ಶೇನ್ ವಾರ್ನ್ ಇನ್ನಿಲ್ಲ: ಶೇನ್ ವಾರ್ನ್ ಮಾಡಿರುವ ಈ ಒಂದು ದಾಖಲೆ ಮುರಿಯುವುದು ಸುಲಭದ ಮಾತಲ್ಲ!

ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ನಿಲ್ಲುವ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ಇಂದು ( ಮಾರ್ಚ್ 4 ) ಹೃದಯಾಘಾತದ ಕಾರಣದಿಂದಾಗಿ ಇಹಲೋಕವನ್ನು ತ್ಯಜಿಸಿದ್ದಾರೆ. ಥೈಲೆಂಡ್ ದೇಶದಲ್ಲಿ ನೆಲೆಸಿದ್ದ ಶೇನ್ ವಾರ್ನ್ ಶನಿವಾರ ಬೆಳಗಿನ ಜಾವ ( ಆಸ್ಟ್ರೇಲಿಯಾ ಕಾಲಮಾನದ ಪ್ರಕಾರ ) ತಾವು ವಾಸಿಸುತ್ತಿದ್ದ ವಿಲ್ಲಾದಲ್ಲಿ ಪ್ರಜ್ಞಾಹೀನವಾಗಿ ಬಿದ್ದಿದ್ದರು. ಹೀಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶೇನ್ ವಾರ್ನ್ ಅವರಿಗೆ ಕೂಡಲೇ ಚಿಕಿತ್ಸೆ ಕೊಡಿಸಿದರೂ ಕೂಡ, ಚಿಕಿತ್ಸೆಗೆ ಸ್ಪಂದಿಸದ ಶೇನ್ ವಾರ್ನ್ ಅಸುನೀಗಿದ್ದಾರೆ. 52 ವರ್ಷ ವಯಸ್ಸಿನವರಾಗಿದ್ದ ಶೇನ್ ವಾರ್ನ್ 145 ಟೆಸ್ಟ್ ಪಂದ್ಯಗಳನ್ನಾಡಿದ್ದು, 273 ಇನ್ನಿಂಗ್ಸ್‌ಗಳ ಪೈಕಿ 708 ವಿಕೆಟ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗೆ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿರುವ ಶೇನ್ ವಾರ್ನ್ ಇನ್ನೂ ಹತ್ತು ಹಲವಾರು ದಾಖಲೆಗಳನ್ನು ನಿರ್ಮಿಸಿ ಕ್ರಿಕೆಟರ್ ಆಗಬೇಕು ಎಂದು ಕನಸನ್ನು ಹೊತ್ತಿಕೊಂಡಿರುವ ಹಲವಾರು ಯುವ ಪ್ರತಿಭೆಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ.
ಸದ್ಯ ಶೇನ್ ವಾರ್ನ್ ಸಾವಿನ ಸುದ್ದಿಯನ್ನು ಅವರ ಆಪ್ತ ವಲಯ ತಿಳಿಸಿದ್ದು, ಶೇನ್ ವಾರ್ನ್ ಕುಟುಂಬಸ್ಥರು ಶೇನ್ ವಾರ್ನ್ ಸಾವಿನ ಕುರಿತಾಗಿ ಮತ್ತಷ್ಟು ಮಾಹಿತಿಗಳನ್ನು ಬಿಚ್ಚಿಡಲಿದೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ತಿಳಿಸಿವೆ. ಇನ್ನು ಶೇನ್ ವಾರ್ನ್ ಹಠಾತ್ ನಿಧನಕ್ಕೆ ಕ್ರಿಕೆಟ್ ಜಗತ್ತು ಮರುಗಿದ್ದು ತಮ್ಮ ಸಮಕಾಲೀನ ಕ್ರಿಕೆಟಿಗನನ್ನು ಬೇಗನೇ ಕಳೆದುಕೊಂಡ ಹಿರಿಯ ಕ್ರಿಕೆಟಿಗರು ಕಂಬನಿ ಮಿಡಿದಿದ್ದರೆ, ಬಾಲ್ಯದಲ್ಲಿ ಶೇನ್ ವಾರ್ನ್ ಆಟವನ್ನು ನೋಡುತ್ತಾ ಬೆಳೆದ ಯುವ ಕ್ರಿಕೆಟಿಗರು ತಮ್ಮ ನೆಚ್ಚಿನ ಹೀರೋವನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.
ಇನ್ನು ಶೇನ್ ವಾರ್ನ್ ಟೆಸ್ಟ್ ಕ್ರಿಕೆಟ್, ಏಕದಿನ ಹಾಗೂ ಟಿ ಟ್ವೆಂಟಿ ಹೀಗೆ ಎಲ್ಲಾ ಪ್ರಮುಖ ಮಾದರಿಯ ಕ್ರಿಕೆಟ್‍ನಲ್ಲಿಯೂ ಆಟವನ್ನಾಡಿದ್ದು, ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿಯೂ ಈ ಒಂದು ವಿಶೇಷ ದಾಖಲೆಯಲ್ಲಿ ಶೇನ್ ವಾರ್ನ್ ಅವರನ್ನು ಸರಿಗಟ್ಟುವುದು ಮಾತ್ರ ತೀರಾ ಕಷ್ಟಸಾಧ್ಯ ಎನ್ನಬಹುದು. ಹೀಗೆ ಶೇನ್ ವಾರ್ನ್ ನಿರ್ಮಿಸಿರುವ ಆ ಅಪರೂಪದ ದಾಖಲೆ ಯಾವುದು ಮತ್ತು ಶೇನ್ ವಾರ್ನ್ ನಿರ್ಮಿಸಿರುವ ಇತರೆ ದಾಖಲೆಗಳು ಯಾವುವು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ವರ್ಷವೊಂದರಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಆಟಗಾರ
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಶೇನ್ ವಾರ್ನ್ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. 2005ರಲ್ಲಿ ಶೇನ್ ವಾರ್ನ್ ಬರೆದಿದ್ದ ಈ ದಾಖಲೆಯನ್ನು ಇಲ್ಲಿಯವರೆಗೂ ಸಹ ಯಾವುದೇ ಬೌಲರ್ ಕೂಡ ಮುರಿದಿಲ್ಲ. ಹೌದು, 2005ರಲ್ಲಿ 15 ಟೆಸ್ಟ್ ಪಂದ್ಯಗಳನ್ನಾಡಿದ್ದ ಶೇನ್ ವಾರ್ನ್ 96 ವಿಕೆಟ್ ಪಡೆಯುವ ಮೂಲಕ ವರ್ಷವೊಂದರಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ನೂತನ ದಾಖಲೆ ಬರೆದರು. ಇನ್ನು 2006ರಲ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿ 90 ವಿಕೆಟ್ ಪಡೆದಿದ್ದ ಮುತ್ತಯ್ಯ ಮುರಳೀಧರನ್ ಶೇನ್ ವಾರ್ನ್ ದಾಖಲೆಯನ್ನು ಮುರಿಯುವಲ್ಲಿ ವಿಫಲರಾಗಿದ್ದರು. ಹೀಗೆ ವರ್ಷವೊಂದರಲ್ಲಿ 90 ಟೆಸ್ಟ್ ವಿಕೆಟ್ ಪಡೆದಿರುವ ಮುತ್ತಯ್ಯ ಮುರಳೀಧರನ್ ಈ ದಾಖಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಸದ್ಯ ಶೇನ್ ವಾರ್ನ್ ನಿರ್ಮಿಸಿರುವ ಈ ದಾಖಲೆಗೆ 17 ವರ್ಷಗಳು ಆಗಿದ್ದರೂ ಕೂಡ ಯಾರಿಂದಲೂ ಮುರಿಯಲಾಗಿಲ್ಲ.

ಶತಕವನ್ನೇ ಬಾರಿಸದೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ
ಟೆಸ್ಟ್, ಏಕದಿನ ಹಾಗೂ ಟಿ ಟ್ವೆಂಟಿ ಈ ಮೂರೂ ಆವೃತ್ತಿಗಳ ಪಂದ್ಯಗಳಲ್ಲಿ ಆಡಿರುವ ದಿಗ್ಗಜ ಶೇನ್ ವಾರ್ನ್ ಒಂದೇ ಒಂದು ಶತಕವನ್ನು ಬಾರಿಸದೇ ಇದ್ದರೂ ಸಹ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು 339 ಪಂದ್ಯಗಳನ್ನಾಡಿರುವ ಶೇನ್ ವಾರ್ನ್ ಯಾವುದೇ ಶತಕ ಬಾರಿಸದೇ 4172 ರನ್ ಗಳಿಸಿದ್ದು, ಇನ್ನಿಂಗ್ಸ್ ಒಂದರಲ್ಲಿ ಗರಿಷ್ಠ 99 ರನ್ ಗಳಿಸಿದ್ದಾರೆ.

ಇತರೆ ಪ್ರಮುಖ ದಾಖಲೆಗಳು
* ಟೆಸ್ಟ್ ಕ್ರಿಕೆಟ್‍ನಲ್ಲಿ 3154 ರನ್ ಕಲೆಹಾಕಿರುವ ಶೇನ್ ವಾರ್ನ್ ಒಂದೇ ಒಂದು ಶತಕವನ್ನು ಬಾರಿಸದೇ ಇದ್ದರೂ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
* ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ದಾಖಲೆಯಲ್ಲಿ ಶೇನ್ ವಾರ್ನ್ ಮೂರನೇ ಸ್ಥಾನದಲ್ಲಿದ್ದಾರೆ. ಒಟ್ಟು 17 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿರುವ ಶೇನ್ ವಾರ್ನ್ ತಮ್ಮಷ್ಟೇ ಪ್ರಶಸ್ತಿಗಳನ್ನು ಪಡೆದ ಪಾಕಿಸ್ತಾನದ ವಾಸಿಂ ಅಕ್ರಮ್ ಜತೆ ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದರೆ, 19 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಮುತ್ತಯ್ಯ ಮುರಳೀಧರನ್ ಈ ದಾಖಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ ಮತ್ತು 23 ಬಾರಿ ಟೆಸ್ಟ್ ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಈ ದಾಖಲೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
* ಸ್ಟಂಪ್ ಔಟ್ ಮೂಲಕ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವ ಬೌಲರ್‌ಗಳ ದಾಖಲೆ ಪಟ್ಟಿಯಲ್ಲಿ ಶೇನ್ ವಾರ್ನ್ 36 ವಿಕೆಟ್ ಪಡೆಯುವುದರ ಮೂಲಕ ದ್ವಿತೀಯ ಸ್ಥಾನದಲ್ಲಿದ್ದರೆ, 47 ವಿಕೆಟ್‍ಗಳನ್ನು ಪಡೆದಿರುವ ಮುತ್ತಯ್ಯ ಮುರಳೀಧರನ್ ಪ್ರಥಮ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications