2023ರ ಏಕದಿನ ವಿಶ್ವಕಪ್‌ನ ಅಗ್ರ 8-ತಂಡಗಳು ಭಾಗವಹಿಸುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು ಮೂಲ ಗೊತ್ತುಪಡಿಸಿದ ಆತಿಥೇಯ ಪಾಕಿಸ್ತಾನದಲ್ಲಿ ಅನುಮಾನವೆನಿಸಿದ್ದು, ಬೇರೆ ದೇಶಕ್ಕೆ ಸ್ಥಳಾಂತರವಾಗುವ ಸಾಧ್ಯತೆ ದಟ್ಟವಾಗಿದೆ.
ಮೂಲಗಳ ಪ್ರಕಾರ, ಪಾಕಿಸ್ತಾನವನ್ನು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಆತಿಥೇಯ ಎಂದು ಗುರುತಿಸಿದ್ದರೂ, ಐಸಿಸಿ ಅದರೊಂದಿಗೆ ಮಹತ್ವದ ಆತಿಥ್ಯ ಒಪ್ಪಂದಕ್ಕೆ ಇನ್ನೂ ಸಹಿ ಹಾಕಿಲ್ಲ. ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಮತ್ತು ಸಿಒಒ ಸಲ್ಮಾನ್ ನಸೀರ್ ಅವರು ಫೆಬ್ರವರಿ-ಮಾರ್ಚ್ 2025ರಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಕುರಿತು ಚರ್ಚಿಸಲು ಅಹಮದಾಬಾದ್‌ನಲ್ಲಿ ಐಸಿಸಿ ಕಾರ್ಯಕಾರಿ ಮಂಡಳಿಯನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಚಾಂಪಿಯನ್ಸ್ ಟ್ರೋಫಿಯನ್ನು ಕೊನೆಯದಾಗಿ 2017ರಲ್ಲಿ ಆಡಲಾಗಿತ್ತು ಮತ್ತು ಇದರಲ್ಲಿ ಪಾಕಿಸ್ತಾನ ತಂಡವು ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಬಹಳ ಸಮಯದ ನಂತರ, ತವರಿನಲ್ಲಿ ಬಹುನಿರೀಕ್ಷಿತ ಐಸಿಸಿ ಪಂದ್ಯಾವಳಿಯನ್ನು ಆಯೋಜಿಸಲು ಪಾಕಿಸ್ತಾನ ಸಜ್ಜಾಗಿತ್ತು.
ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಮತ್ತು ಗಡಿ ಉದ್ವಿಗ್ನತೆ ಇನ್ನೂ ಬಿಸಿಯಾಗಿದೆ. ಹೀಗಾಗಿ ಏಷ್ಯಾ ಕಪ್‌ನಲ್ಲಿದ್ದಂತೆ ಅವರ ನಿಲುವು ಇದೇ ರೀತಿ ಮುಂದುವರಿದರೆ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ.

ಆದ್ದರಿಂದ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ದುಬೈ ಆಯೋಜಿಸಬಹುದು ಅಥವಾ 2023 ಏಷ್ಯಾ ಕಪ್‌ನಂತೆಯೇ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬಹುದು.
ಏಷ್ಯಾ ಕಪ್ ಆತಿಥ್ಯ ಸಮಸ್ಯೆಯ ಸಂದರ್ಭದಲ್ಲಿ, ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವ ಯಾವುದೇ ಅವಕಾಶವನ್ನು ಬಿಸಿಸಿಐ ನಿರಾಕರಿಸಿದ ಬಳಿಕ, 2025ರ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸುವ ಅವಕಾಶಗಳ ಮೇಲೆ ಕರಿಮೋಡಗಳು ಸುಳಿದಾಡುತ್ತಿವೆ.
ಇದೇ ವೇಳೆ ಏಷ್ಯಾ ಕಪ್ ಪಂದ್ಯಾವಳಿ ಎಸಿಸಿ ಅಡಿಯಲ್ಲಿತ್ತು ಹಾಗೂ ಅದರ ಅಧ್ಯಕ್ಷ ಜಯ್ ಶಾ ಆಗಿದ್ದರು ಮತ್ತು ಬಿಸಿಸಿಐ ಇತರ ಎಸಿಸಿ ಸದಸ್ಯರನ್ನು ಹೈಬ್ರಿಡ್ ಮಾದರಿಗಾಗಿ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ವಿಶ್ವದ 8 ಅಗ್ರ ತಂಡಗಳನ್ನು ಒಳಗೊಂಡಿರುವ ಐಸಿಸಿ ಪಂದ್ಯಾವಳಿಗೆ ಅದೇ ರೀತಿ ಮಾಡಬಹುದೇ ಎಂಬುದು ಈಗ ಚರ್ಚೆ ಶುರುವಾಗಿದೆ.
ಇಡೀ ಪಂದ್ಯಾವಳಿಯನ್ನು ಬೇರೆ ದೇಶಕ್ಕೆ ಸ್ಥಳಾಂತರಿಸುವ ಖಚಿತವಾದರೆ, ಯುಎಇ ಅನ್ನು ಪರ್ಯಾಯವಾಗಿ ಆಯ್ಕೆ ಮಾಡಲಾಗುತ್ತದೆ. ಏಕೆಂದರೆ ಒಂದು ದಶಕಕ್ಕೂ ಹೆಚ್ಚು ಕಾಲ ಪಾಕಿಸ್ತಾನಕ್ಕೆ ಪರ್ಯಾಯವಾಗಿ ಯುಎಇ ಕ್ರೀಡಾಂಗಣಗಳನ್ನು ಬಳಸಲಾಗುತ್ತಿದೆ.
ಹೀಗಾಗಿ, ಪಾಕಿಸ್ತಾನದಲ್ಲಿ 2025ರ ಚಾಂಪಿಯನ್ಸ್ ಟ್ರೋಫಿ ನಡೆಯುವುದು ಅನುಮಾನವಾಗಿರುವ ಈ ಸಮಯದಲ್ಲಿ ಯುಎಇ ಅತ್ಯಂತ ಕಾರ್ಯಸಾಧ್ಯವಾದ ಆಯ್ಕೆಯಾಗಿದೆ ಮತ್ತು ಮೊದಲ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಬಹುದು.
2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು ಒಟ್ಟಾರೆ 9ನೇ ಆವೃತ್ತಿಯಾಗಿದೆ ಮತ್ತು 8 ವರ್ಷಗಳ ನಂತರ ಮೊದಲನೆಯದಾಗಿರಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದರೆ, ಪಾಕಿಸ್ತಾನ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ.
"ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತೊಮ್ಮೆ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸುವ ಸಂಭಾವ್ಯ ನಡೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕಾರಿಗಳು ಚರ್ಚಿಸಿದರು. ಯಾವುದೇ ಪರಿಸ್ಥಿತಿಯಲ್ಲಿ ಐಸಿಸಿ ಪಂದ್ಯಾವಳಿಯಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ," ಎಂದು ಮೂಲಗಳು ತಿಳಿಸಿವೆ.
"ಭದ್ರತಾ ಕಾರಣಗಳಿಗಾಗಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದರೆ, ಐಸಿಸಿ ಸ್ವತಂತ್ರ ಭದ್ರತಾ ಏಜೆನ್ಸಿಯನ್ನು ನೇಮಿಸಬೇಕು, ಅದು ಪಾಕಿಸ್ತಾನ ಸರ್ಕಾರ ಮತ್ತು ಭದ್ರತಾ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಬಹುದು," ಎಂದು ಪಿಸಿಬಿ ಅಧಿಕಾರಿಗಳು ಐಸಿಸಿಗೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಯನ್ನು ಚಾಂಪಿಯನ್ಸ್ ಟ್ರೋಫಿ 2025ರ ಆತಿಥ್ಯ ಹಕ್ಕುಗಳ ಒಪ್ಪಂದಗಳಿಗೆ ಸಹಿ ಹಾಕುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒತ್ತಾಯಿಸಿದೆ. ರಾಜಕೀಯ ಮತ್ತು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಭಾರತ ತಂಡವು ದೇಶಕ್ಕೆ ಪ್ರಯಾಣಿಸಲು ನಿರಾಕರಿಸಿದರೆ ಪಿಸಿಬಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದೆ.