ಬಲಿಷ್ಠ ತಂಡವನ್ನ ಕಟ್ಟಿದ ಲಕ್ನೋ ಸೂಪರ್ ಜಾಯಿಂಟ್ಸ್: ಮಾಸ್ಟರ್ ಮೈಂಡ್ ಗೌತವ್ ಗಂಭೀರ್ ಪ್ಲ್ಯಾನ್ ಸಕ್ಸಸ್

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಲಕ್ನೋ ಸೂಪರ್ ಜಾಯಿಂಟ್ಸ್ ಬಲಿಷ್ಠ ತಂಡವನ್ನು ರೂಪಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಭಾರತದ ಮಾಜಿ ಆಟಗಾರ ಹಾಗೂ ಎರಡು ಬಾರಿ ಕೆಕೆಆರ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಗೌತವ್ ಗಂಭೀರ್ ಮಾರ್ಗದರ್ಶನದಲ್ಲಿ ಲಕ್ನೋ ತಂಡವು ಮೂರು ವಿಭಾಗದಲ್ಲಿ ಬಲಿಷ್ಠ ಆಟಗಾರರ ಆರಿಸಿ ತಂಡವನ್ನ ರೂಪಿಸಿದೆ.
ಮೆಗಾ ಹರಾಜಿಗೂ ಮುನ್ನ ಕೆ.ಎಲ್ ರಾಹುಲ್, ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್, ಸ್ಪಿನ್ನರ್ ರವಿ ಬಿಷ್ಣೋಯ್‌ರನ್ನ ತಂಡದಲ್ಲಿ ಉಳಿಸಿಕೊಂಡಿರುವ ಲಕ್ನೋ ಸೂಪರ್ ಜಾಯಿಂಟ್ಸ್ ಈ ಬಾರಿ ಅನೇಕ ಸ್ಟಾರ್ ಆಟಗಾರರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಬಹಳ ಎಚ್ಚರಿಕೆಯಿಂದ ತಂಡ ಕಟ್ಟಿರುವ ಲಕ್ನೋ
ಲಕ್ನೋ ಆಟಗಾರರು ತಂಡದ ರಚನೆಯನ್ನು ಬಹಳ ಎಚ್ಚರಿಕೆಯಿಂದ ಅರ್ಥೈಸಿಕೊಂಡು ತಮ್ಮದಾಗಿಸಿಕೊಂಡಿದ್ದಾರೆ ಎಂದು ಹೇಳಬಹುದು. ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಆಗಿ ಕೈಬಿಟ್ಟಿದ್ದ ಕ್ವಿಂಟನ್ ಡಿಕಾಕ್ ಅವರನ್ನು ಲಕ್ನೋ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಓಪನರ್ ಪಾತ್ರ ನಿರ್ವಹಿಸಬಲ್ಲ ಆಟಗಾರನನ್ನು ಲಕ್ನೋ 6.75 ಕೋಟಿ ರೂ.ಗೆ ಖರೀದಿಸಿದೆ. ಅದೊಂದು ದೊಡ್ಡ ನಡೆ. ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿಕಾಕ್‌ರನ್ನ ಮರಳಿ ತರಲು ಪ್ರಯತ್ನಿಸಿತು ಆದರೆ ಲಕ್ನೋ ಬಿಟ್ಟುಕೊಡಲು ನಿರಾಕರಿಸಿತು.

ನಾಲ್ವರು ಸೂಪರ್ ಆಲ್‌ರೌಂಡರ್‌ಗಳನ್ನ ತನ್ನದಾಗಿಸಿಕೊಂಡಿದೆ
ಮೂವರು ಆಲ್ ರೌಂಡರ್ ಗಳನ್ನು ತಂಡಕ್ಕೆ ಕರೆತಂದಿರುವುದು ಗಮನಾರ್ಹ. ಮುಂಬೈ ಇಂಡಿಯನ್ಸ್ ಜೊತೆ ಹಲವು ಪಂದ್ಯಗಳನ್ನು ಗೆದ್ದಿರುವ ಕೃನಾಲ್ ಪಾಂಡ್ಯ ಅವರನ್ನು 8.25 ಕೋಟಿ ರೂಪಾಯಿಗೆ ಲಕ್ನೋ ಪಡೆದುಕೊಂಡಿದೆ. ಮಧ್ಯಮ ಸಾಲಿನಲ್ಲಿ ಅವರು ಬ್ಯಾಟ್‌ನೊಂದಿಗೆ ಮಿಂಚಲು ಸಾಧ್ಯ. ಜೊತೆಗ ದೀಪಕ್ ಹೂಡಾ ಮತ್ತೊಬ್ಬ ಸ್ಪಿನ್ ಆಲ್ ರೌಂಡರ್ ಆಗಿದ್ದು ಅವರನ್ನು ಲಕ್ನೋ 5.75 ಕೋಟಿ ರೂ.ಗೆ ಪಡೆದಿದೆ. ಈತ ಕಳೆದ ಋತುವಿನಲ್ಲಿ ಅವರು ಪಂಜಾಬ್ ಕಿಂಗ್ಸ್‌ನ ಭಾಗವಾಗಿದ್ದರು.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಹೂಡಾ ಪಾರ್ಟ್ ಟೈಮ್ ಸ್ಪಿನ್ನರ್ ಆಗಿಯೂ ಬಳಸಬಹುದಾದ ಆಟಗಾರ. ಲಕ್ನೋದ ಮತ್ತೊಂದು ಪ್ರಯೋಜನವೆಂದರೆ ಅದು ಎಲ್ಲಾ ತಂಡಗಳು ಬಯಸುವಂತಹ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಭಾಗವಾಗಿದ್ದ ಆಟಗಾರ ಈ ಬಾರಿ ಮಿಂಚಿನ ಫಾರ್ಮ್‌ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ಭಾರತದ ಸರಣಿಯಲ್ಲಿ ಮಿಂಚಿದ ಜೇಸನ್ ಹೋಲ್ಡರ್. ಅಂತಿಮವಾಗಿ 8.75 ಕೋಟಿ ರೂ.ಗಳಿಗೆ ಲಕ್ನೋ ಸ್ವಾಧೀನಪಡಿಸಿಕೊಂಡಿತು. ಈ ಮೂವರು ಆಲ್‌ರೌಂಡರ್ ಜೊತೆಗೆ ಮಾರ್ಕಸ್ ಸ್ಟೋಯ್ನಿಸ್ ಸೇರಿದಾಗ ಲಕ್ನೋದಲ್ಲಿ ನಾಲ್ಕು ಸೂಪರ್ ಆಲ್ ರೌಂಡರ್‌ಗಳು ಇರುತ್ತಾರೆ. ಇದು ಲಕ್ನೋ ತಂಡವನ್ನ ಆನ್ ಪೇಪರ್‌ನಲ್ಲಿ ಬಲಿಷ್ಠಗೊಳಸಿದೆ.

ಬೌಲಿಂಗ್ ವಿಭಾಗಕ್ಕೆ ಯುವ ವೇಗಿ ಅವೇಶ್ ಖಾನ್ ಸೇರ್ಪಡೆ
ಬೌಲಿಂಗ್ ಲೈನ್ ಅಪ್ ಗೆ ಅವೇಶ್ ಖಾನ್ ಸೇರ್ಪಡೆ ಕೂಡ ಲಕ್ನೋ ಉತ್ತಮ ನಡೆಯಾಗಿದೆ. ಕಳೆದ ಋತುವಿನಲ್ಲಿ ಡೆಲ್ಲಿ ಪರ ಮಿಂಚಿದ್ದ ಈ ತಾರೆಯನ್ನು ಲಕ್ನೋ 10 ಕೋಟಿ ರೂ. ಬಿಡ್ ಮಾಡಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಈತನ ಜೊತೆಗೆ ಅಂಕಿತ್ ಸಿಂಗ್ ರಜಪೂತ್ ಅವರನ್ನು ಪೇಸ್ ಲೈನ್ ಅಪ್ ಗೆ ಸೇರಿಸಿಕೊಂಡಿದೆ. ಬ್ಯಾಟಿಂಗ್ ಬೌಲರ್ ಎಂದೇ ಕರೆಯಬಹುದಾದ ರಜಪೂತ್ ಅವರನ್ನು ಲಕ್ನೋ 50 ಲಕ್ಷಕ್ಕೆ ಖರೀದಿಸಿದೆ. ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ 7.50 ಕೋಟಿ ರೂ.ಗೆ ತಂಡಕ್ಕೆ ಸೇರ್ಪಡೆಗೊಂಡಿರುವುದು ಕೂಡ ಉತ್ತಮ ನಡೆ. ಮಾರ್ಕ್ ವುಡ್ ಬ್ಯಾಟ್‌ನಲ್ಲೂ ಮಿಂಚಬಲ್ಲರು.

ಕನ್ನಡಿಗ ಮನೀಶ್ ಪಾಂಡೆಯನ್ನ ಹೊಂದಿರುವ ಲಕ್ನೋ
ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜಾಯಿಂಟ್ಸ್ ತಂಡದಲ್ಲಿ ಮತ್ತೋರ್ವ ಕನ್ನಡಿಗ ಮನೀಶ್ ಪಾಂಡೆ ಇರುವುದು ತಂಡದ ಬಲ ಹೆಚ್ಚಿಸಿದೆ. ಬ್ಯಾಟಿಂಗ್ ಲೈನ್ ಅಪ್ ನಲ್ಲಿ ಮನೀಶ್ ಪಾಂಡೆ ಕಣಕ್ಕಿಳಿಯುವುದು ಸ್ವಲ್ಪ ಕುತೂಹಲ ಮೂಡಿಸಿದೆ. ಕಳೆದ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ನಿರಾಸೆಗೊಳಿಸಿದ ನಂತರ ಲಕ್ನೋ ಅವರು ಮನೀಶ್ ಪಾಂಡೆಯನ್ನು 4.60 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿದ್ದಾರೆ. ಮನೀಶ್ ಪಾಂಡೆ ಈ ಹಿಂದೆ ಕೆಕೆಆರ್‌ನಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಆಡಿದ ಆಟಗಾರ. ಅವರು ಅಗ್ರ ಕ್ರಮಾಂಕ ಬ್ಯಾಟಿಂಗ್ ಮತ್ತು ಮಿಡ್‌ಫೀಲ್ಡ್‌ನಲ್ಲಿ ಮಿಂಚುವ ಕೌಶಲ್ಯವನ್ನು ಹೊಂದಿದ್ದಾರೆ. ಆದ್ರೆ ಅವರ ಇತ್ತೀಚಿನ ಫಾರ್ಮ್ ಉತ್ತಮವಾಗಿಲ್ಲ. ಮನೀಶ್ ಪಾಂಡೆ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

ಅತ್ಯುತ್ತಮ ತಂಡದೊಂದಿಗೆ ಪ್ರಶಸ್ತಿ ಗೆದ್ದು ತೋರಿಸುತ್ತಾರ ಕೆ.ಎಲ್ ರಾಹುಲ್
ಪಂಜಾಬ್ ಕಿಂಗ್ಸ್ ತಂಡವನ್ನ ಮುನ್ನಡೆಸಿದ್ದ ಕೆ.ಎಲ್ ರಾಹುಲ್ ಪ್ರಶಸ್ತಿ ಗೆಲ್ಲುವಲ್ಲಿ ವಿಫಲಗೊಂಡಿದ್ರು. ಆದ್ರೀಗ ರಾಹುಲ್ ಲಕ್ನೋ ತಂಡದ ತಮ್ಮ ಚೊಚ್ಚಲ ಋತುವಿನಲ್ಲಿ ಅತ್ಯುತ್ತಮ ಆಟಗಾರರೊಂದಿಗೆ ತಂಡವನ್ನು ಪ್ರಶಸ್ತಿಗೆ ಕೊಂಡೊಯ್ಯುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಕೆ.ಎಲ್ ರಾಹುಲ್ ಐಪಿಎಲ್ 2022ರಲ್ಲಿ ಅತಿ ಹೆಚ್ಚು ಮೊತ್ತಕ್ಕೆ ರೀಟೈನ್ ಆದ ಆಟಗಾರನಾಗಿದ್ದಾರೆ. ರಾಹುಲ್ ಬರೋಬ್ಬರಿ 17 ಕೋಟಿ ರೂಪಾಯಿಗೆ ಲಕ್ನೋ ತಂಡ ಸೇರಿಕೊಂಡಿದ್ದಾರೆ.
ಲಕ್ನೋ ಸೂಪರ್‌ಜಾಯಿಂಟ್ಸ್ ಸಂಪೂರ್ಣ ಸ್ಕ್ವಾಡ್ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮತ್ತು ಲಕ್ನೋ ತಂಡವನ್ನ ಕ್ಲಿಕ್ ಮಾಡಿದರೆ ನಿಮಗೆ ಸಂಪೂರ್ಣ ಆಟಗಾರರ ಪಟ್ಟಿ ದೊರೆಯುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications