
ಲಕ್ನೋ, ನವೆಂಬರ್ 13: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಬಿರುಸಿನ ಬ್ಯಾಟಿಂಗ್ ನಡೆಸುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೀರನ್ ಪೊಲಾರ್ಡ್, ಲಕ್ನೋದಲ್ಲಿ ನಡೆದಿದ್ದ ಅಫ್ಘಾನಿಸ್ತಾನ vs ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಗಮ್ಮತ್ತಿನ ಸಂಗತಿಗಾಗಿ ಗಮನ ಸೆಳೆದಿದ್ದಾರೆ.
ಲಕ್ನೋದಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಸೋಮವಾರ (ನವೆಂಬರ್ 11) ನಡೆದಿದ್ದ 3ನೇ ಏಕದಿನ ಪಂದ್ಯದಲ್ಲಿ ಪೊಲಾರ್ಡ್, ಅಂಪೈರನ್ನೇ ಒಮ್ಮೆ ಯಾಮಾರಿಸಿ ಪ್ರೇಕ್ಷಕರು ನಕ್ಕುಬಿಡುವಂತೆ ಮಾಡಿದರು. ಓವರ್ ಎಸೆಯಲು ಬಂದಿದ್ದ ಪೊಲಾರ್ಡ್, ಚೆಂಡು ಎಸೆಯದೆ ಅಂಪೈರನ್ನು ಗೊಂದಲಕ್ಕೀಡು ಮಾಡಿದ್ದರು.
ಅಫ್ಘಾನ್ ಇನ್ನಿಂಗ್ಸ್‌ನಲ್ಲಿ 25ನೇ ಓವರ್‌ನ ಮೊದಲ ಎಸೆತ ಎಸೆಯಲು ಪೊಲಾರ್ಡ್ ಬಂದಿದ್ದರು. ಚೆಂಡು ಎಸೆಯಲು ಯತ್ನಿಸುವಾಗ ಅವರ ಕಾಲು ನೋ ಬಾಲ್ ಗೆರೆ ದಾಟಿ ಹೋಗಿತ್ತು. ಅದನ್ನು ಗಮನಿಸಿದ ಅಂಪೈರ್ ಇನ್ನೇನು ನೋ ಬಾಲ್ ಕೊಡಬೇಕು ಅಂದುಕೊಳ್ಳುವಷ್ಟರಲ್ಲಿ, ಪೊಲಾರ್ಡ್ ಚೆಂಡು ಎಸೆದಂತೆ ಆ್ಯಕ್ಷನ್ ಮಾಡಿದರೇ ಹೊರತು ಚೆಂಡನ್ನು ಕೈಯಿಂದ ಬಿಟ್ಟಿರಲಿಲ್ಲ.
ಪೊಲಾರ್ಡ್ ನಟನೆಗೆ ತಕ್ಕಂತೆ ಆಚೆ ಸ್ಟ್ರೈಕ್‌ನಲ್ಲಿ ನಿಂತಿದ್ದ ಅಸ್ಘರ್ ಅಫ್ಘಾನ್ ಒಮ್ಮೆ ಸುಮ್ಮನೆ ಬ್ಯಾಟ್ ಬೀಸಿದಂತೆ ಆ್ಯಕ್ಷನ್ ಕೊಡಬೇಕಾಗಿ ಬಂತು. ಇತ್ತ ಅಂಪೈರ್ ಕೂಡ, ಇನ್ನೇನು ನೋ ಬಾಲ್ ಕೊಡಲು ಮುಂದಾಗಿದ್ದವರೇ ಪೊಲಾರ್ಡ್ ಚಾಲಾಕಿತನಕ್ಕೆ ನಕ್ಕು ಮರುಕ್ಷಣವೇ ಅದನ್ನು ಡೆಡ್ ಬಾಲ್ ಎಂದು ಕೈಸನ್ನೆ ಮೂಲಕ ಹೇಳಿದರು.
ಅಂದ್ಹಾಗೆ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 5 ವಿಕೆಟ್ ಗೆಲುವನ್ನಾಚರಿಸಿತ್ತಲ್ಲದೆ ಏಕದಿನ ಸರಣಿಯನ್ನು 3-0ಯಿಂದ ಗೆದ್ದುಕೊಂಡಿತು. ವೆಸ್ಟ್ ಇಂಡೀಸ್ ತಂಡದ ನಾಯಕತ್ವ ವಹಿಸಿದ್ದ ಕೀರನ್ ಪೊಲಾರ್ಡ್ 26 ಎಸೆತಗಳಿಗೆ 32 ರನ್ ಬಾರಿಸಿದ್ದರು. ಒಟ್ಟಿಗೆ 5 ಓವರ್ ಎಸೆದು 20 ರನ್ ನೀಡಿದ್ದ ಪೊಲಾರ್ಡ್‌ಗೆ ವಿಕೆಟ್ ಲಭಿಸಿರಲಿಲ್ಲ.