IND vs NZ: ಟಿ20ನಲ್ಲಿ ನಂ.1 ಪಟ್ಟ ಪಡೆದಿರುವ ಸೂರ್ಯಕುಮಾರ್ ಮುಂದಿನ ಗುರಿ ಇದು!

ವಿಶ್ವ ನಂ.1 ಟಿ20 ಬ್ಯಾಟ್ಸ್‌ಮನ್ ಎಂಬ ಪಟ್ಟ ಹೊಂದಿರುವ ಭಾರತದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ಮುಂದಿರುವ ಗುರಿಯನ್ನು ಬಹಿರಂಗಪಡಿಸಿದ್ದಾರೆ. ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಮತ್ತೊಂದು ಅಮೋಘ ಶತಕ ಬಾರಿಸಿ ಮಿಂಚಿದರು.
ನಂ.1 ಟಿ20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಭಾನುವಾರ (ನವೆಂಬರ್ 20) ಪಂದ್ಯ ಮುಗಿದ ಬಳಿಕ ಮಾತನಾಡಿ, ಭಾರತವನ್ನು ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ರೆಡ್-ಬಾಲ್ ಕ್ರಿಕೆಟ್‌ಗೆ ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದ ನಂತರ ಮೌಂಟ್ ಮೌಂಗನುಯಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೂರ್ಯಕುಮಾರ್ ಯಾದವ್, "ವೋ ಟೈಮ್ ಭಿ ಆ ರಾ ಹೈ...' (ಆ ಸಮಯ ಶೀಘ್ರದಲ್ಲೇ ಬರುತ್ತದೆ) ಎಂದರು.

ಟೆಸ್ಟ್ ಕ್ಯಾಪ್ ಶೀಘ್ರದಲ್ಲೇ ಪಡೆಯಲಿದ್ದೇನೆ
ನಾವು ಭಾರತದಲ್ಲಿ ಕೆಂಪು ಚೆಂಡಿನೊಂದಿಗೆ ಕ್ರಿಕೆಟ್ ಪ್ರಾರಂಭಿಸುತ್ತೇವೆ. ನಾನೂ ಸಹ ಕೆಂಪು ಚೆಂಡಿನ ಆಟವನ್ನು ಆನಂದಿಸುತ್ತೇನೆ. ನಾನು ಮುಂಬೈ ಪರ ಪ್ರಥಮ ದರ್ಜೆ ಕ್ರಿಕೆಟ್ ಅನ್ನು ರೆಡ್-ಬಾಲ್ ಮಾದರಿಯಲ್ಲಿ ಆಡಿದ್ದೇನೆ. ನನಗೆ ಆ ಸ್ವರೂಪದ ಬಗ್ಗೆ ಕಲ್ಪನೆ ಇದೆ ಮತ್ತು ಟೆಸ್ಟ್ ಕ್ಯಾಪ್ ಶೀಘ್ರದಲ್ಲೇ ಪಡೆಯಲಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಸೂರ್ಯಕುಮಾರ್ ಯಾದವ್ ಅವರು ಸದ್ಯ ವಿಶ್ವ ಟಿ20 ಕ್ರಿಕೆಟ್‌ನ ಮಿನುಗುವ ನಕ್ಷತ್ರವಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ರನ್ ಗಳಿಸಿದರು ಮತ್ತು ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದನ್ನು ಪದಾರ್ಪಣೆ ಮಾಡಿದ ಕೇವಲ ಒಂದು ವರ್ಷದಲ್ಲಿ ಈ ಸಾಧನೆ ಮಾಡಿದ್ದಾರೆ ಎನ್ನುವುದು ವಿಶೇಷ.

ಸೂರ್ಯಕುಮಾರ್ ವಿಶ್ವದ ಅತ್ಯುತ್ತಮ ಬ್ಯಾಟರ್ ಎಂದು ಕೊಹ್ಲಿ
"ಕ್ರೀಸ್‌ನಲ್ಲಿದ್ದಾಗ ಆತ್ಮವಿಶ್ವಾಸ ಇರುತ್ತದೆ, ಆದರೆ ಅದರಿಂದ ಸಂತೃಪ್ತರಾಗಲು ಬಯಸುವುದಿಲ್ಲ. ರನ್‌ಗಳು ಬರುತ್ತಿರುವಾಗ ಆತ್ಮತೃಪ್ತಿ ಹರಿದಾಡದಂತೆ ಎಚ್ಚರ ವಹಿಸಬೇಕು. ನಾನು ಕ್ರಿಕೆಟ್ ಆಡದ ದಿನಗಳಲ್ಲಿ ನನ್ನ ಕುಟುಂಬದ ಸದಸ್ಯರೊಂದಿಗೆ ಮಾತನಾಡುವುದು ಮುಖ್ಯವೆನಿಸುತ್ತದೆ. ಏಕೆಂದರೆ ಅವರು ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ. ಅವರು ನನ್ನನ್ನು ಸಂತೋಷದ ವಲಯದಲ್ಲಿ ಇರಿಸುತ್ತಾರೆ," ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದರು.
ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅನ್ನು ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಶ್ಲಾಘಿಸಿದ್ದು, "ಆತ ವಿಶ್ವದ ಅತ್ಯುತ್ತಮ ಬ್ಯಾಟರ್ ಎಂಬುದನ್ನು ತೋರಿಸುತ್ತದೆ. ಈ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಿಲ್ಲ, ಆದರೆ ಇದು ಸೂರ್ಯಕುಮಾರ್ ಯಾದವ್ ಅವರ ಮತ್ತೊಂದು ವಿಡಿಯೋ ಗೇಮ್ ಇನ್ನಿಂಗ್ಸ್ ಎಂದು ನನಗೆ ಖಾತ್ರಿಯಿದೆ," ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಜೊತೆ ಆಡಲು ಇಷ್ಟಪಡುತ್ತೇನೆ
ಸೂರ್ಯಕುಮಾರ್ ಯಾದವ್ ಅವರು ಕೊಹ್ಲಿಯ ಮಾತುಗಳನ್ನು ಅಭಿನಂದನೆಯಾಗಿ ತೆಗೆದುಕೊಳ್ಳುವುದಾಗಿ ಮತ್ತು ಅಂತಹ ಪ್ರದರ್ಶನಗಳನ್ನು ನೀಡಲು ಇಷ್ಟಪಡುತ್ತೇನೆ ಎಂದರು.
"ವಿರಾಟ್ ಕೊಹ್ಲಿ ಜೊತೆ ಆಡಲು ಇಷ್ಟಪಡುತ್ತೇನೆ. ಅವರೊಂದಿಗೆ ಬ್ಯಾಟಿಂಗ್ ಮಾಡುವಾಗ ಸಾಕಷ್ಟು ರನ್ ಮಾಡಬೇಕು ಎಂದೆನಿಸುತ್ತಿದೆ. ನಾವು ಒಟ್ಟಿಗೆ ಬ್ಯಾಟಿಂಗ್ ಮಾಡುವುದನ್ನು ಆನಂದಿಸುತ್ತೇವೆ. ಬ್ಯಾಟಿಂಗ್ ಮಾಡುವಾಗ ಆಟವನ್ನು ಆನಂದಿಸಲು ಅವರು ನನಗೆ ಹೇಳುತ್ತಾರೆ. ನಾನು ಅವರ ಮಾತನ್ನು ಅಭಿನಂದನೆಯಾಗಿ ಸ್ವೀಕರಿಸುತ್ತೇನೆ ಮತ್ತು ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ," ಎಂದು ಸೂರ್ಯಕುಮಾರ್ ಉತ್ತರಿಸಿದರು.
ತಾವು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದ ಸಮಯದ ಮಾತನಾಡಿದ ಸೂರ್ಯಕುಮಾರ್ ಯಾದವ್, "ನಾನು ಆ ದಿನಗಳನ್ನು ಹಿಂತಿರುಗಿ ನೋಡುತ್ತೇನೆ. ಅದು ಹೇಗೆ ಬದಲಾಗಿದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ನಾನು ಉತ್ತಮಗೊಳ್ಳುವ ಮಾರ್ಗಗಳ ಬಗ್ಗೆ ನಿರಂತರವಾಗಿ ಯೋಚಿಸುತ್ತೇನೆ. ಸುಧಾರಿತ ಆಹಾರ, ತರಬೇತಿ, ನಿದ್ರೆ ಇತ್ಯಾದಿಗಳು ನನ್ನ ಆಟಕ್ಕೆ ಮತ್ತು ಯಶಸ್ಸಿಗೆ ಸಹಾಯವಾಗಿವೆ," ಎಂದು ಹೇಳಲು ಮರೆಯಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications