
ಮಂಗಳವಾರ, ಮಾರ್ಚ್ 14ರಂದು ಕತಾರ್‌ನ ದೋಹಾದಲ್ಲಿರುವ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್‌ಸಿ) ಮಾಸ್ಟರ್ಸ್‌ನ ಮೂರನೇ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಇಂಡಿಯಾ ಮಹಾರಾಜಸ್ ತಂಡ ಏಷ್ಯಾ ಲಯನ್ಸ್ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯಾವಳಿಯಲ್ಲಿ ಇಂಡಿಯಾ ಮಹಾರಾಜಸ್ ತಂಡಕ್ಕೆ ಮೊದಲ ಜಯವಾಗಿದೆ.
ಏಷ್ಯಾ ಲಯನ್ಸ್ ನೀಡಿದ್ದ 158 ರನ್‌ಗಳ ಗುರಿ ಬೆನ್ನಟ್ಟಿದ ಇಂಡಿಯಾ ಮಹಾರಾಜಸ್ ತಂಡ ಕೇವಲ 12.3 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 159 ರನ್ ಗಳಿಸಿತು. ಕಳೆದ ಪಂದ್ಯದ ಸೋಲಿಗೆ ಗೌತಮ್ ಗಂಭೀರ್ ಬಳಗ ಗೆದ್ದು ಸೇಡು ತೀರಿಸಿಕೊಂಡಿತು.
ಇಂಡಿಯಾ ಮಹಾರಾಜಸ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಗೌತಮ್ ಗಂಭೀರ್ ಮತ್ತು ರಾಬಿನ್ ಉತ್ತಪ್ಪ ಎದುರಾಳಿ ತಂಡಕ್ಕೆ ವಿಕೆಟ್ ನೀಡದೇ ತಲಾ ಅರ್ಧಶತಕ ಬಾರಿಸಿದರು ಮತ್ತು ತಂಡವನ್ನು ಸುಲಭವಾಗಿ ಗೆಲುವಿನ ಗಡಿ ತಲುಪಿಸಿದರು.

ರಾಬಿನ್ ಉತ್ತಪ್ಪ ಕೇವಲ 39 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ಗಳ ಸಹಾಯದಿಂದ 88 ರನ್ ಬಾರಿಸಿದರೆ, ಗೌತಮ್ ಗಂಭೀರ್ 36 ಎಸೆತಗಳಲ್ಲಿ 12 ಬೌಂಡರಿಗಳ ಸಮೇತ 61 ರನ್ ಗಳಿಸಿದರು. ಇದು 2023ರ ಲೆಜೆಂಡ್ಸ್ ಲೇಗ್ ಕ್ರಿಕೆಟ್‌ನಲ್ಲಿ ಗೌತಮ್ ಗಂಭೀರ್ ಅವರ ಸತತ ಮೂರನೇ ಅರ್ಧಶತಕವಾಗಿದೆ.
ಬೌಲಿಂಗ್‌ನಲ್ಲಿ ಏಷ್ಯಾ ಲಯನ್ಸ್ ತಂಡದ ಪರ ಎಲ್ಲ ಬೌಲರ್‌ಗಳು ದುಬಾರಿಯಾದರು ಮತ್ತು ವಿಕೆಟ್ ರಹಿತರಾಗಿ ನಿರಾಸೆ ಅನುಭವಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಏಷ್ಯಾ ಲಯನ್ಸ್ ತಂಡ ಉಪುಲ್ ತರಂಗ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್‌ಗಳನ್ನು ಗಳಿಸಿತ್ತು.
ಏಷ್ಯಾ ಲಯನ್ಸ್ ಪರ ಬ್ಯಾಟಿಂಗ್ ಆರಂಭಿಸಿದ ಉಪುಲ್ ತರಂಗ ಮತ್ತು ತಿಲಕರತ್ನೆ ದಿಲ್ಶಾನ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 73 ರನ್‌ಗಳ ಜೊತೆಯಾಟ ನೀಡಿದರು.
ಉಪುಲ್ ತರಂಗ 48 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಮೇತ 69 ರನ್ ಬಾರಿಸಿದರೆ, ತಿಲಕರತ್ನೆ ದಿಲ್ಶಾನ್ 27 ಎಸೆತಗಳಲ್ಲಿ 32 ರನ್ ಗಳಿಸಿದರು. ಉಳಿದಂತೆ ಅಸ್ಗರ್ ಅಫ್ಘನ್ 15 ರನ್, ಅಬ್ದುಲ್ ರಜಾಕ್ 27 ರನ್ ಗಳಿಸಿ ತಂಡದ ಮೊತ್ತ 150 ರನ್ ಗಡಿ ದಾಟಲು ನೆರವಾದರು.
ಬೌಲಿಂಗ್‌ನಲ್ಲಿ ಇಂಡಿಯಾ ಮಹಾರಾಜಸ್ ತಂಡದ ಪರ ಸುರೇಶ್ ರೈನಾ 2 ಓವರ್‌ಗಳಲ್ಲಿ 16 ರನ್ ನೀಡಿ 2 ವಿಕೆಟ್ ಪಡೆದರೆ, ಹರ್ಭಜನ್ ಸಿಂಗ್ 4 ಓವರ್‌ಗಳಲ್ಲಿ 12 ರನ್ ನೀಡಿ ಒಂದು ವಿಕೆಟ್ ಪಡೆದರು. ಉಳಿದಂತೆ ಸ್ಟುವರ್ಟ್ ಬಿನ್ನಿ ಮತ್ತು ಪ್ರವೀಣ್ ತಾಂಬೆ ತಲಾ ಒಂದೊಂದು ವಿಕೆಟ್ ಪಡೆದರು.
2023ರ ಲೆಜೆಂಡ್ಸ್ ಲೇಗ್ ಕ್ರಿಕೆಟ್ ಪಾಯಿಂಟ್ ಪಟ್ಟಿಯಲ್ಲಿ ಆಡಿದ ಮೂರು ಪಂದ್ಯಗಳಿಂದ 2 ಗೆಲುವು ಮತ್ತು 1 ಸೋಲಿನೊಂದಿಗೆ 4 ಅಂಕ ಗಳಿಸಿರುವ ಏಷ್ಯಾ ಲಯನ್ಸ್ ಮೊದಲ ಸ್ಥಾನದಲ್ಲಿದೆ.
ಇನ್ನು ಆಡಿದ ಮೂರು ಪಂದ್ಯಗಳಿಂದ 2 ಸೋಲು ಮತ್ತು 1 ಗೆಲುವಿನೊಂದಿಗೆ 2 ಅಂಕ ಗಳಿಸಿ ಇಂಡಿಯಾ ಮಹಾರಾಜಸ್ ಎರಡನೇ ಸ್ಥಾನದಲ್ಲಿದೆ. ವರ್ಲ್ಡ್ ಜೈಂಟ್ಸ್ 2 ಪಂದ್ಯಗಳಿಂದ ಒಂದು ಗೆಲುವು ಮತ್ತು 1 ಸೋಲಿನೊಂದಿಗೆ 2 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ.