
ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು ತನ್ನ ದೇಶಕ್ಕಾಗಿ ಆಡಿದ ಅಲ್ಪಾವಧಿಯಲ್ಲಿ ಹಲವಾರು ಐಕಾನಿಕ್ ಇನ್ನಿಂಗ್ಸ್‌ಗಳನ್ನು ನೀಡಿದ್ದಾರೆ.
ಭಾರತ ತಂಡಕ್ಕೆ ಆಯ್ಕೆಯಾಗುವ ಮೊದಲು ಸೈಡ್‌ಲೈನ್‌ನಲ್ಲಿ ದೀರ್ಘಕಾಲ ಕಾಯಬೇಕಾಗಿದ್ದ ಸೂರ್ಯಕುಮಾರ್ ಯಾದವ್ ಕ್ರಿಕೆಟ್‌ನ ಚುಟುಕು ಆಟದ ಸ್ವರೂಪದಲ್ಲಿ ಅಗ್ರ ಪ್ರದರ್ಶನಕಾರರಲ್ಲಿ ಒಬ್ಬರಾಗಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಸೂರ್ಯಕುಮಾರ್ ಯಾದವ್ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ನೆಚ್ಚಿನ ಪ್ರದರ್ಶನವನ್ನು ಇದೀಗ ಬಹಿರಂಗಪಡಿಸಿದರು.
ಸೂರ್ಯಕುಮಾರ್ ಯಾದವ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಬಾರಿಸಿದ ಅರ್ಧಶತಕವನ್ನು ಅವರು ತಾವು ಆಡಿದ ಅವರ ಅತ್ಯುತ್ತಮ ಇನ್ನಿಂಗ್ಸ್ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಪರ್ತ್ ಬ್ಯಾಟಿಂಗ್ ಮಾಡಲು ಕಷ್ಟಕರವಾದ ಪಿಚ್ ಎಂದು ಹೇಳಿದ ಸೂರ್ಯಕುಮಾರ್, ಆ ಪಿಚ್‌ನ ವಿಕೆಟ್‌ನಂತಹದನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ತಿಳಿಸಿದ್ದಾರೆ.

"ಪರ್ತ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ದಕ್ಷಿಣ ಆಫ್ರಿಕಾ ವಿರುದ್ಧದ ಅರ್ಧಶತಕವು ನನಗೆ ನಿರ್ಣಾಯಕ ಪ್ರದರ್ಶನ ಎಂದು ನಾನು ಭಾವಿಸುತ್ತೇನೆ. ಇದು ಇಲ್ಲಿಯವರೆಗೆ ನಾನು ಎದುರಿಸಿದ ಅತ್ಯಂತ ಸವಾಲಿನ ವಿಕೆಟ್ ಆಗಿತ್ತು. ಪಂದ್ಯದ ಮೊದಲು ನಾನು 15 ನಿಮಿಷಗಳ ಕಾಲ ನೆಟ್ಸ್‌ನಲ್ಲಿ ಬ್ಯಾಟ್ ಮಾಡಲು ಹೋದೆ ಮತ್ತು ನಾನು ಭಾವನೆಯನ್ನು ಪಡೆದುಕೊಂಡೆ".
"ಪರ್ತ್‌ನಲ್ಲಿ ಅಭ್ಯಾಸದ ಪಿಚ್‌ಗಳು ವೇಗವಾಗಿದ್ದವು. ಹಾಗಾಗಿ ನಾನು ಕೇವಲ 15 ಎಸೆತಗಳನ್ನು ಎದುರಿಸಿದೆ ಮತ್ತು ವಿಕ್ಕಿ ಪಾಜಿಗೆ (ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್) ನಾನು ಅಭ್ಯಾಸವನ್ನು ಇಲ್ಲಿಗೆ ಮುಗಿಸುತ್ತೇನೆ, ಏನು ಬ್ಯಾಟಿಂಗ್ ಮಾಡಬೇಕೋ ಅದನ್ನು ಪಂದ್ಯದಲ್ಲಿ ಮಾಡುತ್ತೇನೆ," ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
"ನಾನು ಬ್ಯಾಟಿಂಗ್‌ಗೆ ಹೋದಾಗ, ಈ ಪಿಚ್ ನಾನು ಯೋಚಿಸಿದ್ದಕ್ಕಿಂತ ವೇಗವಾಗಿದೆ ಎಂದು ನನಗೆ ನಾನೇ ಅಂದುಕೊಂಡೆ. ಹಾಗಾಗಿ, ನಾನು ನಾನ್‌ಸ್ಟ್ರೈಕರ್ ಕಡೆ ಹೋದಾಗ, ಬೌನ್ಸ್ ಕೂಡ ಇರುವುದರಿಂದ ನಾನು ಯಾವ ಹೊಡೆತಗಳನ್ನು ಆಡಬಹುದೆಂದು ಯೋಚಿಸುತ್ತಿದ್ದೆ. ನಾವು 49 ರನ್‌ಗಳಾಗಿದ್ದಾಗ 5 ವಿಕೆಟ್ ಕಳೆದುಕೊಂಡಿದ್ದೆವು. ನಾವು ಕಳೆದುಕೊಳ್ಳಲು ಏನೂ ಇರಲಿಲ್ಲ. ಆಗ ನಾವು 75 ರನ್‌ಗಳಿಗೆ ಆಲೌಟ್ ಆಗಬಹುದಿತ್ತು. ಆದರೆ ನಾನು ಸಕಾರಾತ್ಮಕ ಮಾರ್ಗವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ," ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದರು.

ಸೂರ್ಯಕುಮಾರ್ ಯಾದವ್ ಭಾರತಕ್ಕೆ ಅದ್ಭುತವಾದ ಪ್ರದರ್ಶನದ ಮೂಲಕ 130ರ ಗಡಿ ದಾಟಿಸಲು ನೆರವಾದರು. ಭಾರತದ ಎಲ್ಲ ಬ್ಯಾಟರ್‌ಗಳು ಹೆಣಗಾಡುವ ಪಿಚ್‌ನಲ್ಲಿ ಸೂರ್ಯಕುಮಾರ್ ಕೇವಲ 40 ಎಸೆತಗಳಲ್ಲಿ 68 ರನ್ ಗಳಿಸಿದರು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 15 ರನ್ ಗಳಿಸಿ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿದ್ದರು.
ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನದಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 20 ಓವರ್‌ಗಳಲ್ಲಿ 133/9 ಗಳಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳು ಅತ್ಯುತ್ತಮ ದಾಳಿ ನಡೆಸಿದರೂ, ಡೇವಿಡ್ ಮಿಲ್ಲರ್ ಮತ್ತು ಏಡೆನ್ ಮಾರ್ಕ್ರಾಮ್ ಪಂದ್ಯದ ಅಂತಿಮ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.