ಐಪಿಎಲ್‌ನಲ್ಲಿ ಎಂಎಸ್ ಧೋನಿ ಎಂದರೆ ಚೆನ್ನೈ ಸೂಪರ್ ಕಿಂಗ್ಸ್, ಸಿಎಸ್‌ಕೆ ಎಂದರೆ ಎಂಎಸ್ ಧೋನಿ ಎಂದು ಕರೆಯಬಹುದು. ಭಾರತದ ಮಾಜಿ ನಾಯಕ ಎಂಎಸ್ ಧೋನಿ 2008ರಿಂದ ಸಿಎಸ್‌ಕೆ ಫ್ರಾಂಚೈಸಿಯನ್ನು ಮುನ್ನಡೆಸುತ್ತಿದ್ದಾರೆ ಮತ್ತು ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಸಮಬಲ ದಾಖಲೆಯ ಐದು ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ.
ಐಪಿಎಲ್ 2023ರಲ್ಲಿ ಸಿಎಸ್‌ಕೆ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿತು.

ನಾಯಕ ಎಂಎಸ್ ಧೋನಿ ನಿಸ್ಸಂದೇಹವಾಗಿ ತಂಡದ ಸಾರ್ವಕಾಲಿಕ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರ ಬದಲಿಗೆ ಬೇರೆ ಆಟಗಾರನನ್ನು ಹುಡುಕುವುದು ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿದೆ.
ಆದರೆ, ಸಿಎಸ್‌ಕೆ ತಂಡದ ಮಾಜಿ ಬ್ಯಾಟರ್ ಅಂಬಟಿ ರಾಯುಡು ಅವರು ಯಾವ ಆಟಗಾರ ತಂಡದ ಭವಿಷ್ಯದ ನಾಯಕನಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2022ರ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಸಿಎಸ್‌ಕೆ ಖರೀದಿಸಿದ ನಂತರ, ಅವರು ಎಂಎಸ್ ಧೋನಿಯ ಉತ್ತರಾಧಿಕಾರಿಯಾಗಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು.

ಆದರೆ, ಇದೀಗ ಅಂಬಟಿ ರಾಯುಡು ಅವರು ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು ಎಂಎಸ್ ಧೋನಿಗೆ ಪರಿಪೂರ್ಣ ಬದಲಿಯಾಗಿ ಆಯ್ಕೆ ಮಾಡಿದ್ದಾರೆ.
"ಸಿಎಸ್‌ಕೆ ಭವಿಷ್ಯಕ್ಕೆ ಬಂದರೆ, ರುತುರಾಜ್ ಗಾಯಕ್ವಾಡ್‌ಗೆ ಉತ್ತಮ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಅವನಲ್ಲಿ ನಾಯಕತ್ವದ ಗುಣಗಳಿವೆ. ಹಾಗಾಗಿ ಮಾಹಿ ಭಾಯ್ ನಂತರ, ರುತುರಾಜ್ ಮುಂದಿನ 7-8 ಅಥವಾ 10 ವರ್ಷಗಳವರೆಗೆ ತಂಡವನ್ನು ಮುನ್ನಡೆಸಬಹುದು," ಎಂದು ಅಂಬಟಿ ರಾಯುಡು ತಿಳಿಸಿದ್ದಾರೆ.
"ರುತುರಾಜ್ ಅವರು ಸದ್ಯ ಮಾಹಿ ಭಾಯ್ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರಂತಹ ಉತ್ತಮ ಕೈಯಲ್ಲಿದ್ದಾರೆ. ಆತನು ಕೂಡ ಶಾಂತ, ಡೌನ್ ಟು ಅರ್ಥ್ ಮತ್ತು ಅತ್ಯಂತ ಪ್ರತಿಭಾವಂತ ಆಟಗಾರ," ಎಂದು ಅಂಬಟಿ ರಾಯುಡು ಬಿಹೈಂಡ್ ವುಡ್ಸ್ ಟಿವಿಯೊಂದಿಗೆ ಮಾತನಾಡುವಾಗ ಹೇಳಿದರು.
"ಭಾರತ ತಂಡವು ರುತುರಾಜ್ ಗಾಯಕ್ವಾಡ್‌ರನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತದೆ. ಆತ ಭಾರತಕ್ಕಾಗಿ ಪ್ರತಿ ಸ್ವರೂಪವನ್ನು ಆಡಬೇಕು," ಅಂಬಟಿ ರಾಯುಡು ಅಭಿಪ್ರಾಯಪಟ್ಟರು.
ಐಪಿಎಲ್ 2023ರಲ್ಲಿ ರುತುರಾಜ್ ಗಾಯಕ್ವಾಡ್ ಸಿಎಸ್‌ಕೆ ತಂಡದ ಪರ ಬ್ಯಾಟ್‌ನೊಂದಿಗೆ ಅಸಾಧಾರಣ ಫಾರ್ಮ್‌ನಲ್ಲಿದ್ದರು. ಆಡಿದ 16 ಪಂದ್ಯಗಳಲ್ಲಿ ಒಂದು ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 590 ರನ್‌ಗಳ ಬೃಹತ್ ಮೊತ್ತವನ್ನು ಹೊಡೆದರು.
2023ರ ಏಷ್ಯನ್ ಗೇಮ್ಸ್‌ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ಭಾಗವಹಿಸಲಿರುವ ಭಾರತ ತಂಡದ ನಾಯಕನಾಗಿ ಸಿಎಸ್‌ಕೆ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು ನೇಮಿಸಲಾಗಿದೆ.
ಏಷ್ಯನ್ ಕ್ರೀಡಾಕೂಟ ಏಕದಿನ ವಿಶ್ವಕಪ್ ವೇಳಾಪಟ್ಟಿಯೊಂದಿಗೆ ಹೊಂದಿಕೆಯಾಗುತ್ತಿರುವ ಕಾರಣ, ಬಿಸಿಸಿಐ ಏಷ್ಯನ್ ಗೇಮ್ಸ್‌ಗಾಗಿ ಎರಡನೇ ಶ್ರೇಣಿಯ ಭಾರತೀಯ ತಂಡವನ್ನು ಆಯ್ಕೆ ಮಾಡಿದೆ. ಟಿ20 ಮಾದರಿಯ ಪುರುಷರ ಕ್ರಿಕೆಟ್ ಟೂರ್ನಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ.
26 ವರ್ಷದ ರುತುರಾಜ್ ಗಾಯಕ್ವಾಡ್ ಪ್ರಸ್ತುತ, ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಭಾರತದ ಟೆಸ್ಟ್ ತಂಡದಲ್ಲಿದ್ದಾರೆ. ಜುಲೈ 27ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲೂ ಅವರು ಸ್ಥಾನ ಪಡೆದಿದ್ದಾರೆ.