ್ ಮತ್ತು ಜೆರ್ಮೈನ್ ಬ್ಲಾಕ್‌ವುಡ್ 20 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.