
ಸಚಿನ್ ತೆಂಡೂಲ್ಕರ್.. ಕ್ರಿಕೆಟ್ ಲೋಕದ ದಂತಕತೆ. ತನ್ನ ಹದಿನಾರನೇ ವಯಸ್ಸಿಗೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಲಿಟಲ್ ಮಾಸ್ಟರ್ 24 ವರ್ಷಗಳ ಕಾಲ ಮೈದಾನದಲ್ಲಿ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿ ಲೆಕ್ಕವಿಲ್ಲದಷ್ಟು ಸಾಧನೆಗಳನ್ನು ಮಾಡಿದ್ದಾರೆ.
ಸ್ಟಾರ್ ಕ್ರಿಕೆಟಿಗರೆಂದ ಮೇಲೆ ದಾಖಲೆಗಳನ್ನು ನಿರ್ಮಿಸುವುದು ಸಾಮಾನ್ಯ. ಆದರೆ ಕೆಲವೇ ಕೆಲವು ದಿಗ್ಗಜ ಕ್ರಿಕೆಟಿಗರ ದಾಖಲೆಗಳು ಮಾತ್ರ ಎಂದೂ ಅಳಿಸಲಾಗದ ಹಾಗೆ ಉಳಿದುಬಿಟ್ಟಿವೆ. ಇಂತಹ ಕ್ರಿಕೆಟಿಗರ ಪೈಕಿ ಸಚಿನ್ ತೆಂಡೂಲ್ಕರ್ ಮುಂಚೂಣಿಯಲ್ಲಿ ನಿಲ್ಲಲಿದ್ದಾರೆ.
ಸಚಿನ್ ತೆಂಡೂಲ್ಕರ್ 49 ಅಂತರರಾಷ್ಟ್ರೀಯ ಏಕದಿನ ಶತಕಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ. ಈ ದಾಖಲೆ ಸಮೀಪಕ್ಕೆ ಈಗಾಗಲೇ 46 ಅಂತರರಾಷ್ಟ್ರೀಯ ಏಕದಿನ ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ಬಂದಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಬಹುದು ಎಂದು ತೋರಿಸಿಕೊಟ್ಟದ್ದೂ ಸಹ ಇದೇ ಸಚಿನ್. ಆದರೆ ಈಗಾಗಲೇ ಹಲವಾರು ಬ್ಯಾಟ್ಸ್‌ಮನ್‌ಗಳು ಈ ಮೈಲಿಗಲ್ಲನ್ನು ಮುಟ್ಟಿದ್ದಾರೆ.
ಹೀಗೆ ಸಚಿನ್ ಮೊದಲಿಗನಾಗಿ ನಿರ್ಮಿಸಿದ ಹಲವಾರು ದಾಖಲೆಗಳನ್ನು ಹಲವರು ಮುರಿದಿದ್ದು, ಈ ಕೆಳಕಂಡ ಐದು ದಾಖಲೆಗಳನ್ನು ಮಾತ್ರ ಯಾವ ಆಟಗಾರನಿಂದಲೂ ಸಹ ಮುರಿಯಲಾಗುವುದಿಲ್ಲ ಎಂದೇ ಹೇಳಬಹುದಾಗಿದೆ.
1. ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ಅತಿಹೆಚ್ಚು ರನ್
ಸಚಿನ್ ನಿಜಕ್ಕೂ ರನ್ ಮಷಿನ್. ಏಕದಿನ ಹಾಗೂ ಟೆಸ್ಟ್ ಎರಡೂ ಮಾದರಿಯಲ್ಲಿಯೂ ರನ್ ಹೊಳೆ ಹರಿಸಿರುವ ಸಚಿನ್ ಎರಡೂ ಮಾದರಿಯ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು 200 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸಚಿನ್ ತೆಂಡೂಲ್ಕರ್ 15921 ರನ್‌ಗಳನ್ನು ಬಾರಿಸಿದ್ದಾರೆ. ಇಷ್ಟು ರನ್ ಅನೇಕ ಸ್ಟಾರ್ ಕ್ರಿಕೆಟಿಗರ ಒಟ್ಟು ಅಂತರರಾಷ್ಟ್ರೀಯ ರನ್‌ಗಳಾಗಿದೆ. ಅಲ್ಲದೇ 452 ಏಕದಿನ ಇನ್ನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿರುವ ಸಚಿನ್ ತೆಂಡೂಲ್ಕರ್ 18426 ರನ್ ಗಳಿಸಿದ್ದಾರೆ. ಹೀಗೆ ಈ ಎರಡೂ ದಾಖಲೆಗಳನ್ನು ಮುರಿಯುವುದು ತೀರ ಕಷ್ಟಸಾಧ್ಯ ಎನ್ನಬಹುದು.

2. 51 ಶತಕಗಳು
200 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸಚಿನ್ ತೆಂಡೂಲ್ಕರ್ ಟೆಸ್ಟ್ ಮಾದರಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಮಾಡಿರುವುದಲ್ಲದೇ ಅತಿಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿರುವ ಆಟಗಾರ ಎಂಬ ಸಾರ್ವಕಾಲಿಕ ದಾಖಲೆಯನ್ನು ಹೊಂದಿದ್ದಾರೆ. ತೆಂಡೂಲ್ಕರ್ ಟೆಸ್ಟ್ ಮಾದರಿಯಲ್ಲಿ 51 ಸೆಂಚುರಿಗಳನ್ನು ಬಾರಿಸಿದ್ದು ಈ ದಾಖಲೆಯನ್ನು ಮುರಿಯುವುದು ತೀರ ಕಷ್ಟ.
3. ಅತಿದೊಡ್ಡ ಏಕದಿನ ಕೆರಿಯರ್
ಸಚಿನ್ ತೆಂಡೂಲ್ಕರ್ 24 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದು, ಇದು ದಾಖಲೆ ಎನಿಸಿಕೊಂಡಿಲ್ಲ. ಏಕೆಂದರೆ ಇದಕ್ಕಿಂತ ಹೆಚ್ಚು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದವರು ಇದ್ದಾರೆ. ಆದರೆ ಏಕದಿನ ಕ್ರಿಕೆಟ್ ಅನ್ನು ಹೆಚ್ಚು ವರ್ಷಗಳ ಕಾಲ ಆಡಿದ ಆಟಗಾರ ಎಂಬ ದಾಖಲೆ ಸಚಿನ್ ಹೆಸರಿನಲ್ಲಿದೆ. ಸಚಿನ್‌ಗಿಂತ ಹೆಚ್ಚು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವವರ ಪೈಕಿ ಯಾರೂ ಸಹ ಸಚಿನ್ ಏಕದಿನ ಆಡಿರುವ ದಿನಗಳ ಸನಿಹಕ್ಕೂ ಬಂದಿಲ್ಲ. 22 ವರ್ಷ 91 ದಿನಗಳ ಕಾಲ ಸಚಿನ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿದ್ದಾರೆ.
4. ಅತಿಹೆಚ್ಚು ವಿಶ್ವಕಪ್ ರನ್
1992ರ ವಿಶ್ವಕಪ್‌ನಿಂದ 2011ರ ವಿಶ್ವಕಪ್‌ವರೆಗೆ ಒಟ್ಟು 6 ವಿಶ್ವಕಪ್‌ಗಳಲ್ಲಿ ಕಾಣಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ 44 ಇನ್ನಿಂಗ್ಸ್‌ನಲ್ಲಿ 2278 ರನ್‌ಗಳನ್ನು ಬಾರಿಸಿದ್ದಾರೆ. ಇದು ವಿಶ್ವಕಪ್‌ನಲ್ಲಿ ಆಟಗಾರನೋರ್ವ ಬಾರಿಸಿರುವ ಅತಿಹೆಚ್ಚು ರನ್ ಆಗಿದೆ.
5. ಅತಿಹೆಚ್ಚು ಟೆಸ್ಟ್ ಪಂದ್ಯಗಳು
ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ ಈ ದಾಖಲೆಯನ್ನಂತೂ ಯಾರಿಂದಲೂ ಮುರಿಯಲಾಗುವುದಿಲ್ಲ. ಒಟ್ಟು 200 ಟೆಸ್ಟ್ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ಕಣಕ್ಕೆ ಇಳಿದಿದ್ದು, ಕೊನೆಯದಾಗಿ ವೆಸ್ಟ್ಇಂಡೀಸ್ ವಿರುದ್ಧ ವಾಂಖೆಡೆಯಲ್ಲಿ ನಡೆದ ಟೆಸ್ಟ್ ಪಂದ್ಯದ ಮೂಲಕ ವಿದಾಯ ಹೇಳಿದರು.