2023ರ ವಿಶ್ವಕಪ್‌ನಲ್ಲಿ ಅತ್ಯಂತ ದುರ್ಬಲ ಫೀಲ್ಡಿಂಗ್ ತಂಡವನ್ನು ಹೆಸರಿಸಿದ ಗೌತಮ್ ಗಂಭೀರ್
ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅವರು ಕ್ರಿಕೆಟ್ ವಿಷಯಗಳ ಬಗ್ಗೆ ಪ್ರಾಮಾಣಿಕವಾಗಿ ಮತ್ತು ನೇರವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಯಾರದೇ ಮತ್ತು ಯಾವುದೇ ಮುಲಾಜು ಇಟ್ಟುಕೊಳ್ಳದೇ ಕ್ರಿಕೆಟ್ ವಿಶ್ಲೇಷಣೆ ಮಾಡುತ್ತಾರೆ.
ಇದೇ ವೇಳೆ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅತ್ಯಂತ ದುರ್ಬಲ ಫೀಲ್ಡಿಂಗ್ ತಂಡವನ್ನು ಗೌತಮ್ ಗಂಭೀರ್ ಸೂಚಿಸಿದ್ದಾರೆ. ಅದು ಬೇರೆ ಯಾವುದಲ್ಲ, ಅಫ್ಘಾನಿಸ್ತಾನ ವಿರುದ್ಧ ಹೀನಾಯವಾಗಿ ಸೋತ ಪಾಕಿಸ್ತಾನ ತಂಡ.

ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿ ಸೋಲು ಅನುಭವಿಸಿತು. ಚೆನ್ನೈನಲ್ಲಿ ನಡೆದ ಈ ಪಂದ್ಯವು ಐತಿಹಾಸಿಕ ಕ್ಷಣವನ್ನು ಗುರುತಿಸಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡವು ಪಾಕಿಸ್ತಾನದ ವಿರುದ್ಧ ಮೊದಲ ಬಾರಿಗೆ ಗೆಲುವು ಸಾಧಿಸಿದೆ.
ಎರಡು ಆರಂಭಿಕ ಗೆಲುವುಗಳ ನಂತರ, ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಇದು ಪಾಕಿಸ್ತಾನ ತಂಡದ ಸತತ ಮೂರನೇ ಸೋಲಾಗಿದೆ. ಪಾಕಿಸ್ತಾನ ತಂಡದ ಕಳಪೆ ಫೀಲ್ಡಿಂಗ್ ಪ್ರದರ್ಶನವು ಅವರ ಸೋಲಿಗೆ ಪ್ರಮುಖ ಅಂಶವಾಗಿದೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಮೊಯಿನ್ ಖಾನ್ ಮತ್ತು ವಾಸಿಂ ಅಕ್ರಮ್ ಈ ಕಳಪೆ ಪ್ರದರ್ಶನಕ್ಕೆ ಅಸಮರ್ಪಕ ಯೋಜನೆ ಮತ್ತು ಆಟಗಾರರ ಫಿಟ್‌ನೆಸ್ ಮಾನದಂಡಗಳಿಗೆ ಒತ್ತು ನೀಡದಿರುವುದು ಕಾರಣವಾಗಿದೆ ಎಂದು ಟೀಕಿಸಿದ್ದಾರೆ.

ಸ್ಪಿನ್‌ನೊಂದಿಗೆ ಅಫ್ಘಾನಿಸ್ತಾನ ತಂಡದ ಮೇಲೆ ಒತ್ತಡ ಹೇರಲು ತಂಡದ ಅಸಮರ್ಥತೆಯನ್ನು ಸ್ವತಃ ಪಾಕಿಸ್ತಾನದ ನಾಯಕ ಬಾಬರ್ ಅಜಂ ಎತ್ತಿ ತೋರಿಸಿದರು. ತಾವು ಮಧ್ಯಮ ಓವರ್‌ಗಳಲ್ಲಿ ತಂಡದ ವಿಕೆಟ್‌ಗಳನ್ನು ಪಡೆಯುವಲ್ಲಿ ವಿಫಲವಾದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಪ್ರಸ್ತುತ ವಿಶ್ವಕಪ್‌ನಲ್ಲಿ ಪಾಕಿಸ್ತಾನವು ದುರ್ಬಲ ಫೀಲ್ಡಿಂಗ್ ಘಟಕವನ್ನು ಹೊಂದಿದೆ ಮತ್ತು ಏಷ್ಯಾ ಕಪ್‌ನಿಂದಲೂ ಈ ಸಮಸ್ಯೆ ಮುಂದುವರಿದಿದೆ ಎಂದು ಹೇಳಿದರು.
"ಏಷ್ಯಾ ಕಪ್‌ನಲ್ಲಿಯೂ ನಾವು ಪಾಕಿಸ್ತಾನದ ಫೀಲ್ಡಿಂಗ್ ಬಗ್ಗೆ ಚರ್ಚಿಸಿದ್ದೇವೆ. ನೀವು ಬೌಲಿಂಗ್ ಅಥವಾ ಬ್ಯಾಟಿಂಗ್‌ನಲ್ಲಿ ನಿರ್ಲಕ್ಷ್ಯ ತೋರಬಹುದು, ಆದರೆ ಫೀಲ್ಡಿಂಗ್‌ನಲ್ಲಿ ಅಲ್ಲ,"ಎಂದು ಕಿಡಿಕಾರಿದರು.
2023ರ ಏಷ್ಯಾ ಕಪ್‌ನಿಂದಲೂ ಈ ಸಮಸ್ಯೆ ಮುಂದುವರಿದಿದ್ದು, ಪಾಕಿಸ್ತಾನ ತಂಡ ಸುಧಾರಿಸಿಲ್ಲ. ನನ್ನ ಅಭಿಪ್ರಾಯದಲ್ಲಿ ಈ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಅತ್ಯಂತ ದುರ್ಬಲ ಫೀಲ್ಡಿಂಗ್ ತಂಡವನ್ನು ಹೊಂದಿದೆ ಎಂದು ಗೌತಮ್ ಗಂಭೀರ್ ತಿಳಿಸಿದರು.
ಪಾಕಿಸ್ತಾನದ ಆಲ್‌ರೌಂಡರ್ ಇಫ್ತಿಕರ್ ಅಹ್ಮದ್ ತಮ್ಮ ಸ್ಪಿನ್ನರ್‌ಗಳು ನಿಷ್ಪರಿಣಾಮಕಾರಿಯಾಗಿದ್ದಾರೆ. ಇದು ವಿಶ್ವಕಪ್‌ನಲ್ಲಿ ಸರಣಿ ಸೋಲುಗಳಿಗೆ ಕಾರಣವಾಯಿತು ಎಂದು ಒಪ್ಪಿಕೊಂಡರು.
ಪಾಕಿಸ್ತಾನ ತಂಡವು ಸಾಂಪ್ರದಾಯಿಕ ಫಿಂಗರ್ ಸ್ಪಿನ್ನರ್‌ನ ಕೊರತೆಯನ್ನು ಹೊಂದಿದೆ, ಆಲ್‌ರೌಂಡರ್‌ಗಳಾದ ಇಫ್ತಿಕರ್ ಅಹ್ಮದ್ ಮತ್ತು ಮೊಹಮ್ಮದ್ ನವಾಜ್ ಸ್ಪಿನ್ ಬೌಲಿಂಗ್ ಹಂಚಿಕೊಂಡರು.
ಪಾಕಿಸ್ತಾನ ಬೌಲಿಂಗ್ ತಂತ್ರದಲ್ಲಿನ ಈ ದೌರ್ಬಲ್ಯವನ್ನು ಅಫ್ಘಾನಿಸ್ತಾನವು ಸದ್ಬಳಕೆ ಮಾಡಿಕೊಂಡಿತು. ಇದು ಪಾಕಿಸ್ತಾನ ನೀಡಿದ್ದ 283 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು. ಇದು ಏಕದಿನ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನದ ಅತ್ಯಧಿಕ ಚೇಸಿಂಗ್ ಆಗಿ ಗುರುತಿಸಿಕೊಂಡಿತು.
ಇಬ್ಬನಿ ಇಲ್ಲದ ಟ್ರ್ಯಾಕ್‌ನಲ್ಲಿ ಯಾವುದೇ ವಿಕೆಟ್ ಕೀಳಲು ಸಾಧ್ಯವಾಗದ ಪಾಕಿಸ್ತಾನದ ಸ್ಪಿನ್ ಬೌಲಿಂಗ್ ಮತ್ತೊಂದು ಆತಂಕಕಾರಿಯಾಗಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications