ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಮತ್ತೊಂದು ಪಂದ್ಯವೆಂದು ಪರಿಗಣಿಸುವುದು ನಿರ್ಣಾಯಕ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಹೇಳಿದ್ದಾರೆ. ಇಲ್ಲದಿದ್ದರೆ ಆಟಗಾರರ ಮೇಲೆ ಒತ್ತಡ ಬೀಳಲಿದೆ ಎಂದು ಅಭಿಪ್ರಾಯಪಟ್ಟರು.
ತಾವು ಆಡುವಾಗ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೀನ್ಯಾ ವಿರುದ್ಧ ಸೋತರೂ ಆರಾಮವಾಗಿರುತ್ತಿದ್ದರು. ಆದರೆ ಪಾಕಿಸ್ತಾನ ವಿರುದ್ಧ ಸೋತರೆ ಕೋಪಿಸಿಕೊಳ್ಳುತ್ತಿದ್ದರು ಎಂದು ಮಾಜಿ ಭಾರತೀಯ ನಾಯಕ ಅನಿಲ್ ಕುಂಬ್ಳೆ ತಿಳಿಸಿದರು.
2023ರ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ತಂಡವು ಸೆಪ್ಟೆಂಬರ್ 2ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಕಾದಾಡಲಿದೆ. ಆ ಬಳಿಕ 2023ರ ಏಕದಿನ ವಿಶ್ವಕಪ್‌ನಲ್ಲಿ ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ಸೆಣಸಾಡಲಿವೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು 2022ರ ಟಿ20 ವಿಶ್ವಕಪ್‌ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ)ನಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಆಗ ವಿರಾಟ್ ಕೊಹ್ಲಿ ಅವರ ಜೀವನಶ್ರೇಷ್ಠ ಪ್ರದರ್ಶನದ ನೆರವಿನಿಂದ ಭಾರತ ತಂಡ ಬಾಬರ್ ಅಜಂ ನಾಯಕತ್ವದ ತಂಡವನ್ನು ಕೊನೆಯ ಎಸೆತದಲ್ಲಿ ರೋಚಕವಾಗಿ ನಾಲ್ಕು ವಿಕೆಟ್‌ಗಳಿಂದ ಗೆಲುವು ಸಾಧಿಸಿತು.
"ನಾವು ಕ್ರಿಕೆಟ್ ಆಡುವ ಸಮಯದಲ್ಲಿ, ಕೀನ್ಯಾ ವಿರುದ್ಧ ಸೋತರೂ, ಪಾಕಿಸ್ತಾನ ವಿರುದ್ಧ ಸೋಲಬಾರದು ಎಂಬ ಪದ ಚಾಲ್ತಿಯಲ್ಲಿತ್ತು. ಇದು ಆಟಗಾರರ ಮೇಲೆ ಒತ್ತಡ ಮತ್ತು ನಿರೀಕ್ಷೆ ಇರುವುದಾಗಿದೆ," ಎಂದು ಅನಿಲ್ ಕುಂಬ್ಳೆ ಹೇಳಿದರು.
"ಹೀಗಾಗಿಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳನ್ನು ವಿಶ್ವದ ಕಣ್ಣುಗಳು ಕಾತರದಿಂದ ಕಾಯುತ್ತವೆ. ಆದರೆ, ಆಟಗಾರರ ಮೇಲೆ ಒತ್ತಡ ಬೀಳದಂತೆ ಅದನ್ನು ಮತ್ತೊಂದು ಪಂದ್ಯವೆಂದು ಪರಿಗಣಿಸುವುದು ಮುಖ್ಯವಾಗಿದೆ," ಎಂದು ಹಿರಿಯ ಕ್ರಿಕೆಟ್ ಆಡಳಿತಗಾರ ಅಮೃತ್ ಮಾಥುರ್ ಬರೆದ ಸ್ಮರಣ ಸಂಚಿಕೆ ಬಿಡುಗಡೆ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟರು.

ಭಾರತದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಭಾರತದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನದ ವಿರುದ್ಧ 10 ವಿಕೆಟ್‌ಗಳನ್ನು ಸಾಧನೆಯನ್ನು ನೆನಪಿಸಿಕೊಂಡರು.
ಮಂಗಳವಾರ, ಆಗಸ್ಟ್ 8ರಂದು ಅಮೃತ್ ಮಾಥುರ್ ಅವರ ಪಿಚ್‌ಸೈಡ್ ಪುಸ್ತಕದ ಬೆಂಗಳೂರಿನ ಬಿಡುಗಡೆ ಸಮಾರಂಭದಲ್ಲಿ ಕುಂಬ್ಳೆ ಅವರು ಐಸಿಸಿ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ಪೈಪೋಟಿಯ ಕುರಿತು ಚರ್ಚಿಸಿದರು.
"ನಾನು 10 ವಿಕೆಟ್‌ಗಳ ಸಾಧನೆಯ ಬಗ್ಗೆ ಯೋಚಿಸಲಿಲ್ಲ, ಆದರೆ ಅದು ಯಾವುದೇ ಬೌಲರ್‌ನ ಕನಸಾಗಿರುತ್ತದೆ. ನಂತರ ಕೋಲ್ಕತ್ತಾದಲ್ಲಿ ನಡೆದ ಏಷ್ಯನ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಮುಂದಿನ ಟೆಸ್ಟ್ ಪಂದ್ಯದಲ್ಲಿ ನಾನು ಒಂದು ವಿಕೆಟ್ ಸಹ ಪಡೆಯಲು ಹೆಣಗಾಡುತ್ತಿದ್ದೆ, ಅದು ಕ್ರಿಕೆಟ್ ಆಟ," ಎಂದರು.
"ಪಾಕಿಸ್ತಾನ ನಮಗೆ ಯಾವುದೇ ಭದ್ರತೆಯನ್ನು ನೀಡಲು ಸಿದ್ಧವಾಗಿತ್ತು. ನಮ್ಮ ತಂಡದ ಬಸ್‌ನ ಮುಂದೆ ಮತ್ತು ಹಿಂದೆ ಪೊಲೀಸ್ ವಾಹನಗಳು, ತಂಡದ ಬಸ್‌ನ ಮೇಲೆ ಹೆಲಿಕಾಪ್ಟರ್, ಎಲ್ಲಾ ಪ್ರಮುಖ ರಸ್ತೆ ಬಿಂದುಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಮಾರ್ಗದಲ್ಲಿ ಕಟ್ಟಡಗಳ ಮೇಲೆ ಸ್ನೈಪರ್‌ಗಳು ಇದ್ದವು. ವಿಶೇಷವಾಗಿ ಕರಾಚಿ ಕ್ರೀಡಾಂಗಣದಲ್ಲಿ," ಎಂದು ಅಮೃತ್ ಮಾಥುರ್ ನೆನಪಿಸಿಕೊಂಡರು.
"ಒಂದು ಹಂತದಲ್ಲಿ, ನಮಗೆ ಇಷ್ಟು ಭದ್ರತೆ ಏಕೆ ಬೇಕು ಎಂದು ಆಟಗಾರರು ಸಹ ಭಾವಿಸಿದ್ದೆವು. ಆದರೆ ಒಟ್ಟಾರೆ ಪ್ರವಾಸವು ಉತ್ತಮವಾಗಿ ಸಾಗಿತು," ಎಂದು ಅಮೃತ್ ಮಾಥುರ್ ಹೇಳಿದರು.