
ಮಂಗಳವಾರ ನಡೆಯುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ಬಲಿಷ್ಠ ಏಷ್ಯಾ ಲಯನ್ಸ್ ತಂಡವನ್ನು ಎದುರಿಸಲಿದೆ. ಆಡಿರುವ ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವ ಇಂಡಿಯಾ ಮಹಾರಾಜಾಸ್ ಮೊದಲ ಜಯದ ಹುಡುಕಾಟದಲ್ಲಿದೆ.
ಏಷ್ಯಾ ಲಯನ್ಸ್ ಆಡಿರುವ ಮೊದಲ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಭಾರತ ಮಹಾರಾಜಾಸ್ ವಿರುದ್ಧ ಮತ್ತೊಂದು ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ದೋಹಾದ ವೆಸ್ಟ್ ಪಾರ್ಕ್ ಇಂಟರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಕೂಡ ನೇರಪ್ರಸಾರವನ್ನು ನೋಡಬಹುದಾಗಿದೆ.
ಭಾರತ ಮಹಾರಾಜಾಸ್ ಪರವಾಗಿ ನಾಯಕ ಗೌತಮ್ ಗಂಭೀರ್ ಅತ್ಯುತ್ತಮ ಪ್ರದರ್ಶನ ನೀಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗುತ್ತಿಲ್ಲ. ಆಡಿದ ಕೊನೆಯ ಪಂದ್ಯದಲ್ಲಿ ವರ್ಲ್ಡ್ ಜೈಂಟ್ಸ್ ವಿರುದ್ಧ ಕೇವಲ 2 ರನ್‌ಗಳಿಂದ ಸೋಲನುಭವಿಸಿದ್ದರು. ಏಷ್ಯಾ ಲಯನ್ಸ್ ವಿರುದ್ಧ ಗೆಲುವು ಸಾಧಿಸಬೇಕಾದರೆ ಎಲ್ಲಾ ವಿಭಾಗಗಳಲ್ಲಿ ಗಂಭೀರ್ ಪಡೆ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ.

ತಲೆನೋವಾದ ರೈನಾ, ಪಠಾಣ್ ವೈಫಲ್ಯ
ತಂಡದ ಪ್ರಮುಖ ಆಟಗಾರರಾದ ಸುರೇಶ್ ರೈನಾ, ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಏಷ್ಯಾ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಇವರು ದೊಡ್ಡ ಮೊತ್ತವನ್ನು ಗಳಿಸಿದರೆ ಮಾತ್ರ ಭಾರತ ತಂಡಕ್ಕೆ ಗೆಲುವಿನ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಬೌಲಿಂಗ್ ವಿಭಾಗ ಉತ್ತಮವಾಗಿದ್ದು ಹರ್ಭಜನ್ ಸಿಂಗ್, ಇರ್ಫಾನ್ ಪಠಾನ್, ಪ್ರಗ್ಯಾನ್ ಓಜಾ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ.
ಆಡಿದ ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಏಷ್ಯಾ ಲಯನ್ಸ್ ಭಾರತ ಮಹಾರಾಜಸ್ ವಿರುದ್ಧ ಎರಡನೇ ಗೆಲುವು ದಾಖಲಿಸುವ ಉತ್ಸಾಹದಲ್ಲಿದೆ. ಉಪುಲ್ ತರಂಗ, ಮಿಸ್ಬಾ ಉಲ್ ಹಕ್ ಅತ್ಯುತ್ತಮ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಭಾರತ ಮಹಾರಾಜಸ್ : ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಗೌತಮ್ ಗಂಭೀರ್ (ನಾಯಕ), ಮುರಳಿ ವಿಜಯ್, ಸುರೇಶ್ ರೈನಾ, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಅಶೋಕ್ ದಿಂಡಾ, ಪ್ರವೀಣ್ ತಾಂಬೆ.
ಏಷ್ಯಾ ಲಯನ್ಸ್ : ಉಪುಲ್ ತರಂಗ (ವಿಕೆಟ್ ಕೀಪರ್), ತಿಲಕರತ್ನೆ ದಿಲ್ಶನ್, ಮಿಸ್ಬಾ-ಉಲ್-ಹಕ್, ಅಸ್ಗರ್ ಅಫ್ಘಾನ್, ಸೊಹೈಲ್ ತನ್ವಿರ್, ಅಬ್ದುರ್ ರಜಾಕ್, ಶಾಹಿದ್ ಅಫ್ರಿದಿ (ನಾಯಕ), ಪರಸ್ ಖಡ್ಕಾ, ತಿಸಾರಾ ಪೆರೇರಾ, ಮೊಹಮ್ಮದ್ ಹಫೀಜ್, ಅಬ್ದುಲ್ ರಜಾಕ್.