ಮುಂದಿನ ವರ್ಷದ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಕಣಕ್ಕಿಳಿಯುವುದೇ ನನ್ನ ಗುರಿ ಎಂದ ಶಿಖರ್ ಧವನ್

ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಪ್ರಕಟವಾಗಿರುವ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಕಮ್ ಬ್ಯಾಕ್ ಮಾಡಿರುವ ಅನುಭವಿ ಆಟಗಾರ ಶಿಖರ್ ಧವನ್ ಮುಂದಿನ ವರ್ಷ ಭಾರತ ನೆಲದಲ್ಲಿ ನಡೆಯಲಿರುವ ಐಸಿಸಿ ಏಕದಿನ ಪುರುಷರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದು ತಮ್ಮ ಗುರಿ ಎಂಬುದನ್ನು ತಿಳಿಸಿದ್ದಾರೆ.
ಸದ್ಯ ಇಂಗ್ಲೆಂಡ್ ವಿರುದ್ಧ ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಡುವ ಬಳಗ ಸೇರಿರುವ ಶಿಖರ್ ಧವನ್ ರೋಹಿತ್ ಶರ್ಮಾ ಜತೆ ಹಲವು ಪಂದ್ಯಗಳ ನಂತರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.
ಹೀಗೆ ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಮಾತ್ರ ಶಿಖರ್ ಧವನ್ ಅವರಿಗೆ ಮುಂಬರುವ ಸರಣಿಗಳಲ್ಲಿ ಹಾಗೂ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಲಿದ್ದು, ಈ ಕುರಿತಾಗಿ ಈ ಹಿರಿಯ ಕ್ರಿಕೆಟಿಗ ಈಗಾಗಲೇ ಎಚ್ಚೆತ್ತುಕೊಂಡು ತಮ್ಮ ಮುಂದಿನ ಗುರಿ ಮತ್ತು ಉದ್ದೇಶವೇನೆಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ನನ್ನ ಗುರಿ
ಮುಂದಿನ ವರ್ಷ ಭಾರತ ನೆಲದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಬೇಕು ಎಂಬುದು ತನ್ನ ಉದ್ದೇಶ ಎಂಬುದನ್ನು ಶಿಖರ್ ಧವನ್ ಮುಕ್ತಕಂಠದಿಂದ ಹೇಳಿಕೊಂಡಿದ್ದಾರೆ. "ಮುಂದಿನ ವರ್ಷದ ವಿಶ್ವಕಪ್‌ನತ್ತ ನನ್ನ ಗಮನ ಖಂಡಿತವಾಗಿಯೂ ಇದೆ ಮತ್ತು ಅದಕ್ಕಾಗಿ ಭಾರತಕ್ಕಾಗಿ ಸಾಧ್ಯವಾದಷ್ಟು ಪಂದ್ಯಗಳನ್ನು ಆಡಲು ಮತ್ತು ಅಲ್ಲಿ ಉತ್ತಮ ಪ್ರದರ್ಶನ ನೀಡಲು ನಾನು ಬಯಸುತ್ತೇನೆ. ಇದರ ನಡುವೆ ಐಪಿಎಲ್ ಕೂಡ ಇರುತ್ತದೆ, ಹಾಗಾಗಿ ಅಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಮತ್ತು ದೇಶೀಯ ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡುತ್ತೇನೆ" ಎಂದು ಶಿಖರ್ ಧವನ್ ಹೇಳಿದ್ದಾರೆ.

ದೊಡ್ಡ ರನ್ ಬಾರಿಸುವ ಮುನ್ಸೂಚನೆ ನೀಡಿದ ಶಿಖರ್ ಧವನ್
ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಶಿಖರ್ ಧವನ್ ಈ ಪ್ರವಾಸಕ್ಕಾಗಿ ಅಗತ್ಯವಿದ್ದ ಅಂಶಗಳನ್ನು ನಾನು ಅರಿತಿದ್ದು, ಅಭ್ಯಾಸ ನಡೆಸಿ ಸಿದ್ಧಗೊಂಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲಿದ್ದು, ಆರಂಭಿಕನಾಗಿ ತನಗಿರುವ ಅನುಭವವನ್ನು ಉಪಯೋಗಿಸಿ ದೊಡ್ಡ ರನ್ ಕಲೆ ಹಾಕುತ್ತೇನೆ ಎಂದು ಶಿಖರ್ ಧವನ್ ಹೇಳಿಕೊಂಡಿದ್ದಾರೆ.

ಶಿಖರ್ ಧವನ್ ಏಕದಿನ ಅಂಕಿ ಅಂಶ
ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇಲ್ಲಿಯವರೆಗೂ ಒಟ್ಟು 149 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದು, 6284 ರನ್‌ಗಳನ್ನು ಬಾರಿಸಿದ್ದಾರೆ. ಶಿಖರ್ ಧವನ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ 35 ಅರ್ಧಶತಕ ಹಾಗೂ 7 ಶತಕಗಳನ್ನೂ ಸಹ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications