
ಬ್ರಿಡ್ಜ್‌ಟೌನ್, ಆಗಸ್ಟ್ 27: ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಇರ್ಫಾನ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಕೆರೆಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ 4 ಓವರ್‌ಗಳಲ್ಲಿ ಕೇವಲ 1 ರನ್ ನೀಡಿದ ಇರ್ಫಾನ್ ದಾಖಲೆ ನಿರ್ಮಿಸಿದ್ದಾರೆ.
ಬಾರ್ಬಡೋಸ್ ಟ್ರೈಡೆಂಟ್ಸ್ ತಂಡದ ಪರವಾಗಿ ಆಡುತ್ತಿರುವ ಇರ್ಫಾನ್, ಸೈಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್ ತಂಡದ ವಿರುದ್ಧ ಈ ಸಾಧನೆ ಮಾಡಿದ್ದಾರೆ.
ಬಿರುಸಿನ ಆಟಕ್ಕೆ ಹೆಸರಾದ ಟಿ20ಯಲ್ಲಿ ಎಸೆದ 24 ಎಸೆತಗಳ ಪೈಕಿ ಕೇವಲ ಒಂದು ಎಸೆತದಲ್ಲಿ ಮಾತ್ರ ರನ್ ನೀಡಿ 23 ಎಸೆತಗಳಲ್ಲಿ ಯಾವುದೇ ರನ್ ನೀಡದಂತಹ ಬೌಲಿಂಗ್ ದಾಳಿ ನಡೆಸಿರುವುದು ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು.
ಪ್ಯಾಟ್ರಿಯಾಟ್ಸ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಕ್ರಿಸ್ ಗೇಲ್ ಅವರ ವಿಕೆಟ್ ಪಡೆದ ಇರ್ಫಾನ್, ತಮ್ಮ ಎರಡನೆಯ ಓವರ್‌ನಲ್ಲಿ ಎವಿನ್ ಲೆವಿಸ್ ವಿಕೆಟ್ ಪಡೆದರು.
ಇರ್ಫಾನ್ ನೀಡಿದ ಏಕೈಕ ರನ್ ಬಂದಿದ್ದ ಅವರ ನಾಲ್ಕು ಓವರ್‌ಗಳ ಕೋಟಾದ ಕೊನೆಯ ಎಸೆತದಲ್ಲಿ. ಅವರ 24ನೆಯ ಎಸೆತದಲ್ಲಿ ಬ್ರೆಂಡನ್ ಕಿಂಗ್ ಮೊದಲ ಹಾಗೂ ಏಕೈಕ ರನ್ ಗಳಿಸಿದರು.
ಆದರೂ, ಇರ್ಫಾನ್ ಹೋರಾಟ ಫಲ ನೀಡಲಿಲ್ಲ. ಅವರ ನಿಖರ ಬೌಲಿಂಗ್ ಹೊರತಾಗಿಯೂ ಪ್ಯಾಟ್ರಿಯಾಟ್ಸ್ ತಂಡವು ಗೆಲುವಿಗೆ ಅಗತ್ಯವಾಗಿದ್ದ 148 ರನ್ ಗುರಿಯನ್ನು ತಲುಪುವುದರಲ್ಲಿ ಯಶಸ್ವಿಯಾಯಿತು.