
ಮುಂಬೈ, ಮೇ 17: ಕೀರನ್ ಪೊಲಾರ್ಡ್ ಅರ್ಧ ಶತಕ, ಜಸ್ ಪ್ರೀತ್ ಬುಮ್ರಾ ಬೌಲಿಂಗ್ ದಾಳಿಯ ನೆರವಿನಿಂದ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ 3 ರನ್ ರೋಜಕ ಜಯ ಗಳಿಸಿದೆ.
ಮುಂಬೈ ನೀಡಿದ್ದ 187 ರನ್ ಗುರಿ ಬೆನ್ನಟ್ಟಿದ ಪಂಜಾಬ್ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ (94/60) ಹೊರತಾಗಿಯೂ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಪೇರಿಸಿ ಮುಂಬೈ ಎದುರು ತಲೆ ಬಾಗಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ನಿಂದ ಸೂರ್ಯಕುಮಾರ್ ಯಾದವ್ 27 (15), ಎವಿನ್ ಲೆವಿಸ್ 9 (7), ಇಶಾನ್ ಕಿಶನ್ 20 (12), ನಾಯಕ ರೋಹಿತ್ ಶರ್ಮ 6 (10), ಹಾರ್ದಿಕ್ ಪಾಂಡ್ಯ 9 (12) ರನ್ ಗಳಿಸಿ ಬೇಗನೆ ಪೆವಿಲಿಯನ್ ದಾರಿ ಹಿಡಿದರು.
ಅನಂತರ ಬ್ಯಾಟ್ ಎತ್ತಿಕೊಂಡ ಬೆನ್ ಕಟಿಂಗ್ 4 (7), ಮೆಕ್ಲೆನಘನ್ ಅಜೇಯ 11 (7) ಮತ್ತು ಮಾಯಾಂಕ್ ಮಾರ್ಕಂಡೆ ಅಜೇಯ 7 (5) ರನ್ ಕೊಡುಗೆಯೂ ಮುಂಬೈ ಇಂಡಿಯನ್ ತಂಡವನ್ನು ಅಷ್ಟೇನೂ ಬೆಂಬಲಿಸಲಿಲ್ಲ.
ಆದರೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 32 (23) ಮತ್ತು ಕೀರನ್ ಪೊಲಾರ್ಡ್ 50 (23) ರನ್ ಸಹಾಯದಿಂದ ಮಂಬೈ ಒಟ್ಟು 20 ಓವರ್ ಗಳಲ್ಲಿ 8 ವಿಕೆಟ್ ಕಳೆದು 186 ರನ್ ಪೇರಿಸಿ ಪಂಜಾಬ್ ಗೆ 187 ರನ್ ಗುರಿ ನೀಡಿತ್ತು.
ಚೇಸಿಂಗ್ ಗೆ ಇಳಿದ ಪಾಂಜಾಬ್ ತಂಡದಿಂದ ರಾಹುಲ್ 94 ರನ್ ಮತ್ತು ಆರನ್ ಫಿಂಚ್ 46 (35) ರನ್ ಕೊಡುಗೆ ಬಿಟ್ಟರೆ ಮತ್ತೆ ಯಾರೂ ಗಮನಾರ್ಹ ರನ್ ಗಳಿಸದಿದ್ದಿದ್ದು ಪಂಜಾಬ್ ಸೋಲಿನ ಬೆಲೆ ತೆರುವಂತೆ ಮಾಡಿತು.
ಅಕ್ಸರ್ ಪಟೇಲ್ (10/8) ಪಂಜಾಬ್ ತಂಡವನ್ನು ಗೆಲ್ಲಿಸುವ ಪ್ರಯತ್ನ ನಡೆಸಿದರಾದರೂ ಕೊನೇ ಓವರ್ ನಲ್ಲಿ ತಂಡಕ್ಕೆ ಅಂದುಕೊಂಡಷ್ಟು ರನ್ ಕದಿಯಲು ಸಾಧ್ಯವಾಗಲಿಲ್ಲ. ಪಂಜಾಬ್ 3 ರನ್ ನಿಂದ ಮುಂಬೈ ಎದುರು ಶರಣಾಯಿತು.
15 ರನ್ ನೀಡಿ 3 ವಿಕೆಟ್ ಕೆಡವಿದ ಮುಂಬೈ ಇಂಡಿಯನ್ಸ್ ನ ಜಸ್ ಪ್ರೀತ್ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.