ಎರಡೆರಡು ತಂಡಗಳ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಐವರು ಕ್ರಿಕೆಟಿಗರು ಇವರೇ!

ಕ್ರಿಕೆಟ್ ಆಟವನ್ನು ವೃತ್ತಿಜೀವನವಾಗಿ ಆಯ್ಕೆ ಮಾಡಿಕೊಳ್ಳುವ ಹಲವಾರು ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶವನ್ನು ಪಡೆದು ಉತ್ತಮ ಪ್ರದರ್ಶನ ನೀಡಿ ಸ್ಟಾರ್ ಆಟಗಾರ ಎನಿಸಿಕೊಳ್ಳಬೇಕು ಎಂಬ ಗುರಿಯನ್ನು ಹೊಂದಿರುತ್ತಾರೆ. ಆದರೆ ಈ ಗುರಿಯನ್ನು ತಲುಪಿ ಯಶಸ್ಸು ಸಾಧಿಸಿದವರ ಸಂಖ್ಯೆಗಿಂತ ಅಂತರರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗದೇ ನಿರಾಸೆಗೊಳಗಾದವರ ಸಂಖ್ಯೆ ಹೆಚ್ಚಿದೆ ಎಂದೇ ಹೇಳಬಹುದು.
ಹೀಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡುವ ಅವಕಾಶ ಸಿಗದೇ ಇರುವ ಆಟಗಾರರ ವರ್ಗ ಒಂದೆಡೆಯಾದರೆ, ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶ ಸಿಕ್ಕರೂ ಸಹ ಅದನ್ನು ಸರಿಯಾದ ರೀತಿ ಬಳಸಿಕೊಳ್ಳದೇ ಕಳಪೆ ಫಾರ್ಮ್ ಹೊಂದಿ ಹೆಚ್ಚು ದಿನಗಳ ಕಾಲ ತಂಡಗಳಲ್ಲಿ ಉಳಿಯದೇ ಹೊರಬಿದ್ದ ಆಟಗಾರರ ಗುಂಪು ಮತ್ತೊಂದೆಡೆ ಇದೆ.
ಹೌದು, ತಮ್ಮ ದೇಶದ ತಂಡವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ಸಿಕ್ಕಾಗ ಅದನ್ನು ಹೆಚ್ಚು ದಿನಗಳ ಕಾಲ ಉಳಿಸಿಕೊಳ್ಳಬೇಕೆಂದರೆ ಸತತವಾಗಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಇದೆ. ಆದರೆ ಈ ಕಷ್ಟದ ಕೆಲಸದಲ್ಲಿ ಸಫಲರಾಗುವುದರಲ್ಲಿ ಸಾಕಷ್ಟು ಆಟಗಾರರು ಹಿನ್ನಡೆ ಅನುಭವಿಸಿದ್ದರೆ, ಇನ್ನೂ ಕೆಲ ಕ್ರಿಕೆಟಿಗರು ಎರಡೆರಡು ತಂಡಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಪ್ರತಿನಿಧಿಸಿರುವ ಅನುಭವ ಹೊಂದಿದ್ದಾರೆ. ಹೀಗೆ 2 ತಂಡಗಳನ್ನು ಪ್ರತಿನಿಧಿಸಿರುವ ಐವರು ಕ್ರಿಕೆಟಿಗರ ಪಟ್ಟಿ ಈ ಕೆಳಕಂಡಂತಿದೆ. .

1. ಎಡ್ ಜಾಯ್ಸ್
ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಎರಡೆರೆಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರ ಪಟ್ಟಿಗೆ ಮೊದಲು ಸೇರ್ಪಡೆಯಾದ ಆಟಗಾರ ಎಡ್ ಜಾಯ್ಸ್. 2006ರಿಂದ 2007ರವರೆಗೆ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಎಡ್ ಜಾಯ್ಸ್ 1 ಪಂದ್ಯವನ್ನಾಡಿ 1 ರನ್ ಗಳಿಸಿದ್ದಾರೆ. ನಂತರ 2012ರಿಂದ 2014ರವರೆಗೆ ಐರ್ಲೆಂಡ್ ತಂಡವನ್ನು ಪ್ರತಿನಿಧಿಸಿದ ಇವರು ಐರ್ಲೆಂಡ್ ಪರ 16 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿ 404 ರನ್ ಕಲೆಹಾಕಿದ್ದಾರೆ. ಈ ಮೂಲಕ ಎಡ್ ಜಾಯ್ಸ್ ಇಂಗ್ಲೆಂಡ್ ಮತ್ತು ಐರ್ಲೆಂಡ್ ಈ 2 ತಂಡಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಪ್ರತಿನಿಧಿಸಿದ್ದಾರೆ.

2. ಲ್ಯೂಕ್ ರಾಂಚಿ
ಲ್ಯೂಕ್ ರಾಂಚಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಪ್ರತಿನಿಧಿಸಿದ ಅನುಭವವನ್ನು ಹೊಂದಿದ್ದಾರೆ. 2008ರಿಂದ 2009ರವರೆಗೆ ಆಸ್ಟ್ರೇಲಿಯಾ ಪರ ಕಣಕ್ಕಿಳಿದಿದ್ದ ಲ್ಯೂಕ್ ರಾಂಚಿ 3 ಪಂದ್ಯಗಳನ್ನಾಡಿ 47 ರನ್ ಬಾರಿಸಿದ್ದರೆ, 2013ರಿಂದ 2017ರವರೆಗೆ ನ್ಯೂಜಿಲೆಂಡ್ ಪರ ಕಣಕ್ಕಿಳಿದು 29 ಪಂದ್ಯಗಳನ್ನಾಡಿ 312 ರನ್ ಬಾರಿಸಿದ್ದಾರೆ.

3. ಡಿರ್ಕ್ ನ್ಯಾನೆಸ್
ಡಿರ್ಕ್ ನ್ಯಾನೆಸ್ ಎಂಬ ಆಟಗಾರ ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. 2009ರಲ್ಲಿ ನೆದರ್ಲೆಂಡ್ಸ್ ಪರ 2 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ನ್ಯಾನೆಸ್ 1 ವಿಕೆಟ್ ಪಡೆದಿದ್ದರು ಹಾಗೂ 2009ರಿಂದ 2010ರವರೆಗೆ ಆಸ್ಟ್ರೇಲಿಯಾ ಪರ ಕಣಕ್ಕಿಳಿದಿದ್ದ ಇವರು 15 ಪಂದ್ಯಗಳನ್ನಾಡಿ 27 ವಿಕೆಟ್ ಪಡೆದಿದ್ದಾರೆ.

4. ರೋಲೋಫ್ ವ್ಯಾನ್ ಡೆರ್ ಮೆರ್ವೆ
ಅಪ್ಪಟ ಕ್ರಿಕೆಟ್ ಅಭಿಮಾನಿಗಳು ಈ ಆಟಗಾರನ ಹೆಸರನ್ನು ಸರ್ವೇಸಾಮಾನ್ಯವಾಗಿ ಕೇಳಿರುತ್ತಾರೆ. ಈತ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ಎರಡೂ ತಂಡಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ. ಮೆರ್ವೆ ದಕ್ಷಿಣ ಆಫ್ರಿಕಾ ಪರ 2009ರಿಂದ 2010ರವರೆಗೆ ಕಣಕ್ಕಿಳಿದು 13 ಪಂದ್ಯಗಳನ್ನಾಡಿ 57 ರನ್ ಬಾರಿಸುವುದರ ಜತೆಗೆ 14 ವಿಕೆಟ್‍ಗಳನ್ನು ಪಡೆದಿದ್ದರು ಹಾಗೂ 2015ರಿಂದ 2019ರವರೆಗೆ ನೆದರ್ಲೆಂಡ್ಸ್ ಪರ 30 ಪಂದ್ಯಗಳನ್ನಾಡಿರುವ ಇವರು 397 ರನ್ ಬಾರಿಸಿ 40 ವಿಕೆಟ್ ಪಡೆದಿದ್ದಾರೆ.

5. ಹೇಡನ್ ವಾಲ್ಷ್ ಜೂ
ಹೇಡನ್ ವಾಲ್ಶ್ ಜೂ ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್‍ನಲ್ಲಿ ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ. 2019ರಲ್ಲಿ ಯುನೈಟೆಡ್ ಸ್ಟೇಟ್ಸ್ ಪರ ಕಣಕ್ಕಿಳಿದಿದ್ದ ವಾಲ್ಶ್ 8 ಪಂದ್ಯಗಳನ್ನಾಡಿ 5 ವಿಕೆಟ್ ಪಡೆದಿದ್ದರು ಹಾಗೂ 2019ರಿಂದ 2020ರವರೆಗೆ ವೆಸ್ಟ್ ಇಂಡೀಸ್ ಪರ ಕಣಕ್ಕಿಳಿದು 8 ಪಂದ್ಯಗಳನ್ನಾಡಿ 5 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications