ಮಹಾರಾಜ ಟ್ರೋಫಿ: ಪವನ್ ದೇಶಪಾಂಡೆ ಅಜೇಯ ಅರ್ಧಶತಕ; ಮಂಗಳೂರಿಗೆ ಸೋಲುಣಿಸಿದ ಮೈಸೂರು

ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿಯ 19ನೇ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡದ ವಿರುದ್ಧ ಮೈಸೂರು ವಾರಿಯರ್ಸ್ 6 ವಿಕೆಟ್‌ಗಳ ಗೆಲುವನ್ನು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಮೈಸೂರು ವಾರಿಯರ್ಸ್ ತಂಡದ ನಾಯಕ ಕರುಣ್ ನಾಯರ್ ಬೌಲಿಂಗ್ ಆಯ್ದುಕೊಂಡು ಎದುರಾಳಿ ಮಂಗಳೂರು ಯುನೈಟೆಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಯುನೈಟೆಡ್ ನಿಕಿನ್ ಜೋಸ್ ಹಾಗೂ ಅಭಿನವ್ ಮನೋಹರ್ ಅವರ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿ ಮೈಸೂರು ವಾರಿಯರ್ಸ್ ತಂಡಕ್ಕೆ ಗೆಲ್ಲಲು 172 ರನ್‌ಗಳ ಗುರಿಯನ್ನು ನೀಡಿತ್ತು. ಇನ್ನು ಈ ಪೈಪೋಟಿಯುತ ಗುರಿಯನ್ನು ಮೈಸೂರು ವಾರಿಯರ್ಸ್ 11 ಎಸೆತಗಳು ಬಾಕಿ ಇರುವಾಗಲೇ ಮುಟ್ಟಿದ್ದು, 18.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿ 6 ವಿಕೆಟ್‌ಗಳ ಭರ್ಜರಿ ಜಯವನ್ನು ಸಾಧಿಸಿದೆ.

ಮಂಗಳೂರು ಯುನೈಟೆಡ್ ಇನ್ನಿಂಗ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಯುನೈಟೆಡ್ ಪರ ಆರಂಭಿಕ ಆಟಗಾರರಾಗಿ ನಾಯಕ ಸಮರ್ಥ್ ಆರ್ 22 ರನ್ ಕಲೆ ಹಾಕಿದರೆ, ಮತ್ತೋರ್ವ ಆರಂಭಿಕ ಆಟಗಾರ ಮೆಕ್‌ನೀಲ್ ನೊರೋನ್ಹಾ ಗೋಲ್ಡನ್ ಡಕ್‌ಔಟ್ ಆದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕಿನ್ ಜೋಸ್ 47 ಎಸೆತಗಳಲ್ಲಿ 55 ರನ್ ಕಲೆಹಾಕಿ ಆರಂಭಿಕ ಆಘಾತ ಅನುಭವಿಸಿದ್ದ ತಂಡಕ್ಕೆ ಆಸರೆಯಾದರು. ಅನೀಶ್ವರ್ ಗೌತಮ್ 5 ರನ್ ಕಲೆಹಾಕಿದರೆ, ಅಭಿವನ್ ಮನೋಹರ್ 5 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 35 ಎಸೆತಗಳಲ್ಲಿ 68 ರನ್ ಚಚ್ಚಿ ಅಬ್ಬರಿಸಿದರು. ಅಮಿತ್ ವರ್ಮಾ 5 ರನ್ ಗಳಿಸಿದರೆ, ಸೋಮಣ್ಣ 3 ರನ್ ಕಲೆಹಾಕಿದರು ಹಾಗೂ ಹೆಚ್ ಎಸ್ ಶರತ್ ಅಜೇಯ 1 ರನ್ ಕಲೆಹಾಕಿದರು.
ಮೈಸೂರು ವಾರಿಯರ್ಸ್ ಪರ ಪ್ರತೀಕ್ ಜೈನ್ ಹಾಗೂ ಆದಿತ್ಯ ಗೋಪಾಲ್ ತಲಾ ಎರಡು ವಿಕೆಟ್ ಪಡೆದರೆ, ವಿದ್ಯಾಧರ್ ಪಾಟೀಲ್ ಒಂದು ವಿಕೆಟ್ ಪಡೆದರು.

ಮೈಸೂರು ವಾರಿಯರ್ಸ್ ಇನ್ನಿಂಗ್ಸ್
ಮೈಸೂರು ವಾರಿಯರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಿಹಾಲ್ ಉಳ್ಳಾಲ್ 25 ರನ್, ನಿತಿನ್ ಭಿಲ್ಲೆ 11 ರನ್ ಕಲೆಹಾಕಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪವನ್ ದೇಶಪಾಂಡೆ 35 ಎಸೆತಗಳಲ್ಲಿ ಅಜೇಯ 53 ರನ್ ಕಲೆಹಾಕಿದರು, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಕರುಣ್ ನಾಯರ್ 27 ಎಸೆತಗಳಲ್ಲಿ 47 ರನ್ ಚಚ್ಚಿ ಅಬ್ಬರಿಸಿದರು, ಶ್ರೇಯಸ್ ಗೋಪಾಲ್ 6 ರನ್ ಹಾಗೂ ಶಿವರಾಜ್ 11 ಎಸೆತಗಳಲ್ಲಿ ಅಜೇಯ 21 ರನ್ ಬಾರಿಸಿದರು.
ಮಂಗಳೂರು ಯುನೈಟೆಸಡ್ ಪರ ಹೆಚ್ಎಸ್ ಶರತ್ ಹಾಗೂ ಮುರಳೀಧರ ವೆಂಕಟೇಶ್ ತಲಾ ಎರಡು ವಿಕೆಟ್ ಪಡೆದದ್ದು ಬಿಟ್ಟರೆ ಉಳಿದ ಯಾವುದೇ ಬೌಲರ್ ಕೂಡ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.

ಆಡುವ ಬಳಗ
ಮೈಸೂರು ವಾರಿಯರ್ಸ್: ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್), ಕರುಣ್ ನಾಯರ್ (ನಾಯಕ), ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗ್ಡೆ, ಶಿವರಾಜ್ ಎಸ್, ಆದಿತ್ಯ ಗೋಯಲ್, ನಿತಿನ್ ಭಿಲ್ಲೆ, ಲೋಚನ್ ಅಪ್ಪಣ್ಣ, ವಿದ್ಯಾಧರ್ ಪಾಟೀಲ್, ಪ್ರತೀಕ್ ಜೈನ್
ಮಂಗಳೂರು ಯುನೈಟೆಡ್: ರವಿಕುಮಾರ್ ಸಮರ್ಥ್ (ನಾಯಕ), ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ, ನಿಕಿನ್ ಜೋಸ್, ಅನೀಶ್ವರ್ ಗೌತಮ್, ಸುಜಯ್ ಸಾತೇರಿ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಅಮಿತ್ ವರ್ಮಾ, ಆದಿತ್ಯ ಸೋಮಣ್ಣ, ಮುರಳೀಧರ ವೆಂಕಟೇಶ್, ಎಚ್ ಎಸ್ ಶರತ್, ವಿಜಯ್ ಕುಮಾರ್ ವೈಶಾಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications