ಸೋಮವಾರ, ಏಪ್ರಿಲ್ 3ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಐಪಿಎಲ್‌ನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ತಮ್ಮ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದರು.
ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಸುರೇಶ್ ರೈನಾ ನಂತರ ಐಪಿಎಲ್ ಇತಿಹಾಸದಲ್ಲಿ 5,000 ರನ್ ಪೂರೈಸಿದ ಐದನೇ ಭಾರತೀಯ ಆಟಗಾರನಾದರು. ಎಲ್‌ಎಸ್‌ಜಿ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 217 ರನ್ ಕಲೆಹಾಕಿತು

20ನೇ ಓವರ್ ಎಸೆದ ಮಾರ್ಕ್ ವುಡ್ ಎಸೆತದಲ್ಲಿ ಸತತ ಎರಡು ಸಿಕ್ಸರ್ ಬಾರಿಸುವುದರೊಂದಿಗೆ ಎಂಎಸ್ ಧೋನಿ 5,000 ರನ್‌ಗಳ ಬೃಹತ್ ಮೈಲುಗಲ್ಲು ಸ್ಥಾಪಿಸಿದರು ಮತ್ತು ನಂತರದ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು.
ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ಕೊಹ್ಲಿ 224 ಐಪಿಎಲ್ ಪಂದ್ಯಗಳಲ್ಲಿ 6706 ರನ್ ಗಳಿಸಿ ಪ್ರಸ್ತುತ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಶಿಖರ್ ಧವನ್ 199 ಐಪಿಎಲ್ ಪಂದ್ಯಗಳಲ್ಲಿ 6086 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 221 ಐಪಿಎಲ್ ಪಂದ್ಯಗಳಲ್ಲಿ 5764 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಡೇವಿಡ್ ವಾರ್ನರ್ 155 ಐಪಿಎಲ್‌ನಲ್ಲಿ 5668 ರನ್, ಮಾಜಿ ಆಟಗಾರರಾದ ಸುರೇಶ್ ರೈನಾ 205 ಐಪಿಎಲ್ ಪಂದ್ಯಗಳಲ್ಲಿ 5528 ರನ್ ಮತ್ತು ಎಬಿ ಡಿವಿಲಿಯರ್ಸ್ 184 ಐಪಿಎಲ್ ಪಂದ್ಯಗಳಲ್ಲಿ 5162 ರನ್ ಕಲೆ ಹಾಕಿ ನಂತರದ ಸ್ಥಾನದಲ್ಲಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮೊದಲು ಎಂಎಸ್ ಧೋನಿ 234 ಐಪಿಎಲ್ ಪಂದ್ಯಗಳಲ್ಲಿ 39ರ ಸರಾಸರಿ ಮತ್ತು 135ರ ಸ್ಟ್ರೈಕ್‌ರೇಟ್‌ನಲ್ಲಿ 4978 ರನ್ ಗಳಿಸಿದ್ದರು. ಇದರಲ್ಲಿ 24 ಅರ್ಧಶತಕಗಳು ಒಳಗೊಂಡಿವೆ. ಎಂಎಸ್ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಐಪಿಎಲ್‌ನಲ್ಲಿ 5000 ರನ್ ಕ್ಲಬ್‌ಗೆ ಸೇರಿದ್ದು ಅದ್ಭುತವಾಗಿದೆ. ಅಲ್ಲದೇ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಎಂಎಸ್ ಧೋನಿ ಈಗಾಗಲೇ 170 ಔಟ್ (131 ಕ್ಯಾಚ್‌ಗಳು ಮತ್ತು 39 ಸ್ಟಂಪಿಂಗ್) ಮಾಡುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಔಟ್ ಮಾಡಿದ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಆರ್‌ಸಿಬಿಯ ದಿನೇಶ್ ಕಾರ್ತಿಕ್ 159 ಔಟ್ ಮಾಡುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ಎಂಎಸ್ ಧೋನಿ ಅತ್ಯುತ್ತಮ ಫಿನಿಶರ್ ಆಗಿದ್ದಾರೆ ಮತ್ತು ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ. ಶಾಂತ ಸ್ವಭಾವರಾದ ಎಂಎಸ್ ಧೋನಿ ಮೈದಾನದಲ್ಲಿ ಉತ್ತಮ ರಣತಂತ್ರದ ಮೂಲಕ ಎದುರಾಳಿಗಳನ್ನು ಕಟ್ಟಿಹಾಕುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕು ಐಪಿಎಲ್ ಟ್ರೋಫಿಗಳಿಗೆ ಮುನ್ನಡೆಸಿದ್ದಾರೆ. ಇದೇ ವೇಳೆ ಐಪಿಎಲ್ ನಿವೃತ್ತಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಜಂಟಿ-ದಾಖಲೆ ಐದನೇ ಟ್ರೋಪಿ ಎತ್ತಿ ಹಿಡಿಯಲು ಎದುರು ನೋಡುತ್ತಿದ್ದಾರೆ.