MI vs CSK IPL 2023: ಸಿಎಸ್‌ಕೆಗೆ ದೊಡ್ಡ ಹಿನ್ನಡೆ; ಮುಂಬೈ ವಿರುದ್ಧ ಸ್ಟಾರ್ ಆಲ್‌ರೌಂಡರ್ ಆಡುವುದು ಅನುಮಾನ!
ಶನಿವಾರ, ಏಪ್ರಿಲ್ 8ರಂದು ಮುಂಬೈನಲ್ಲಿ ನಡೆಯುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 12ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಇದೀಗ 2023ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.

ಪಂದ್ಯದ ಹಿಂದಿನ ದಿನದಂದು ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಬೆನ್ ಸ್ಟೋಕ್ಸ್ ಗಾಯಗೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಶುಕ್ರವಾರದ ಅಭ್ಯಾಸ ಅವಧಿಯಲ್ಲಿ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದು, ಬೆನ್ ಸ್ಟೋಕ್ಸ್ ಅವರಿಗೆ ಸುಮಾರು ಹತ್ತು ದಿನಗಳ ಕಾಲ ವಿಶ್ರಾಂತಿಯನ್ನು ಸೂಚಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ವರದಿಯಾಗಿದೆ.
ಪಂದ್ಯದ ದಿನವಾದ ಶನಿವಾರ ಮಧ್ಯಾಹ್ನದ ನಂತರ ಆಯ್ಕೆಯ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಐಸಿಸಿ ಏಕದಿನ ವಿಶ್ವಕಪ್ ವರ್ಷದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸದ ಕಾರಣ, ಬೆನ್ ಸ್ಟೋಕ್ಸ್ ಪಂದ್ಯದಿಂದ ಹೊರಗುಳಿಯಲು ಬಯಸಬಹುದು ಎಂದು ವರದಿ ಹೇಳಿದೆ.
2023ರ ಐಪಿಎಲ್‌ಗಾಗಿ ಕಳೆದ ಡಿಸೆಂಬರ್‌ನಲ್ಲಿ ನಡೆದ ಮಿನಿ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು 16.25 ಕೋಟಿ ರೂ.ಗೆ ಸಿಎಸ್‌ಕೆ ಖರೀದಿಸಿದೆ. ಆದರೆ, ಪಡೆದ ಮೊತ್ತಕ್ಕೆ ತಕ್ಕಂತೆ ಬೆನ್ ಸ್ಟೋಕ್ಸ್ ಅವರಿಂದ ಉತ್ತಮ ಪ್ರದರ್ಶನ ಬಂದಿಲ್ಲ. ಆಡಿದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 7 ರನ್ ಗಳಿಸಿದರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಕೇವಲ 8 ರನ್ ಗಳಿಸಲಷ್ಟೇ ಶಕ್ತರಾದರು.

ಎಂಎಸ್ ಧೋನಿ ಒಂದು ದಿನ ನಿವೃತ್ತಿ ನಿರ್ಧಾರ ತೆಗೆದುಕೊಳ್ಳುವ ಕಾರಣ ಸಿಎಸ್‌ಕೆ ಫ್ರಾಂಚೈಸಿ ಬೆನ್ ಸ್ಟೋಕ್ಸ್ ಅವರಿಗಾಗಿ ಅಧಿಕ ಹಣ ಖರ್ಚು ಮಾಡಿ ಖರೀದಿಸಿದೆ. ಏಕೆಂದರೆ ಸಿಎಸ್‌ಕೆ ಬೆನ್ ಸ್ಟೋಕ್ಸ್ ಅವರಲ್ಲಿ ಭವಿಷ್ಯದ ನಾಯಕನನ್ನು ನೋಡುತ್ತಿದೆ. ಈ ಋತುವಿನ ಅಂತ್ಯದಲ್ಲಿ ಎಂಎಸ್ ಧೋನಿ ಐಪಿಎಲ್‌ನಿಂದ ನಿವೃತ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಭವಿಷ್ಯದ ಸಿಎಸ್‌ಕೆ ನಾಯಕನಾಗಿ ಬೆನ್ ಸ್ಟೋಕ್ಸ್ ಆಡುವ ಕುರಿತು ತಂಡದ ಆಲ್‌ರೌಂಡರ್ ಮೊಯಿನ್ ಅಲಿ ಅವರನ್ನು ಕೇಳಿದಾಗ, ಸ್ಟೋಕ್ಸ್ ಅವರು ಚೆನ್ನೈ ಫ್ರಾಂಚೈಸಿಯ ಭಾಗವಾಗಿದ್ದು, ಅಲ್ಲಿ ದೀರ್ಘಕಾಲ ಉಳಿಯುವದನ್ನು ಆನಂದಿಸುತ್ತಾರೆ ಎಂದು ಹೇಳಿದರು.
"ಬೆನ್ ಸ್ಟೋಕ್ಸ್ ನಿಜವಾಗಿಯೂ ಆನಂದಿಸುತ್ತಿದ್ದಾರೆ. ಸಿಎಸ್‌ಕೆ ಫ್ರಾಂಚೈಸಿಗೆ ಬಂದಿರುವುದನ್ನು ಮತ್ತು ಈ ಫ್ರಾಂಚೈಸ್‌ಗಾಗಿ ಆಡುವುದನ್ನು ನಿಜವಾಗಿಯೂ ಇಷ್ಟಪಡುತ್ತಾರೆ. ಅವರು ಸಿಎಸ್‌ಕೆ ತಂಡದ ದೊಡ್ಡ ಭಾಗವಾಗಿದ್ದಾರೆ, ಅವರ ಅನುಭವ ತಂಡಕ್ಕೆ ಬೇಕಾಗಿದೆ," ಎಂದು ಮೊಯಿನ್ ಅಲಿ ತಿಳಿಸಿದರು.

ಶನಿವಾರ ಸಂಜೆ ನಡೆಯಲಿರುವ ಪಂದ್ಯದಲ್ಲಿ ಸಿಎಸ್‌ಕೆ ತಂಡದ ಆಡುವ 11ರ ಬಳಗದಿಂದ ಬೆನ್ ಸ್ಟೋಕ್ಸ್ ಹೊರಗುಳಿಯಲು ನಿರ್ಧರಿಸಿದರೆ, ಅವರ ಸ್ಥಾನವನ್ನು ಯಾರು ಪಡೆಯುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಡ್ವೈನ್ ಪ್ರಿಟೋರಿಯಸ್ ಅವರನ್ನು ಆಡುವ 11ರ ಬಳಗದಲ್ಲಿ ಬದಲಿಸುವ ಸಂಭಾವ್ಯ ಆಟಗಾರನಾಗಿದ್ದಾನೆ.
ಆದರೆ, ಆಲ್‌ರೌಂಡರ್ ಡ್ವೈನ್ ಪ್ರಿಟೋರಿಯಸ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಕಡಿಮೆ ಇದ್ದು, ಹೀಗಾಗಿ ಎಂಎಸ್ ಧೋನಿ ಮುಂಬೈ ಇಂಡಿಯನ್ಸ್ ವಿರುದ್ಧ ಮಧ್ಯಮ ಕ್ರಮಾಂಕದಲ್ಲಿ ಬಡ್ತಿ ಪಡೆದು ಬ್ಯಾಟಿಂಗ್ ಮಾಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications